ಕರಾವಳಿ

ಹವಾಮಾನಕ್ಕೆ ತಕ್ಕಂತೆ  ಅನುಸರಿಸಬೇಕಾದ ಜೀವನ ಶೈಲಿ

Pinterest LinkedIn Tumblr
ಜೀವನದಲ್ಲಿ ಅತಿ ದೊಡ್ಡ  ವರ ಅಥವಾ ಸುಖ ಎಂದರೆ ಆರೋಗ್ಯಪೂರ್ಣವಾದ ಆಯುಷ್ಯ. ಈ ಸುಂದರವಾದ ಜೀವನವನ್ನು ಅನುಭವಿಸಲು ಇದು ಅತೀ ಮುಖ್ಯ. ಪ್ರಕೃತಿ ನಮಗೆ ಬೇಕಾಗಿರುವ ಎಲ್ಲವನ್ನೂ ಕೊಟ್ಟಿದೆ. ಆರೋಗ್ಯಕರವಾದ ನೀರು, ಆಹಾರ, ಸರಳ, ಸುಂದರ  ಜೀವನ ಶೈಲಿ ಇತ್ಯಾದಿ. ಆದರೆ, ನಮ್ಮದೇ ದುಷ್ಕ ೃತ್ಯಗಳಿಂದಾಗಿ ಕಲುಷಿತವಾದ ನೀರು, ಆಹಾರ, ಗಾಳಿ ಇವುಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತಿವೆ. ಹಾಗೆಯೇ ನಮ್ಮ ಬದಲಾಗುತ್ತಿರುವ ಜೀವನ ಶೈಲಿಯು ಈ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಇಂಥ ಸಂದರ್ಭದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಸಿದ್ಧ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆಯುರ್ವೇದವು ಇಂತಹ ಒಂದು ಆದರ್ಶ ಜೀವನ ಹಾಗೂ ಆಹಾರ ಪದ್ಧತಿಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಪ್ರಚಾರಪಡಿಸಿದೆ. ಆಯುರ್ವೇದವು ಕೇವಲ ಒಂದು ವೈದ್ಯಕೀಯ ಪದ್ಧತಿಯಾಗಿ ಉಳಿಯದೆ, ತಾನೇ ಒಂದು ಜೀವನ ಶೈಲಿಯೂ ಆಗಿದೆ. ಇಲ್ಲಿ ಪ್ರತಿನಿತ್ಯ ವ್ಯಕ್ತಿಯ ದಿನಚರಿ, ಆತನ ಆಹಾರಕ್ರಮ, ಕಾಲ ಹಾಗೂ ಹವಾಮಾನಕ್ಕೆ ತಕ್ಕಂತೆ ಅವನು ಅನುಸರಿಸಬೇಕಾದ ಜೀವನ ಶೈಲಿಯ ಮಾರ್ಪಾಟು ಗಳ ಬಗ್ಗೆ ಸವಿಸ್ತಾರವಾಗಿ ಉಲ್ಲೇಖೀಸಲಾಗಿದೆ.
ದಿನಚರ್ಯೆ
ವ್ಯಕ್ತಿಯ ದಿನಚರಿ ಪ್ರಾರಂಭವಾಗುವುದು ಮುಂಜಾನೆ ಆತನ ಏಳುವಿಕೆಯಿಂದ. ವ್ಯಕ್ತಿಯು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನವೂ ಬೆಳಗ್ಗೆ ಬೇಗನೆ (ಬ್ರಾಹ್ಮಿಮುಹೂರ್ತ ) ಏಳಬೇಕು. ಹೀಗೆ ಮಾಡುವುದರಿಂದ ದಿನವಿಡೀ ಉಲ್ಲಾಸ  ಹಾಗೂ ಚೈತನ್ಯ ತುಂಬಿರುತ್ತದೆ. ಪ್ರಕೃತಿದತ್ತವಾದ ಶೌಚಕ್ರಿಯೆಗಳನ್ನು ಕ್ಲಪ್ತ ಸಮಯದಲ್ಲಿ ಮುಗಿಸಬೇಕು. ಈ ನೈಸರ್ಗಿಕ ಪ್ರಕ್ರಿಯೆಗಳನ್ನು ಬಲವಂತವಾಗಿ ಹೊರಡಿಸುವುದಾಗಲಿ ಅಥವಾ ತಡೆಯುವದಾಗಲೀ ಸರ್ವಥಾ ಸಲ್ಲದು ಮತ್ತು ಇದೇ ಅನೇಕ ರೋಗಗಳಿಗೆ ಕಾರಣವಾಗಬಲ್ಲದು.
ದಂತಧಾವನ
ಯಾವುದೇ ಆಯುರ್ವೇದೀಯ ಚೂರ್ಣವನ್ನು ಉಪಯೋಗಿಸಿಕೊಂಡು ಹಲ್ಲುಜ್ಜುವುದರಿಂದ ಹಲ್ಲಿನ ಮತ್ತು ವಸಡಿನ ಆರೋಗ್ಯ ಹೆಚ್ಚುತ್ತದೆ. ದಂತಧಾವನವನ್ನು ಮಾಡಲು ಬೇವು, ಹೊಂಗೆ ಖದಿರ ಇತ್ಯಾದಿ ಔಷಧೀಯ ದ್ರವ್ಯಗಳನ್ನು ಉಪಯೋಗಿಸುವುದು ಶ್ರೇಷ್ಠವಾಗಿರುತ್ತದೆ.
ಮುಖ  ಪ್ರಕ್ಷಾಳನ
ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ಶುದ್ಧವಾದ ಜಲ, ನೆಲ್ಲಿಕಾಯಿಯ  ಅಥವಾ  ಅಶ್ವತ್ಥ ವೃಕ್ಷದ ಕಷಾಯವನ್ನು ಪ್ರಾತಃ  ಸಮಯದಲ್ಲಿ ಮುಖ ಪ್ರಕ್ಷಾಳನವನ್ನು ಮಾಡಲು, ಕಣ್ಣನ್ನು ತೊಳೆಯಲು ಉಪಯೋಗಿಸುವುದರಿಂದ ಕಣ್ಣಿಗೆ ಸಂಬಂಧಿಸಿದ,  ಮುಖ, ಚರ್ಮಕ್ಕೆ ಸಂಬಂಧಿಸಿದ ಬಂಗು, ಮೊಡವೆ ಇತ್ಯಾದಿ ತೊಂದರೆಗಳು ಬರದಂತೆ ತಡೆಗಟ್ಟಬಹುದು.  ಶೀತಕಾಲದಲ್ಲಿ ಉಗುರು ಬೆಚ್ಚಗಿನ ನೀರನ್ನೂ ಹಾಗೂ ಉಷ್ಣಕಾಲದಲ್ಲಿ ತಣ್ಣಗಿನ ನೀರನ್ನೂ ಮುಖ ತೊಳೆಯಲು ಉಪಯೋಗಿಸಬಹುದು.
ನಸ್ಯ
ಅಣುತೈಲ ಎನ್ನುವ ತೈಲವನ್ನು ದಿನವೂ ಮೂಗಿಗೆ ಎರಡು ಬಿಂದು ಬಿಡುವುದರಿಂದ ಕುತ್ತಿಗೆಯ ಮೇಲಾºಗಕ್ಕೆ ಸಂಬಂಧಿಸಿದ ಎಲ್ಲ  ಖಾಯಿಲೆಗಳು, ಶಿರಸ್ಸಿಗೆ ಸಂಬಂಧಿಸಿದ ಅನೇಕ ಖಾಯಿಲೆಗಳು ಇಲ್ಲವಾಗುತ್ತವೆ. ಮುಖ್ಯವಾಗಿ ಕಣ್ಣು, ಕಿವಿ, ಮೂಗು, ಶಿರಸ್ಸಿನ ಕಾರ್ಯಕ್ಷಮತೆಯು ಹೆಚ್ಚುವುದಲ್ಲದೆ ಆ ಭಾಗದಲ್ಲಿ ವ್ಯಾಧಿಯು ಬರದಂತೆ ಪ್ರತಿಬಂಧಿಸುತ್ತದೆ.
ಕವಲ/ಗಂಡೂಷ
ಬೆಳಗ್ಗೆ, ಬಾಯಲ್ಲಿ ಔಷಧೀಯ ಎಣ್ಣೆ, ಕಷಾಯ ಅಥವಾ ಕೇವಲ ಎಳ್ಳೆಣ್ಣೆಯನ್ನು ನಿರ್ದಿಷ್ಟ ಸಮಯದವರೆಗೆ ಧಾರಣೆ ಮಾಡುವದರಿಂದ   ಹಲ್ಲು, ವಸಡು ಹಾಗೂ  ಕಿವಿ, ಮೂಗುಗಳಿಗೆ ಬಲವರ್ಧನೆಯಾಗುತ್ತದೆ. ಅಜೀರ್ಣ, ಅಗ್ನಿಮಾಂದ್ಯ ಇತ್ಯಾದಿ ಜೀರ್ಣಾಂಗಕ್ಕೆ ಸಂಬಂಧಿಸಿದ ರೋಗಗಳಲ್ಲಿ ಕೇವಲ ಉಷ್ಣೋದಕದಿಂದ ಕವಲ ಮಾಡುವುದರಿಂದ ಪರಿಹಾರವು ಲಭ್ಯವಾಗುವುದು ನಿಶ್ಚಿತವಾಗಿದೆ.
ಧೂಮಪಾನ
ಆಯುರ್ವೇದೀಯ ಧೂಮಪಾನವು ಕೇವಲ ಔಷಧೀಯ ದ್ರವ್ಯಗಳನ್ನು ಒಳಗೊಂಡಿದ್ದು, ಆರೋಗ್ಯಕ್ಕೆ ಪೂರಕವಾಗಿದೆ. ಪ್ರಸ್ತುತ ಬಹುತೇಕ ಯುವಜನರು ಉಸಿರಾಟಕ್ಕೆ ಸಂಬಂಧಿಸಿದ ಆಸ್ತಮ, ಅಲರ್ಜಿ, ಸೈನಸೈಟಿಸ್‌ ಇತ್ಯಾದಿಗಳಿಂದ ಅನುಭವಿಸುತ್ತಿರುವ ಕಷ್ಟಗಳಿಗೆ ಆಯುರ್ವೇದೋಕ್ತ ಈ ನಸ್ಯ, ಧೂಮಪಾನ ಇತ್ಯಾದಿ ದಿನಚರ್ಯಗಳಿಂದ ದೂರವಾಗಿರುವುದೂ ಒಂದು ಕಾರಣವಾಗಿರಬಹುದು.
ಅಭ್ಯಂಗ 
ನಿತ್ಯವೂ ಸರಿಯಾಗಿ ಹಸಿವೆಯಾಗಲು ಶುರುವಾದ ಅನಂತರ ಆಯುರ್ವೇದೀಯ ಔಷಧೀಯ ಎಣ್ಣೆ, ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಶರೀರದ ಮೇಲೆ ಮೃದುವಾಗಿ ತಿಕ್ಕಿ ಹಚ್ಚುವುದರಿಂದ ಶರೀರದಲ್ಲಿ ಮಾರ್ದವತೆ, ಶಕ್ತಿ, ಉತ್ಸಾಹ, ದೃಢತೆ, ಆಯಾಸದ ಪರಿಹಾರ, ಇಂದ್ರಿಯಗಳಿಗೆ ಬಲ, ಒಳ್ಳೆಯ ನಿದ್ದೆ, ಇತ್ಯಾದಿ ಗುಣಗಳು ಉಂಟಾಗುತ್ತವೆ. ರೋಗ ನಿರೋಧಕ ಶಕ್ತಿಯು ವರ್ಧಿಸುತ್ತದೆ. ಈ ರೀತಿಯ ಗುಣಗಳನ್ನು ಹಲವಾರು ಸಂಶೋಧನೆಗಳು ದೃಢೀಕರಿಸಿವೆ. ಅಭ್ಯಂಗವನ್ನು ತಲೆ ಹಾಗೂ ಪಾದಗಳಿಗೂ ಮಾಡುವುದರಿಂದ ವಿಶೇಷವಾದ ಗುಣವುಂಟಾಗುತ್ತದೆ. (ಅಜೀರ್ಣ, ಜ್ವರ, ನೆಗಡಿ ಇತ್ಯಾದಿ ಸಂದರ್ಭದಲ್ಲಿ ಮಾಡಬಾರದು.)
ವ್ಯಾಯಾಮದ ಪ್ರಾಮುಖ್ಯತೆ
ಯಾವ ಕೆಲಸವನ್ನು ಮಾಡುವುದರಿಂದ ಶಾರೀರಿಕವಾಗಿ ಆಯಾಸ  ಉಂಟಾಗುತ್ತದೆಯೋ,  ಅದುವೇ ವ್ಯಾಯಾಮ. ಬೇರೆ ಬೇರೆ ರೀತಿಯಾದ ಕೆಲಸಗಳು ಅಥವಾ ನಿಜವಾದ ವ್ಯಾಯಾಮಗಳನ್ನೇ ಈ ಉದ್ದೇಶಕ್ಕಾಗಿ ಬಳಸಬಹುದು. ಯೋಗಾಸನಗಳು ನಿಜವಾಗಿಯೂ ಕೇವಲ ವ್ಯಾಯಾಮಕ್ಕಿಂತ ಎಷ್ಟೋ ಪಾಲು ಉತ್ತಮ ಪರಿಣಾಮವನ್ನು ಶರೀರದ ಮೇಲೆ ಬೀರುತ್ತವೆ. ವ್ಯಾಯಾಮ, ಯೋಗಾಸನ, ಪ್ರಾಣಾಯಾಮ, ಧ್ಯಾನ ಇತ್ಯಾದಿಗಳು ಶರೀರದ ಬಲ, ಕರ್ಮ, ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಕಫ‌ ಮತ್ತು ಕೊಬ್ಬಿನ ಅಂಶಗಳನ್ನು ಕರಗಿಸುವುದು, ಆಕರ್ಷಕ ಮೈಕಟ್ಟನ್ನು ಹೊಂದಲು ಸಹಾಯಕವಾಗುವುದಲ್ಲದೇ, ಮಾನಸಿಕ ಸ್ಥೈರ್ಯ, ಏಕಾಗ್ರತೆ ಹಾಗೂ ಶಾಂತಿಯನ್ನೂ ನೀಡುವುವು. ಪ್ರಾಣಾಯಾಮ ಮತ್ತು ಧ್ಯಾನಗಳಿಂದ ಹಲವಾರು ಶಾರೀರಿಕ ಹಾಗೂ ಮಾನಸಿಕ ರೋಗಗಳನ್ನು ಹತೋಟಿಯಲ್ಲಿಡಬಹುದು. ವ್ಯಾಯಾಮವನ್ನು ಶರೀರದ  ಅರ್ಧ ಬಲದಷ್ಟೇ ಮಾಡಬೇಕು.
ಸ್ನಾನ
ಸ್ನಾನವು ಬಲ ಹಾಗೂ ಅಗ್ನಿವರ್ಧಕವಾಗಿದೆ (ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ) ತಲೆಸ್ನಾನವನ್ನು ಯಾವಾಗಲೂ ಸಾಧಾರಣವಾಗಿ ಉಗುರು ಬೆಚ್ಚಗಿನ ಅಥವಾ ತಣ್ಣನೆಯ ನೀರಿನಿಂದ ಮಾಡಬೇಕು. ಆದರೆ ಅಧೋ ಶರೀರವನ್ನು ಅಂದರೆ ಮೈಗೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು  ಉತ್ತಮ. ಆದರೆ ವಾತಾವರಣ ಅಥವಾ ಪರಿಸ್ಥಿತಿಗೆ ತಕ್ಕಂತೆ ಈ ನಿಯಮವನ್ನು ಬದಲಿಸಿಕೊಳ್ಳಬಹುದು. ಕೆಲವೊಮ್ಮೆ ಜ್ವರ, ಭೇದಿ. ಕಿವಿ, ಮೂಗು ಇತ್ಯಾದಿಗಳ ಖಾಯಿಲೆಗಳ ಸಂದರ್ಭದಲ್ಲಿ ಸ್ನಾನವನ್ನು ಮಾಡದಿರುವುದೇ ಉತ್ತಮ.
ಶುಭ್ರವಾದ ವಸ್ತ್ರಧಾರಣೆ
ಮಲಿನವಾದ ವಸ್ತ್ರಧಾರಣೆ ಯಿಂದ ಮನಸ್ಸು ವ್ಯಾಕುಲವಾಗುವುದರ ಜತೆಗೆ ಉತ್ಸಾಹದ ಕೊರತೆಯುಂಟಾಗುತ್ತದೆ. ಶುಭ್ರವಸ್ತ್ರಧಾರಣೆಯಿಂದ ಜೀವನದಲ್ಲಿ ಉತ್ಸಾಹ ತುಂಬುತ್ತದೆ. ಜೀವನೋಪಾಯಕ್ಕಾಗಿ ಯಾವುದೇ ನ್ಯಾಯಯುತವಾದ ಮಾರ್ಗವನ್ನು ಅನುಸರಿಸಬೇಕು. ಕಾಲ ಕಾಲಕ್ಕೆ ಸರಿಯಾಗಿ ಕೂದಲು, ಉಗುರುಗಳನ್ನು ತೆಗೆದು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.
ಭೋಜನ ಕ್ರಮ
ಮೊದಲು ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗಿ ಉದರ ಪ್ರದೇಶದಲ್ಲಿ ಲಘುತ್ವವೂ, ಆಹಾರ ಸೇವನೆಯ ಇಚ್ಛೆಯೂ ಇದ್ದಾಗ, ಪ್ರಕೃತಿದತ್ತವಾದ ಶೌಚಕ್ರಿಯೆಗಳ ಅನಂತರ ಶಾಂತ ಚಿತ್ತದಿಂದ ಏಕಾಗ್ರಮನಸ್ಸಿನಿಂದ, ಭೋಜನವನ್ನು ಆಸ್ವಾದಿಸುತ್ತಾ, ಮೌನವಾಗಿ, ಏಕಾಂತವಾಗಿ ಆಹಾರವನ್ನು ಸೇವಿಸಬೇಕು. ಆರೋಗ್ಯಕರವಾದ, ಸಮತೋಲಿತ ಆಹಾರವನ್ನು ಸೇವಿಸಬೇಕು. ಆಹಾರವನ್ನು ಅತಿಯಾಗಿ ಸೇವಿಸದೆ, ತೃಪ್ತಿಯಾಗುವುದಕ್ಕಿಂತ ಸ್ವಲ್ಪ$ ಕಡಿಮೆ ಸೇವಿಸುವುದರಿಂದ ಆಹಾರವು ಸರಿಯಾಗಿ ಪಚನವಾಗಿ, ಆರೋಗ್ಯವು ಉತ್ತಮವಾಗಿರುತ್ತದೆ.
ಆಹಾರ ಪದ್ಧತಿ
ನಾವು ಉಪಯೋಗಿಸುವ ಆಹಾರವೇ ನಮ್ಮ ಆರೋಗ್ಯದ ಮೂಲ ಕಾರಣ. ಆದ್ದರಿಂದ ಆಹಾರಕ್ರಮದ ಮೇಲೆ ನಮ್ಮ ಗಮನ ಇರುವುದು ಅತೀ ಆವಶ್ಯಕ. ನಮ್ಮ ಆಹಾರವು ನಮಗೆ ಜನ್ಮತಃ ಅಭ್ಯಾಸವಾಗಿರುವ, ಆರೋಗ್ಯಕರವಾಗಿರುವ ಮತ್ತು ಆಯಾ ಪ್ರದೇಶದಲ್ಲಿ ಸಾಮಾನ್ಯವಾಗಿ ಬೆಳೆಯುವ ಹಾಗೂ ಬಳಸಲ್ಪಡುವ ಅಥವಾ ತಯಾರಿಸುವ ಕ್ರಮವನ್ನು ಅನುಸರಿಸಿದರೆ ಉತ್ತಮ. ಆಯುರ್ವೇದದಲ್ಲಿ ಆರೋಗ್ಯವಂತ ವ್ಯಕ್ತಿಯು ಪ್ರತಿನಿತ್ಯ ಸೇವಿಸಬೇಕಾದ ಆಹಾರವನ್ನು ಈ ರೀತಿಯಾಗಿ ಹೇಳಿದ್ದಾರೆ; ಪರಿಪೂರ್ಣ ಸಂತುಲಿತ ಆಹಾರದಲ್ಲಿ ಗೋಧಿ, ಕೆಂಪುಅಕ್ಕಿ, ಹೆಸರುಬೇಳೆ, ತುಪ್ಪ, ಜೇನುತುಪ್ಪ, ಉಪ್ಪು(ಸೈಂಧವ), ನೆಲ್ಲಿಕಾಯಿ, ಹಸುವಿನ ಹಾಲು ಇವುಗಳನ್ನು ಅವಶ್ಯವಾಗಿ ಉಪಯೋಗಿಸಬೇಕು. ಸ್ಥಳೀಯವಾಗಿ ದೊರೆಯುವ ತರಕಾರಿ, ಸೊಪ್ಪು$, ಹಣ್ಣುಗಳನ್ನು ಆವಶ್ಯಕತೆಗೆ ಅನುಸಾರವಾಗಿ ಆರೋಗ್ಯಕರವಾಗಿ ಉಪಯೋಗಿಸಬೇಕು. ಆಹಾರದಲ್ಲಿ ಅತಿಯಾದ ಎಣ್ಣೆಯ ಅಂಶ, ಅತಿಯಾದ ಖಾರ, ಹುಳಿ ಪದಾರ್ಥಗಳನ್ನು ಉಪಯೋಗಿಸಬಾರದು. ಹಿಂಗು, ಶುಂಠಿಗಳನ್ನು ಉಪಯೋಗಿಸಬೇಕು ಹಾಗೆಯೆ ಮೆಣಸು, ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಬೇಕು. ಮೆಂತೆ, ಸಾಂಬಾರ ಬಳ್ಳಿಯ ಸೊಪ್ಪು, ಒಂದೆಲಗ ಇತ್ಯಾದಿಗಳ ತಂಬುಳಿಗಳನ್ನು ಉಪಯೋಗಿಸಬಹುದು. ಊಟದ ನಂತರ ಬೆಣ್ಣೆ ತೆಗೆದ ಮಜ್ಜಿಗೆಯನ್ನು ಉಪಯೋಗಿಸುವುದು ಒಳ್ಳೆಯದು.
ತರಕಾರಿಗಳಲ್ಲಿ ಹೀರೆಕಾಯಿ, ಬೆಂಡೆ, ಪಡುವಲ, ಬೂದುಕುಂಬಳ, ಸೋರೆಕಾಯಿ, ಸುವರ್ಣಗಡೆª, ಈರುಳ್ಳಿ, ಬೆಳ್ಳುಳ್ಳಿ, ಸೊಪ್ಪು-ತರಕಾರಿಗಳನ್ನು ಉಪಯೋಗಿಸುವುದು ಉತ್ತಮ. ಜೀರಿಗೆ, ಕೊತ್ತಂಬರಿ, ಒಳ್ಳೆ ಮೆಣಸು, ಹಿಂಗು, ಸಾಸಿವೆ ಇತ್ಯಾದಿ ಸಾಂಬಾರ ಪದಾರ್ಥಗಳನ್ನು ಆರೋಗ್ಯದ ದೃಷ್ಟಿಯಿಂದ  ಉಪಯೋಗಿಸುವುದು ಉತ್ತಮ.
ಮಾಂಸಾಹಾರಗಳಲ್ಲಿ ಚಿಕನ್‌, ಮಟನ್‌ಗಳು ಉತ್ತಮವಾದ ಆಯ್ಕೆಯಾಗಿರುತ್ತದೆ. ಸೂಪ್‌ ಮತ್ತು ಇವುಗಳ ಸಾಂಬಾರ ರೀತಿಯ ಆಹಾರ ತಯಾರಿಕೆಗಳು ಒಳ್ಳೆಯದಾಗಿದ್ದು  ಹುರಿದ ಅಥವಾ ಕರಿದ ತಿನಿಸುಗಳು ಆರೋಗ್ಯಕ್ಕೆ  ಒಳ್ಳೆಯದಲ್ಲ.
ಬೆಳಗ್ಗಿನ ಉಪಾಹಾರದಲ್ಲಿ ಇಡ್ಲಿ ರೀತಿಯ ಉಗಿಯಲ್ಲಿ ಬೇಯಿಸಿದ  ಆಹಾರವು ಉತ್ತಮವಾಗಿದ್ದು, ಅದೇ ರೀತಿಯಲ್ಲಿ  ದೋಸೆ ಇತ್ಯಾದಿಗಳು ಅಡ್ಡಿ ಇಲ್ಲ. ಬೇಕರಿ ತಿಂಡಿಗಳು, ಕುರುಕಲು ತಿಂಡಿಗಳು, ತಂಪುಪಾನೀಯಗಳು, ಪಿಜಾ, ಬರ್ಗರ್‌ ರೀತಿಯ ಪಾಸ್ಟ್‌ಫ‌ುಡ್‌ಗಳನ್ನು  ಜಿಹ್ವಾಚಾಪಲ್ಯಕ್ಕಾಗಿ ಯಾವಾಗಲಾದರೊಮ್ಮೆ ಮಾತ್ರವೇ ಸೇವಿಸಬಹುದೇ ಹೊರತು ಇವುಗಳ ಖಾಯಂ ಸೇವನೆಯಿಂದ ಬೊಜ್ಜು, ಮಧುಮೇಹ, ರಕ್ತದ ಅತಿ ಒತ್ತಡ,  ಮೂಳೆ-ಸವೆಯುವಿಕೆ ಇತ್ಯಾದಿ ಖಾಯಿಲೆಗಳು ಬರುವುದು ದೃಢಪಟ್ಟಿದೆ.
ನೈತಿಕ ಜೀವನ ಶೈಲಿ – ಮಾನಸಿಕ ಭಾವಗಳು ಮತ್ತು  ಆರೋಗ್ಯ 
ಸರಳ, ಸಂತೃಪ್ತ ಜೀವನ ಶೈಲಿಯೇ ಉತ್ತಮ ಆರೋಗ್ಯದ ಗುಟ್ಟು. ಸದಾ ನೆಮ್ಮದಿಯ ಭಾವನೆ, ಪರೋಪಕಾರಿ ಪ್ರವೃತ್ತಿ, ಸರಳ ಹಾಗೂ ಹಿತಮಿತ ಹಾಗೂ ಮಧುರವಾದ ಮಾತೇ ನಮ್ಮ ಸಂತುಷ್ಟ ಜೀವನಕ್ಕೆ ಕಾರಣ. ದ್ವೇಷ, ಅಸೂಯೆ, ಕೋಪಗಳೇ ನಮ್ಮ ವೈರಿಗಳು. ಇವೇ ಎಷ್ಟೊಂದು ಆರೋಗ್ಯದ ಏರು ಪೇರುಗಳಿಗೆ ಕಾರಣವಾಗಿರುತ್ತದೆ. ಗುರು ಹಿರಿಯರಲ್ಲಿ ಭಕ್ತಿ, ಗೌರವ, ಕಿರಿಯರಲ್ಲಿ ಪ್ರೀತಿ ಇವುಗಳನ್ನು ನಾವು ಅಳವಡಿಸಿಕೊಳ್ಳಬೇಕು. ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಅಹಂಕಾರ ಪಡದೆ ಮಧ್ಯಮ ಮಾರ್ಗದಲ್ಲಿ ಜೀವನವನ್ನು ಸಾಗಿಸುವುದೇ ನಿಜವಾದ ಸಂತೃಪ್ತ ಆಯುರ್ವೇದೀಯ ಜೀವನ ಶೈಲಿ.

Comments are closed.