ಕರ್ನಾಟಕ

ಶೇ.100ರಷ್ಟು ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಗೆ ಬೀಳಬೇಕು: ಸಚಿವ ಜಮೀರ್‌ ಅಹ್ಮದ್‌

Pinterest LinkedIn Tumblr


ಬೆಂಗಳೂರು: ಅಲ್ಪಸಂಖ್ಯಾತರ ಮತಗಳು ನೂರಕ್ಕೆ ನೂರರಷ್ಟು ಕಾಂಗ್ರೆಸ್‌ಗೆ ಬೀಳಬೇಕು. ಆ ಮೂಲಕ ಕಾಂಗ್ರೆಸ್‌ನ್ನು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಲು ನೆರವು ನೀಡಬೇಕು ಎಂದು ಆಹಾರ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಸಮಾವೇಶದಲ್ಲಿ ಮಾತನಾಡಿದ ಅವರು, ”ಹಾವೇರಿ ಹಾಗೂ ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯತ್ನ ಪಡುತ್ತಾರೆ. ಹೀಗಾಗಿ ಅಲ್ಪಸಂಖ್ಯಾತರು ನೂರಕ್ಕೆ ನೂರರಷ್ಟು ಮತ ಕಾಂಗ್ರೆಸ್‌ಗೆ ಹಾಕಬೇಕು,” ಎಂದರು.

”ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಸ್ಲಿಮರು, ಕ್ರೈಸ್ತರು ಬೇಕಿಲ್ಲ. ಮನ್‌ ಕಿ ಬಾತ್‌ ಬಿಟ್ಟರೆ ಅವರಿಗೆ ಬೇರೆ ಏನೂ ಗೊತ್ತಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ನಾವು ಈ ಸಮಾವೇಶ ನಡೆಸುತ್ತಿದ್ದೇವೆ. ಪ್ರಧಾನಿ ಮೋದಿ ನೀಡಿದ ಎಲ್ಲ ಆಶ್ವಾಸನೆಗಳು ಸುಳ್ಳಾಗಿವೆ. ಕಾಳಧನ ನಿಯಂತ್ರಣ ಮಾಡುತ್ತೇವೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಅವೆಲ್ಲವೂ ಸುಳ್ಳಾಗಿವೆ,” ಎಂದು ಆರೋಪಿಸಿದರು.

”ಮೋದಿಯವರಿಗೆ ಮನ್‌ ಕಿ ಬಾತ್‌ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅವರಿಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಮತಗಳು ಬೇಕಿಲ್ಲವಂತೆ. ಅವರಿಗೆ ಕೇವಲ ಹಿಂದೂಸ್ತಾನ್‌ ಮಾತ್ರ ಬೇಕಿದೆ. ಆದರೆ, ಕಾಂಗ್ರೆಸ್‌ಗೆ ಎಲ್ಲರೂ ಒಂದೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲರಿಗೂ ಅವಕಾಶ ನೀಡಿದೆ. ಹೀಗಾಗಿ ನಾವೆಲ್ಲರೂ ಕಾಂಗ್ರೆಸ್‌ ಬೆಂಬಲಿಸಬೇಕು. ನಮ್ಮನ್ನು ಎದುರಿಸುವ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು,” ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ”ಇನ್ನು ಹದಿನೈದು ದಿನದಲ್ಲಿ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಮಹತ್ವದ್ದಾಗಿದ್ದು, ಕಾಂಗ್ರೆಸ್‌ನ್ನು ಗೆಲ್ಲಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕಿದೆ,” ಎಂದು ಹೇಳಿದರು. ಸಚಿವ ಯು.ಟಿ.ಖಾದರ್‌, ಮಾಜಿ ಸಚಿವ ರೋಶನ್‌ ಬೇಗ್‌, ಮುಖಂಡರಾದ ಸಲೀಂ ಅಹ್ಮದ್‌, ಜಫ್ರುಲ್ಲಾ ಖಾನ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್‌ ಭಾಗವಹಿಸಿದ್ದರು.

Comments are closed.