ಕರಾವಳಿ

ಕೊಲ್ಲಿ ರಾಷ್ಟ್ರದಲ್ಲಿರುವ ತುಳುವರಿಂದ ಮಾತೃ ಭಾಷೆಯ ಋಣ ಸಂದಾಯ : ಡಾ. ಸಂಜೀವ ದಂಡೆಕೇರಿ

Pinterest LinkedIn Tumblr

ದುಬೈ / ಮಂಗಳೂರು : ತುಳು ನಾಟಕ ಪ್ರದರ್ಶನಗಳ ಮೂಲಕ ಮಾತೃಭಾಷೆಯನ್ನು ವಿದೇಶಿ ನೆಲದಲ್ಲಿ ಪಸರಿಸಿದ ಕೀರ್ತಿ ಕೊಲ್ಲಿ ರಾಷ್ಟ್ರದ ಜನರಿಗೆ ಸಲ್ಲುತ್ತದೆ. ತುಳು ನಾಟಕ, ತುಳು ಸಿನಿಮಾ ಹೀಗೆ ತುಳು ಸಾಂಸ್ಕೃತಿಕ ಚಟುವಟಿಕೆಗಳನ್ನು ಕೊಲ್ಲಿ ರಾಷ್ಟ್ರದಲ್ಲಿ ಪ್ರದರ್ಶಿಸುವ ಮೂಲಕ, ಪಾತ್ರವನ್ನು ನಿರ್ವಹಿಸುವ ಮೂಲಕ ತುಳು ಭಾಷಾಭಿಮಾನ ಮೆರೆಯುವ ದುಬಾಯಿ- ಅಬುಧಾಬಿಯಲ್ಲಿರುವ ತುಳು ಕಲಾಭಿಮಾನಿಗಳು ಮಾತೃಭಾಷೆಯ ಋಣ ಸಂದಾಯ ಕೆಲಸದಲ್ಲಿ ತೊಡಗಿದ್ದಾರೆ ಎಂದು ಖ್ಯಾತ ನಾಟಕಕಾರ ನಿರ್ದೇಶಕ ಡಾ. ಸಂಜೀವ ದಂಡೆಕೇರಿ ತಿಳಿಸಿದರು.

ದುಬಾಯಿಯಲ್ಲಿರುವ ಶೇಖ್ ರಶೀದ್ ಅಡಿಟೋರಿಯಂ ಇಂಡಿಯನ್ ಹೈಸ್ಕೂಲ್‌ನಲ್ಲಿ ದುಬಾಯಿ ಗಮ್ಮತ್ ಕಲಾವಿದರ 8ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ಹರೀಶ್ ಬಂಗೇರ, ಪೊರ್ಚುನ್ ಹೊಟೇಲ್ ಮಾಲಕ ಪ್ರವೀಣ್ ಶೆಟ್ಟಿ, ಉದ್ಯಮಿ ಸರ್ವೋತ್ತಮ ಶೆಟ್ಟಿ ಅಬುದಾಭಿ, ಗುಣಶೀಲ ಶೆಟ್ಟಿ, ಭಾಗ್ಯ ಪ್ರೇಮನಾಥ ಶೆಟ್ಟಿ, ಗಮ್ಮತ್ ಕಲಾವಿದೆರ್ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಸತೀಶ್ ಪೂಜಾರಿ, ವಿಶ್ವನಾಥ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

ಸಮಾಂಭದಲ್ಲಿ ರಂಗಕರ್ಮಿ ವಿ ಜಿ ಪಾಲ್ ಮತ್ತು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ ಅವರನ್ನು ಗೌರವಿಸಲಾಯಿತು. ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರ್ವಹಿಸಿದರು.

ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ಡಾ. ಸಂಜೀವ ದಂಡೆಕೇರಿ ಮತ್ತು ಜಲಜಾಕ್ಷಿ ದಂಡೆಕೇರಿ ದಂಪತಿಯನ್ನು ಸನ್ಮಾನಿಸಲಾಯಿತು. ಬಳಿಕ ಡಾ. ಸಂಜೀವ ದಂಡೆಕೇರಿ ಅವರ ಬಯ್ಯಮಲ್ಲಿಗೆ ನಾಟಕವು ವಿಶ್ವನಾಥ ಶೆಟ್ಟಿ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

Comments are closed.