ಕರ್ನಾಟಕ

4.5 ಕೋಟಿ ಸಾಲ ಹಿಂದಿರುಗಿಸಲಾಗದೆ ರೈತ ಆತ್ಮಹತ್ಯೆ: ಸಾಲ ಮರು ಪಾವತಿಗೆ ಬೆದರಿಕೆ ಹಾಕಿದ್ದವರ ವಿರುದ್ಧ ಪ್ರಕರಣ

Pinterest LinkedIn Tumblr

ಬೆಂಗಳೂರು: 4.5 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿದ್ದ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರ್ತೂರಿನಲ್ಲಿ ನಡೆದಿದೆ.

ಮಗನ ಎಂಬಿಬಿಎಸ್ ವ್ಯಾಸಂಗಕ್ಕಾಗಿ ಸಾಲ ಪಡೆದಿದ್ದ ವರ್ತೂರಿನ ಜಗಗೀಶ್ ಬಿ.ವಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ 4.5 ಕೋಟಿ ರೂಪಾಯಿ ಸಾಲ ಮಾಡಿದ್ದ ರೈತನಿಗೆ ಸಾಲ ಮರುಪಾವತಿ ಮಾಡುವಂತೆ ಸಾಲ ನೀಡಿದ್ದವರು ನಿರಂತರವಾಗಿ ಒತ್ತಡ ಹೇರಲು ಪ್ರಾರಂಭಿಸಿದ್ದರು. ಈ ಒತ್ತಡ ತಡೆಯಲಾರದೇ ರೈತ ಆತ್ಮಹತ್ಯೆಗೆ ಶರಣಾಗಿದ್ದರು. ಘಟನೆ ನಡೆದ 10 ದಿನಗಳ ನಂತರ ಪತ್ನಿಗೆ ಆತ್ಮಹತ್ಯೆಗೂ ಮುನ್ನ ತನ್ನ ಪತಿ ಬರೆದಿದ್ದ ಪತ್ರ ಲಭ್ಯವಾಗಿದೆ.

ರೈತನ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಾಗ ಪೊಲೀಸ್ ಅಧಿಕಾರಿಗಳು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಈಗ ಪ್ರಕರಣವನ್ನು ಮತ್ತೊಮ್ಮೆ ದಾಖಲಿಸಿಕೊಳ್ಳಲಾಗಿದ್ದು ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ವರ್ತೂರಿನ ನಿವಾಸಿಯಾಗಿದ್ದ ಜಗಗೀಶ್ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಪತ್ರದಲ್ಲಿ 9 ಜನರ ಹೆಸರನ್ನು ಉಲ್ಲೇಖಿಸಿದ್ದು, ಈ ಪೈಕಿ 6 ಜನರು ಸಾಲ ವಾಪಸ್ ನೀಡದೇ ಇದ್ದಲ್ಲಿ ತನ್ನನ್ನು ಹಾಗೂ ತನ್ನ ಮಕ್ಕಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ಉಲ್ಲೇಖಿಸಿದ್ದರು. ಈ ವಿಷಯವನ್ನು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದು, 6 ಜನರ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಬಿಡಬ್ಲ್ಯೂಎಸ್ಎಸ್ ಬಿ 2011 ರಲ್ಲಿ ಜಗದೀಶ್ ಅವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 6.75 ಕೋಟಿ ರೂಪಾಯಿ ಪರಿಹಾರ ನೀಡಿತ್ತು. ಜಗದೀಶ್ ಅವರ ನೆರೆಮನೆಯ ನಿವಾಸಿಯಾಗಿದ್ದ ಶ್ರೀನಿವಾಸ ರೆಡ್ಡಿ ಎಂಬುವವರು ಜಗದೀಶ್ ಅವರನ್ನು ಒಂದಷ್ಟು ಜನರಿಗೆ ಪರಿಚಯ ಮಾಡಿಸಿದ್ದರು. ಈ ಪೈಕಿ ನಾರಾಯಣ ರೆಡ್ಡಿ ಎಂಬುವವರಿಗೆ ಜಗದೀಶ್ 3 ಕೋಟಿ ರೂಪಾಯಿ ನೀಡಿದ್ದರು. ಈ ಘಟನೆ ನಡೆದ ಬಳಿಕ ಜಗದೀಶ್ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜಗದೀಶ್ ಸಾಲ ಮಾಡಿ ತನಗೆ ವಾಪಸ್ ಬರಬೇಕಿದ್ದ ಹಣದಿಂದ ಸಾಲ ತೀರಿಸುವುದಾಗಿ ಹೇಳಿದ್ದರು. ಆದರೆ ತನಗೆ ವಾಪಸ್ ಬರಬೇಕಿದ್ದ ಹಣ ಬಾರದೇ ಇದ್ದ ಹಿನ್ನೆಲೆಯಲ್ಲಿ ಸಾಲದ ಒತ್ತಡ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

Comments are closed.