ಪ್ರಮುಖ ವರದಿಗಳು

ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೆಇಎಂ ನಾಯಕತ್ವವೇ ನಿರ್ನಾಮ ಮಾಡಿದ್ದೇವೆ: ಭಾರತೀಯ ಸೇನೆ

Pinterest LinkedIn Tumblr

ನವದೆಹಲಿ: ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ನಾಯಕತ್ವವನ್ನೇ ನಿರ್ನಾಮ ಮಾಡಿದ್ದೇವೆ ಎಂದು ಮಂಗಳವಾರ ಭಾರತೀಯ ಸೇನೆ ಹೇಳಿದೆ.

ನಿನ್ನೆ ನಡೆದ ಪಿಂಗ್ಲಾನ್ ಎನ್`ಕೌಂಟರ್ ನಲ್ಲಿ ಪುಲ್ವಾಮ ಉಗ್ರ ದಾಳಿ ಮಾಸ್ಟರ್ ಮೈಂಡ್ ಹಾಗೂ ಜೆಇಎಂ ಕಮಾಂಡರ್ ಅಬ್ದುಲ್ ರಷೀದ್ ಘಾಜಿಯನ್ನು ಹತ್ಯೆಗೈಯ್ಯಲಾಗಿತ್ತು. ಈತನ ಸಾವಿನೊಂದಿಗೆ ಇದೀಗ ಕಾಶ್ಮೀರದಲ್ಲಿ ಜೆಇಎಂ ಬಹುತೇಕ ತನ್ನ ಅಸ್ಥಿತ್ವ ಕಳೆದುಕೊಂಡಿದ್ದು, ಕಣಿವೆ ರಾಜ್ಯದಲ್ಲಿ ಜೆಇಎಂಗೆ ನಾಯಕನೇ ಇಲ್ಲದಂತಾಗಿದೆ. ಮೂಲಕ ಜೆಇಎಂ ಇಲ್ಲಿ ಸೂತ್ರ ಹರಿದ ಗಾಳಿಪಟದಂತಾಗಿದೆ ಎಂದು ಸೇನೆ ಹೇಳಿದೆ.

ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸೇನಾಧಿಕಾರಿ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರು, ಕಣಿವೆ ರಾಜ್ಯದಲ್ಲಿ ಯಾರೇ ಆದಾರೂ ಬಂದೂಕು ಮುಟ್ಟುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಬಂದೂಕು ಕೈಗೆತ್ತಿಕೊಂಡರೆ ನಾವು ನಿಮ್ಮನ್ನು ಖಂಡಿತಾ ಕೊಂದು ಹಾಕುತ್ತೇವೆ ಎಂದು ಹೇಳಿದ್ದಾರೆ. ಅಂತೆಯೇ ಉಗ್ರರಿಗೆ ಶರಣಾಗತಿಗೆ ಒಂದು ಅವಕಾಶ ನೀಡುತ್ತೇವೆ. ಉಗ್ರತ್ವ ಬಿಟ್ಟು ಶರಣಾಗತಿಯಾದರೆ ಬದುಕಲು ಒಂದು ಅವಕಾಶ ನೀಡುತ್ತೇವೆ. ಇಲ್ಲವಾದಲ್ಲಿ ನಿಮ್ಮನ್ನೂ ಕೊಂದು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಂತೆಯೇ ಉಗ್ರರ ಕುಟುಂಬಗಳಿಗೂ ಎಚ್ಚರಿಕೆ ನೀಡಿರುವ ದಿಲ್ಲಾನ್ ಅವರು, ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ನಿಮ್ಮ ಮಕ್ಕಳಿಗೆ ಬುದ್ದಿಮಾತು ಹೇಳಿ ಮನೆಗೆ ಕರೆಸಿಕೊಳ್ಳಿ, ಸೇನೆಗೆ ಕೈಗೆ ಸಿಕ್ಕರೆ ಖಂಡಿತಾ ದೇವರ ಪಾದ ಸೇರುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಂತೆಯೇ ಎನ್`ಕೌಂಟರ್ ವೇಳೆ ಸ್ಥಳದಲ್ಲಿ ಸೇರಿ ಕಾರ್ಯಾಚರಣೆಗೆ ಅಡ್ಡಿ ಪಡಿಸುವ ಯುವಕರಿಗೂ ಸೇನೆ ಎಚ್ಚರಿಕೆ ನೀಡಿದ್ದು, ನಮಗೆ ನಾಗರಿಕರ ಸಾವನ್ನಪ್ಪುವುದು ಬೇಕಿಲ್ಲ. ಆದರೆ ಅನಿವಾರ್ಯತೆ ಎದುರಾದರೆ ಅದಕ್ಕೂ ಹಿಂಜರಿಯುವುದಿಲ್ಲ. ಎನ್`ಕೌಂಟರ್ ಆದ ಬಳಿಕವೂ ಕೂಡ ಸಂಪೂರ್ಣ ಶೋಧಕಾರ್ಯ ಪೂರ್ಣಗೊಳ್ಳುವವರೆಗೂ ಯಾರೂ ಕೂಡ ಘಟನಾ ಪ್ರದೇಶಕ್ಕೆ ಬರಬಾರದು ಎಂದು ದಿಲ್ಲಾನ್ ಹೇಳಿದ್ದಾರೆ.

ನಿನ್ನೆ ನಡೆದ 16 ಗಂಟೆಗಳ ಎನ್​ಕೌಂಟರ್​ನಲ್ಲಿ ಹತ್ಯೆಯಾದವರನ್ನು ಕಮ್ರಾನ್, ಅಬ್ದುಲ್ ರಷೀದ್ ಅಲಿಯಾಸ್ ಘಾಜಿ ಹಾಗೂ ಹಿಲಾಲ್ ಎಂದು ಗುರುತಿಸಲಾಗಿದೆ. ಇವರ ಪೈಕಿ ಅಬ್ದುಲ್ ರಷೀದ್ ಎಂಬಾತ ಪುಲ್ವಾಮದ ಉಗ್ರ ದಾಳಿಯ ಸೂತ್ರಧಾರ ಎನ್ನಲಾಗಿದೆ. ಇನ್ನು, ಅಬ್ದುಲ್ ರಷೀದ್ ಮತ್ತು ಕಮ್ರಾನ್ ಇಬ್ಬರೂ ಕೂಡ ಜೈಷೆ ಮೊಹಮ್ಮದ್ ಸಂಘಟನೆಯ ಡಿವಿಷನಲ್ ಕಮಾಂಡರ್ ಆಗಿದ್ದರು.

ಫೆ. 14ರಂದು ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದ 2500 ಸಿಆರ್​ಪಿಎಫ್ ಯೋಧರ ಮೇಲೆ ಪುಲ್ವಾಮ ಬಳಿ ಜೈಷೆ ಉಗ್ರನೊಬ್ಬ ಟ್ರಕ್​ನಲ್ಲಿ ಸ್ಫೋಟಕ ತುಂಬಿಕೊಂಡು ಆತ್ಮಾಹುತಿ ದಾಳಿಎಸಗಿದ್ದ. ಈ ವೇಳೆ 42 ಯೋಧರು ಬಲಿಯಾಗಿ ಅನೇಕರು ಗಾಯಗೊಂಡರು. ಜಮ್ಮು-ಕಾಶ್ಮೀರದ ರಕ್ತ ಚರಿತ್ರೆಯಲ್ಲೇ ಅತ್ಯಂತ ಭಯಾನಕ ದಾಳಿಗಳಲ್ಲಿ ಇದೂ ಒಂದಾಗಿದೆ. ಜೈಷ್-ಎ-ಮೊಹಮ್ಮದ್ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಈ ಘಟನೆಯ ನಂತರ ಕೇಂದ್ರ ಸರಕಾರವು ಭಾರತೀಯ ಸೇನೆಗೆ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಲು ಮುಕ್ತ ಸ್ವಾತಂತ್ರ್ಯ ನೀಡಿದೆ.

Comments are closed.