ಕರಾವಳಿ

ಪರಸ್ಪರ ಶಾಂತಿ-ಸೌಹಾರ್ದದ ಮೂಲಕ ಸುಂದರ ಮಂಗಳೂರು ನಿರ್ಮಾಣ ಸಾಧ್ಯ :‘ಬ್ಯಾರಿ ಮೇಳ’ ಉದ್ಘಾಟಿಸಿ ಗೃಹ ಸಚಿವ ಎಂ.ಬಿ. ಪಾಟೀಲ್‌

Pinterest LinkedIn Tumblr

ಮಂಗಳೂರು: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರಿ ವತಿಯಿಂದ ಬಿಸಿಸಿಐ ಅಧ್ಯಕ್ಷರಾದ ಎಸ್.ಎಂ ರಶೀದ್ ಹಾಜಿಯವರ ನೇತ್ರತ್ವದಲ್ಲಿ ನಗರದ ಪುರಭವನದಲ್ಲಿ ಫೆ. 8ರಿಂದ 10ರವರೆಗೆ 3 ದಿನಗಳ ಕಾಲ ಹಮ್ಮಿಕೊಂಡಿರುವ ‘ಬ್ಯಾರಿ ಮೇಳ’ -2019 ನ್ನು ಶುಕ್ರವಾರ ಗೃಹ ಸಚಿವ ಎಂ.ಬಿ. ಪಾಟೀಲ್‌ ಉದ್ಘಾಟಿಸಿದರು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಪ್ರತಿಯೊಬ್ಬರು ಪರಸ್ಪರ ಶಾಂತಿ-ಸೌಹಾರ್ದದಿಂದ ಬಾಳುವ ಮೂಲಕ ಸುಂದರ ಮಂಗಳೂರು ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಬಿಸಿಸಿಐ ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಬಿಎ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ. ಬಿ. ಅಹ್ಮದ್ ಮೊಹಿಯುದ್ದೀನ್ ಅವರಿಗೆ ಬಿಸಿಸಿಐ ಜೀವಮಾನ ಸಾಧನಾ ಪ್ರಶಸ್ತಿ, ಕಣ್ಣೂರು ವಿವಿ ಮಾಜಿ ಕುಲಪತಿ ಡಾ. ಎಂ. ಅಬ್ದುಲ್ ರಹಿಮಾನ್ ಅವರಿಗೆ ಬಿಸಿಸಿಐ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್, ಕೆ.ಎಸ್. ಶೇಖ್ ಕರ್ನಿರೆ ಅವರಿಗೆ ಬಿಸಿಸಿಐ ಎನ್‌ಆರ್‌ಐ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್, ಎ.ಕೆ. ಗ್ರೂಪ್ ಆಫ್ ಕಂಪೆನೀಸ್ ಸ್ಥಾಪಕಾಧ್ಯಕ್ಷ ಎಂ. ಅಹ್ಮದ್ ಅವರಿಗೆ ಬಿಸಿಸಿಐ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಮಾಡಿ ಗೌರವಿಸಲಾಯಿತು.

ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ವಸ್ತುಪ್ರದರ್ಶನ ಮಳಿಗೆಯನ್ನು ಯೆನೆಪೋಯ ವಿಶ್ವವಿದ್ಯಾಲಯ ಕುಲಪತಿ ವೈ. ಅಬ್ದುಲ್ಲ ಕುಂಞಿ ಉದ್ಘಾಟಿಸಿದರು.

ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್‌, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಮೊಹಿದಿನ್‌ ಬಾವಾ, ಮೇಯರ್‌ ಭಾಸ್ಕರ್‌ ಕೆ., ಮೊಹಮ್ಮದ್‌ ಮಸೂದ್‌, ಪ್ರಮುಖರಾದ ಯು.ಕೆ. ಮೋನು, ಇಬ್ರಾಹಿಂ, ಮೊಹಮ್ಮದ್‌ ಕರಂಬಾರು, ಅಬ್ದುಲ್‌ ಹಮೀದ್‌, ಹಿದಾಯತ್‌ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು.

ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಮ್ತಿಯಾಜ್, ಕಾರ್ಯದರ್ಶಿ ನಿಸಾರ್ ಅಹಮ್ಮದ್, ಕಾರ್ಯಕಾರಿ ಸಮಿತಿ ಸದಸ್ಯ ಎ.ಕೆ. ನಿಯಾಝ್, ಉದ್ಯಮಿ ಅಲ್ ಹಾಜಿ ಪಿಪಿ ಮಜೀದ್ ಮುಂತಾದವರು ಉಪಸ್ಥಿತರಿದ್ದರು. ಬಿಸಿಸಿಐ ಅಧ್ಯಕ್ಷರಾದ ಎಸ್.ಎಂ ರಶೀದ್ ಹಾಜಿ ಸ್ವಾಗತಿಸಿ ಪ್ರಸ್ತಾವನೆಗೈದರು. ಬ್ಯಾರಿ ಮೇಳ ಸಂಚಾಲಕ ಹಾಜಿ ಮನ್ಸೂರ್ ಅಹಮ್ಮದ್ ವಂದಿಸಿದರು.

ಫೆ. 8ರಂದು ಸಂಜೆ 5ರಿಂದ ಆರಂಭಗೊಂಡ ಮೇಳವು ಫೆ. 9 ಮತ್ತು 10ರಂದು ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಮೇಳ ನಡೆಯಲಿದೆ. ಫೆ. 9ರಂದು ಸಂಜೆ 4.30ರಿಂದ 7ರವರೆಗೆ ಪ್ರತಿಭಾ ಪ್ರದರ್ಶನ ‘ಬ್ಯಾರೀಸ್ ಗಾಟ್ ಟ್ಯಾಲೆಂಟ್’ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.

ಫೆ. 10ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ದೇಶ ವಿದೇಶಗಳ ಯಶಸ್ವಿ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮ, ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಾಣಿಜ್ಯೋದ್ಯಮ, ಬ್ಯಾರಿ ಸಂಸ್ಕೃತಿ, ವ್ಯಾಪಾರವನ್ನು ಪ್ರೋತ್ಸಾಹಿಸುವುದು, ಅವಕಾಶ ಸೃಷ್ಟಿಸಿ ಮೇಳದ ಉದ್ದೇಶ. ವಸ್ತುಪ್ರದರ್ಶನ, ವಿವಿಧ ಮಳಿಗೆ, ಆಹಾರ ಮಳಿಗೆ ಇರಲಿದೆ ಎಂದು ಮೇಳ ಸಂಚಾಲಕ ಹಾಜಿ ಮನ್ಸೂರ್ ಅಹಮ್ಮದ್ ಅವರು ತಿಳಿಸಿದ್ದಾರೆ.

ನಮ್ಮ ಸಮುದಾಯದ ಪ್ರತಿಭೆಗಳನ್ನು ಗುರುತಿಸಲು ಬ್ಯಾರಿ ಮೇಳ : ಅಲ್ ಹಾಜಿ ಎಸ್.ಎಂ.ರಶೀದ್

ಸಮಾರಂಭದಲ್ಲಿ ಪ್ರಸ್ತಾವನೆಗೈದ ಬಿಸಿಸಿಐ ಅಧ್ಯಕ್ಷ ಹಾಗೂ ಬ್ಯಾರಿ ಮೇಳದ ರೂವಾರಿ ಎಸ್.ಎಂ ರಶೀದ್ ಹಾಜಿ ಅವರು ಮಾತನಾಡಿ, ನಮ್ಮ ಸಮುದಾಯದಲ್ಲಿ ಹಲವಾರು ಪ್ರತಿಭೆಗಳು ಇವೆ. ಆದರೆ ಈ ಪ್ರತಿಭೆಗಳನ್ನು ಗುರುತಿಸುವಲ್ಲಿ ಸಮುದಾಯ ವಿಫಲವಾಗುತ್ತಿದೆ. ಹಳ್ಳಿ ಪ್ರದೇಶಗಳಲ್ಲಂತೂ ಯಥೇಚ್ಛವಾಗಿ ಪ್ರತಿಭೆಗಳು ಕಾಣ ಸಿಗುತ್ತವೆ. ಇವರನ್ನು ಮೇಲೆತ್ತುವುದು ನಮ್ಮ ಕರ್ತವ್ಯ ಮಾತ್ರವಲ್ಲದೇ ಬ್ಯಾರಿ ಸಾಮುದಾಯಿಕ ಸಮ್ಮಿಲನ ಎಂದು ಕೂಡಾ ಈ ಕಾರ್ಯಕ್ರಮವನ್ನು ಕರೆಯಬಹುದಾಗಿದೆ ಎಂದು ಹೇಳಿದರು.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಕೆಲವು ವರ್ಷಗಳಿಂದ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಕಾರ್ಯಾಚರಣೆ ಮಾಡುತ್ತಿದ್ದು, ಬ್ಯಾರೀ ಸಮುದಾಯದಲ್ಲಿನ ಉದ್ಯಮಿಗಳನ್ನು ಹಾಗೂ ಆಸುಪಾಸಿನ ಹಲವಾರು ಉದ್ಯಮಿಗಳನ್ನು ಒಂದೇ ಸೂರಿಡಿಯಲ್ಲಿ ತರುವ ಪ್ರಯತ್ನವನ್ನು ಮಾಡುತ್ತಿದೆ ಮತ್ತು ಈ ಕಾರ್ಯದಲ್ಲಿ ಭಾಗಶಃ ಯಶಸ್ಸನ್ನೂ ಕಂಡಿದೆ. ಕೇವಲ ಉದ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸುತ್ತಿರುವ ಬಿಸಿಸಿಐ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಬ್ಯಾರೀ ಮೇಳ ಹಾಗೂ ಬ್ಯಾರೀಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ನಾಳೆಯಿಂದ ಮಂಗಳೂರಿನಲ್ಲಿ ಬೃಹತ್ “ಬ್ಯಾರಿ ಮೇಳ” : ಸಮುದಾಯದ ಪ್ರತಿಭೆಗಳ ಅನಾವರಣ

Comments are closed.