ಕರಾವಳಿ

ಸಹಸ್ರ ಸಂಖ್ಯೆಯ ಭಕ್ತಾದಿಗಳಿಂದ ಕಟೀಲು ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆ : “ಅಮ್ಮನೆಡೆಗೆ ನಮ್ಮ ನಡೆ” ಅಭೂತಪೂರ್ವ ಯಶಸ್ಸು

Pinterest LinkedIn Tumblr

ಮಂಗಳೂರು : ಬಜಪೆ ಸಮೀಪದ ಮರವೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ 6ನೇ ವರ್ಷದ ಪಾದಯಾತ್ರೆ “ಅಮ್ಮನೆಡೆಗೆ ನಮ್ಮ ನಡೆ” ರವಿವಾರ ಜರಗಿತು.

ಸಂದೀಪ್‌ ಶೆಟ್ಟಿ ಮರವೂರು ಅವರ ನೇತ್ರತ್ವದಲ್ಲಿ ಲೋಕ ಕಲ್ಯಾಣಾರ್ಥ, ಸಕಲ ಸಂಕಷ್ಟ ಹಾಗೂ ಗ್ರಹಚಾರ ದೋಷ ನಿವಾರಣೆಗೆ ಕೈಗೊಂಡ “ಅಮ್ಮನೆಡೆಗೆ ನಮ್ಮ ನಡೆ’ ಪಾದಯಾತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿದೆ.

ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ವಾಸುದೇವ ಆಸ್ರಣ್ಣ ಆಶೀರ್ವಚನ ನೀಡಿದರು. ಭಕ್ತಿ, ಶ್ರದ್ಧೆಯಿಂದ ದೇವರ ಅನುಗ್ರಹವಾಗುತ್ತದೆ. ಪಾದ ಯಾತ್ರೆಗೆ ಭಕ್ತ ಸಾಗರವೇ ಹರಿದು ಬರುತ್ತಿರುವುದು ಇದಕ್ಕೆ ಸಾಕ್ಷಿ ಎಂದರು. ನಾವು ನಮಗೆ ಮಾತ್ರ ದೇವರಲ್ಲಿ ಪ್ರಾರ್ಥಿಸದೆ ಎಲ್ಲರಿಗೂ ಒಳ್ಳೆಯದಾಗಲಿ ಎನ್ನಬೇಕು. ಎಲ್ಲರ ಕಷ್ಟಗಳು ದೂರವಾಗಲಿ ಎಂದು ಆಸ್ರಣ್ಣ ಹೇಳಿದರು.

ಅಮ್ಮ ಸಾಕ್ಷಾತ್‌ ಭೂಮಿತಾಯಿ ರೂಪ. ಅಮ್ಮನೆಡೆಗೆ ನಡೆ ಸ್ವಾರ್ಥಕ್ಕಾಗಿ ಅಲ್ಲ. ಇಂದು ಭೂಮಿ ತಾಯಿ ಮೇಲೆ ಆಗುವ ಆಕ್ರಮಣಗಳನ್ನು ಎದುರಿಸಲು ಅಮ್ಮನಿಗೆ ಶಕ್ತಿ ಕೊಡಬೇಕು. ಹಿಂದೂ ಸಮಾಜದ ಒಗ್ಗಟ್ಟಿಗೆ, ರಕ್ಷಣೆಗೆ ನಾವು ಬದ್ಧರಾಗಬೇಕು ಎಂದು ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದರು.

ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಮೊಕ್ತೇಸರ ಸುಧೀರ್‌ ಶೆಟ್ಟಿ, ಸಂಸದ ನಳಿನ್‌, ಶಾಸಕರಾದ ಉಮಾನಾಥ ಕೋಟ್ಯಾನ್‌, ಹರೀಶ್‌ ಪೂಂಜ, ಧರ್ಮದರ್ಶಿ ಪ್ರವೀಣ್‌ರಾಜ್‌, ಮಚ್ಛೇಂದ್ರನಾಥ ಬಾಬಾ, ಕದ್ರಿ ಕ್ಷೇತ್ರದ ಮೊಕ್ತೇಸರ ಎ.ಜೆ. ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ರವೀಂದ್ರ ಅರಸ, ಮೋನಪ್ಪ ಭಂಡಾರಿ, ಜಿತೇಂದ್ರ ಕೊಟ್ಟಾರಿ, ಆಶಾ ಜ್ಯೋತಿ ರೈ, ಉದಯ್‌ ಶೆಟ್ಟಿ ಪಡುಬಿದಿರೆ, ಜಗದೀಶ ಶೇಣವ, ಶರಣ್‌ ಪಂಪ್‌ವೆಲ್‌, ನಿವೇದಿತಾ ಎನ್‌. ಶೆಟ್ಟಿ ಬೆಳ್ಳಿಪ್ಪಾಡಿ, ಕಿಶೋರ್‌ ರೈ ಪುತ್ತೂರು, ಸುಕೇಶ್‌ ಶೆಟ್ಟಿ ಮುಂಡಾರುಗುತ್ತು ಪಾದಯಾತ್ರೆಯಲ್ಲಿ ಭಾಗವಹಿಸಿದರು. ಅಮ್ಮನೆಡೆಗೆ ನಮ್ಮ ನಡೆ ಸಮಿತಿ ಅಧ್ಯಕ್ಷ ಸಂದೀಪ್‌ ಶೆಟ್ಟಿ ಮರವೂರು ಸ್ವಾಗತಿಸಿದರು.

Comments are closed.