ಕರಾವಳಿ

ನಾನು 40 ವರ್ಷದಿಂದ ಬಿಜೆಪಿ ಪಕ್ಷ ಸಂಘಟನೆ ಮಾಡಿದ್ದು ಇಡೀ ರಾಜ್ಯಕ್ಕೆ ಗೊತ್ತಿದೆ: ಕೆ.ಎಸ್ ಈಶ್ವರಪ್ಪ

Pinterest LinkedIn Tumblr

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ಗೀತಾ ಶಿವರಾಜ್ ಕುಮಾರ್ ಅವರು ಯಡಿಯೂರಪ್ಪನವರು ಹಾಕಿಸಿದ ಡಮ್ಮಿ ಅಭ್ಯರ್ಥಿ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ.

ಅವರು ಗುರುವಾರ ಬೈಂದೂರಿನ ಉಪ್ಪುಂದದಲ್ಲಿರುವ ರಾಷ್ಟ್ರಭಕ್ತ ಭಳಗದ ನೂತನ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಯಡಿಯೂರಪ್ಪ ತನ್ನ ಮಗನ ಗೆಲುವಿಗಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದಿರುವ ಈಶ್ವರಪ್ಪ, ಅದಕ್ಕಾಗಿಯೇ ಗೀತಾ ಶಿವರಾಜ್ ಕುಮಾರ್ ಅವರನ್ನು ಕಾಂಗ್ರೆಸ್ ನಿಂದ ಸ್ಪರ್ಧಿಸುವಂತೆ ಮಾಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ನ ಅಸಮಾಧಾನಿತ ನಾಯಕರು ಮತ್ತು ಮತದಾರರು ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿಯ ರಾಜಕಾರಣ ಶುದ್ಧಿಯಾಗಬೇಕು. ಹಿಂದುತ್ವದ ಬಗ್ಗೆ ಪಕ್ಷಗಳಿಗೆ ಕಾಳಜಿ ಇರಬೇಕು. ಬಿಜೆಪಿಯ 60-70% ಕಾರ್ಯಕರ್ತರು ನಮ್ಮೊಂದಿಗಿದ್ದಾರೆ. 40 ವರ್ಷದಿಂದ ಬಿಜೆಪಿ ಪಕ್ಷ ಸಂಘಟನೆ ಮಾಡಿದ್ದು ಇಡೀ ರಾಜ್ಯಕ್ಕೆ ಗೊತ್ತಿದೆ. ಕೇಂದ್ರದವರು ಮತ್ತೆ ಮತ್ತೆ ಕರೆ ಮಾಡಿಸುತ್ತಿದ್ದಾರೆ. ನಿಲ್ಲೋದು, ಗೆಲ್ಲೋದು, ನರೇಂದ್ರ ಮೋದಿಯವರಿಗೆ ಕೈ ಎತ್ತುವುದು ಖಾತ್ರಿ ಎಂದು ತಿಳಿಸಿದ್ದೇನೆ ಎಂದ ಅವರು ಭಾಜಾಪ ಸಾಮೂಹಿಕ ನೇತೃತ್ವದ ವ್ಯವಸ್ಥೆ ಮರೆತಿದೆ. ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಲು ಅಯೋಗ್ಯ. ಅಣ್ಣ-ತಮ್ಮ ಇಬ್ಬರು ಹಾವೇರಿಯಲ್ಲಿ ಟಿಕೆಟ್ ಕೊಡಿಸುವುದಾಗಿ ನನ್ನ ಮಗನ ಬಳಿ ಆಣೆ ಮಾಡಿದ್ದರು ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಸಾಧು ಸಂತರನ್ನು ಎಳೆದು ತರಬಾರದಿತ್ತು. ಇದು ಬಹಳ ನೋವಿನ ಸಂಗತಿ ಎಂದಿರುವ ಈಶ್ವರಪ್ಪ, ಇದನ್ನು ರಾಷ್ಟ್ರ ಭಕ್ತಬಳಗ ಖಂಡಿಸುತ್ತದೆ ಎಂದರು. ಲೋಕಸಭಾ ಕ್ಷೇತ್ರದಲ್ಲಿ ನನಗೆ ಪೂರ್ಣ ಜನಬೆಂಬಲ ಸಿಕ್ಕಿದೆ. ಅಲ್ಲದೇ ಕಾಂಗ್ರೆಸ್ ಹಾಗೂ ಬಿಜೆಪಿಯವರು ಹಿಂಬಾಗಿಲಿನಿಂದ ಬೆಂಬಲ ಕೊಡುವುದಾಗಿ ಹೇಳಿದ್ದಾರೆ ಎಂದರು. ಈಶ್ವರಪ್ಪ ಯಾರು ಅಂತ ಗೊತ್ತಿಲ್ಲ ಎಂದಿರುವ ರಾಧಾಮೋಹನ್ ಅಗರ್ವಾಲ್ ನನ್ನ ಮನೆಗೆ ಬಂದಿದ್ದು ಅದು ಅವರಿಗೆ ಮರೆತಿರಬೇಕು ಎಂದರು.

ನನ್ನ ಕೂಗು ಕೇಂದ್ರ ತಲುಪಿದ್ದು ನಿತ್ಯವೂ ಫೋನ್ ಕರೆ ಬರುತ್ತಿದೆ. ಅಮಿತ್ ಶಾ ಅವರಿಗೆ ಮಾತು ತಲುಪಿದೆ. ವಿಚಾರ ತಿಳಿದು ಶಾಗೆ ಉತ್ತರ ಕೊಡೋದಕ್ಕೆ ಆಗಿಲ್ಲ ಎಂದಿರುವ ಅವರು, ವಿಜಯೇಂದ್ರ ಎಳಸು ಅವನಿಗೆ ಅನುಭವ ಇಲ್ಲ. ನನ್ನ ಸಾಧನೆ ಬಗ್ಗೆ ನಿನ್ನ ಅಪ್ಪನಿಗೆ ಕೇಳು. ರಾಜ್ಯದಲ್ಲಿ ನಾನು ಕೆಲಸ ಮಾಡಿಲ್ಲ ಅನ್ನಲಿ, ಆಗ ನಿಮಗೆ ಉತ್ತರ ಕೊಡ್ತೇನೆ ಎಂದು ಯಡಿಯೂಪ್ಪ ಮಕ್ಕಳ ವಿರುದ್ಧ ವಾಗ್ದಾಳಿ ನಡೆಸಿದರು. ಹಿರಿಯರ ತಪಸ್ಸಿಂದ ಕಟ್ಟಿದ ಪಕ್ಷ ಇಂದು ಕರ್ನಾಟಕದಲ್ಲಿ ಅಧೋಗತಿಗೆ ಹೋಗುತ್ತಿರುವುದು ಬೇಸರ ತರಿಸಿದೆ. ಬಿಜೆಪಿ ಪ್ರೈವೆಟ್ ಲಿಮಿಟೆಡ್ ಪಾರ್ಟ್ ನರ್ ಶಿಪ್ ಕಂಪನಿ ಅಲ್ಲ ಎನ್ನುವುದನ್ನು ಅಪ್ಪಮಕ್ಕಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ವೇಳೆ‌ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ಮುಖಂಡ ನಾರಾಯಣ ಗುಜ್ಜಾಡಿ ಇದ್ದರು.

Comments are closed.