ಕರಾವಳಿ

ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ; ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ವಿರೋಧಿಗಳಿಗೆ ಸೋಲಿನ ಭಯ ಹುಟ್ಟಿಸಿದ ಕೇಸರಿ ಸುನಾಮಿ.!

Pinterest LinkedIn Tumblr

ಶಿವಮೊಗ್ಗ/ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಬುಧವಾರ ಸಹಸ್ರಾರು ಕಾರ್ಯಕರ್ತರು, ಗಣ್ಯರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್‌ಗಳಲ್ಲೂ ಕಾರ್ಯಕರ್ತರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೈಂದೂರಿನಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪ ಮಾಡಿದರು.

ಬಿ.ವೈ. ರಾಘವೇಂದ್ರ ಅವರು ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ್‌ಶೋ ನಡೆಸಿ, ನಂತರ ಬೈಂದೂರಿನ ಜನಪ್ರಿಯ ಶಾಸಕರಾದ ಗುರುರಾಜ ಗಂಟಿಹೊಳೆ, ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಸಹಿತವಾಗಿ ಪ್ರಮುಖರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಇದೇ ವೇಳೆಗೆ ಬೈಂದೂರಿನ ಬಿಜೆಪಿ ಕಾರ್ಯಕರ್ತರು ತಮ್ಮ ಬೂತ್‌ಗಳಲ್ಲಿ ಇರುವ ದೇವಸ್ಥಾನದಲ್ಲಿ ಬಿ.ವೈ. ರಾಘವೇಂದ್ರ ಅವರ ಗೆಲುವಿಗಾಗಿ ಕೆಲವು ಕಡೆ 108 ತೆಂಗಿನ ಕಾಯಿ ಸಮರ್ಪಣೆ ಸಹಿತ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಪ್ರತಿ ಬೂತ್‌ನಲ್ಲೂ ಮತ ಪ್ರಮಾಣ ಹೆಚ್ಚಿಸುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಕಳೆದ ಬಾರಿಗಿಂತ ಕನಿಷ್ಠ ಶೇ.30ರಿಂದ ಶೇ.40ರಷ್ಟು ಮತ ಹೆಚ್ಚು ಬರುವಂತೆ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಿದರು.

ಕೇಸರಿ ಸುನಾಮಿ:
ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಬೃಹತ್ ಮೆರವಣಿಗೆ ಹೊರಟಿತ್ತು. ಮೆರವಣಿಗೆಯ ಉದ್ದಕ್ಕೂ ಶಿವಮೊಗ್ಗದ ಬೀದಿ ಬೀದಿಗಳಲ್ಲಿ ಸಹಸ್ರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು ಬಿಜೆಪಿಯ ಬಾವುಟ ಮತ್ತು ಕೇಸರಿ ಬಾವುಟ ಹಿಡಿದು ಭಾರತ್ ಮಾತಾ ಕೀ ಜೈ, ಬಿಜೆಪಿಗೆ ಜೈ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕ್ಷೇತ್ರದ ಎಲ್ಲ ಭಾಗದಿಂದಲೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಹಾಗೆಯೇ ಬೈಂದೂರಿನಿಂದ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ಮುಂದಾಳತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶಿವಮೊಗ್ಗದಲ್ಲಿ ಗುರುವಾರ ಸೇರಿದ್ದ ಬಿಜೆಪಿ ಸುನಾಮಿ ವಿರೋಧ ಪಕ್ಷಗಳಿಗೆ ಚುನಾವಣೆಗೂ ಮೊದಲೇ ಸೋಲಿನ ಭಯ ಹುಟ್ಟಿಸಿದೆ.

ವಿರೋಧಿಗಳಿಗೆ ಸೋಲಿನ ಭಯ ಶುರುವಾಗಿದೆ:
ನಾಮಪತ್ರ ಸಲ್ಲಿಕೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿಯವರನ್ನು ಒಂದೇ ವೇದಿಕೆಯಲ್ಲಿ ನೋಡಿ ಮತದಾರರು ಸಾಕಷ್ಟು ಖುಷಿ ಪಟ್ಟಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿಯ ಜನಸ್ತೋಮ ನೋಡಿ ಕೆಲವರಲ್ಲಿ ಈಗಾಗಲೇ ಸೋಲಿನ ಭಯ ಹುಟ್ಟಿದೆ. ಹೀಗಾಗಿ ವಿರೋಧ ಪಕ್ಷಕ್ಕೆ ಅಪಪ್ರಚಾರವೇ ಕೊನೆಯ ಅಸ್ತ್ರವಾಗಿದೆ. ಚುನಾವಣೆ ಫಲಿತಾಂಶದ ಮೂಲಕವೇ ಎಲ್ಲದಕ್ಕೂ ಉತ್ತರ ನೀಡಲಿದ್ದೇವೆ. ಕಾಂಗ್ರೆಸ್ ಪಕ್ಷದ ಅನೇಕರು ಬಿಜೆಪಿಗೆ ಸೇರುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಮುನ್ಸೂಚನೆಯಾಗಿದೆ. ಕ್ಷೇತ್ರದಾದ್ಯಂತ ಬಿಜೆಪಿ ಅಲೆ ಎದ್ದಿದೆ. ಕಾರ್ಯರ್ತರು ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

3 ಲಕ್ಷಕ್ಕೂ ಅಧಿಕ ಲೀಡ್: ಬಿ.ಎಸ್.ವೈ
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ. ಬಿಜೆಪಿ ವಿರುದ್ಧವೇ ಬಂಡಾಯದ ಅವಶ್ಯಕತೆ ಇರಲಿಲ್ಲ. ಬಿಜೆಪಿ ಶಕ್ತಿ ಏನು ಎಂಬುದನ್ನು ಚುನಾವಣೆಯಲ್ಲಿ ಮತದಾರರು ತೋರಿಸಲಿದ್ದಾರೆ ಎಂದು ಬಂಡಾಯ ಅಭ್ಯರ್ಥಿ ವಿರುದ್ಧ ಕಿಡಿಕಾರಿದರು.

ರಾಘವೇಂದ್ರರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿ: ಎಚ್.ಡಿ.ಕೆ:
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮಾತನಾಡಿ, ಬಿ.ವೈ. ರಾಘವೇಂದ್ರ ಅವರು ಮೂರು ಬಾರಿ ಲೋಕಸಭಾ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮೈತ್ರಿಯ ಹೊಂದಾಣಿಕೆಯಿಂದ ನಾವೆಲ್ಲರೂ ಜತೆಗೂಡಿ ನಡೆಯುತ್ತಿದ್ದೇವೆ. ಯಾವ ಶಕ್ತಿಯೂ ಇವರನ್ನು ಸೋಲಿಸಲು ಸಾಧ್ಯವಿಲ್ಲ ಎಂದರು.

ಅತ್ಯಧಿಕ ಅಂತರದ ಗೆಲುವಾಗಲಿದೆ: ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಶ್ರೀರಕ್ಷೆಯಾಗಲಿದೆ. ಬಿ.ವೈ. ರಾಘವೇಂದ್ರ ಅವರು ಗರಿಷ್ಠ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ ಎಂದರು.

ಕಾಂಗ್ರೆಸ್ ಶೂನ್ಯ ಸಾಧನೆ: ಸಿ.ಟಿ ರವಿ
ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಏನೂ ಕೊಡುಗೆ ನೀಡದ ಕಾಂಗ್ರೆಸ್ ಗೆ ಜನರ ಬಳಿ ಹೋಗಿ ಮತ ಕೇಳುವ ನೈತಿಕ ಹಕ್ಕು ಇಲ್ಲ. ಕಾಂಗ್ರೆಸ್ ಸಾಧನೆ ಶೂನ್ಯ ಸಾಧನೆ. ನನಗೆ ಸಂಪೂರ್ಣ ವಿಶ್ವಾಸವಿದೆ ಬಿ.ವೈ.ರಾಘವೇಂದ್ರ ಅವರು ಅತ್ಯಧಿಕ ಅಂತರದಲ್ಲಿ ಜಯ ಸಾಧಿಸಲಿದ್ದಾರೆ ಎಂದರು.

ಮಾಜಿ ಸಚಿವ ಬೈರತಿ ಬಸವರಾಜ, ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.

Comments are closed.