ಕರಾವಳಿ

ತಿಂಗಳು ಕಳೆದರೂ ಮೀನುಗಾರರ ಪತ್ತೆಯಿಲ್ಲ: ಮನೆಮಂದಿ ಕಣ್ಣಿರು ನಿಂತಿಲ್ಲ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಇಬ್ಬರು, ಉತ್ತರ ಕನ್ನಡದ ಐವರು ಮೀನುಗಾರರು ಬೋಟ್‌ ಸಹಿತ ಕಣ್ಮರೆಯಾಗಿತಿಂಗಳು ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ವರ್ಷಾನುವರ್ಷದಿಂದ ಮೀನುಗಾರಿಕೆಯನ್ನು ನಂಬಿಕೊಂಡು ಬಂದ ಕರಾವಳಿ ಮೀನುಗಾರಿಕೆಯ ಇತಿಹಾಸದಲ್ಲಿಯೇ ಕರಾಳ ಘಟನೆ ಎಂದು ಮೀನುಗಾರರು ತಿಳಿಸಿದ್ದಾರೆ.

ನೌಕಾಸೇನೆ, ಕರಾವಳಿ ರಕ್ಷಣಾ ಪಡೆ, ಹೆಲಿಕಾಪ್ಟರ್‌, ಸುಸಜ್ಜಿತ ಬೋಟ್‌ಗಳನ್ನು ಬಳಸಿ ಎಷ್ಟೇ ಹುಡುಕಾಡಿದರೂ ಪ್ರಯೋಜನವಾಗಿಲ್ಲ. ಡಿ. 13ರಂದು ರಾತ್ರಿ ಮೀನುಗಾರಿಕೆಗೆ ತೆರಳಿ ಎರಡೇ ದಿನಗಳಲ್ಲಿ ಸಂಪರ್ಕ ಕಳೆದುಕೊಂಡಿದ್ದರು. ಸಿಂಧುದುರ್ಗ ಜಿಲ್ಲೆಯ ದೇವಗಢ, ಮಾಲ್ವಣ್‌ ಬಳಿ ಬೋಟ್‌ ಮತ್ತು ಮೀನುಗಾರರನ್ನು ಬಚ್ಚಿಟ್ಟಿರುವ ಸಾಧ್ಯತೆ ಹೆಚ್ಚು ಎಂಬುದು ಬಹುತೇಕ ಮೀನುಗಾರರ ಅಭಿಪ್ರಾಯ. ಗುಡ್ಡಗಾಡುಗಳಿಂದ ಸುತ್ತುವರಿದ ಈ ಭಾಗ ದುರ್ಗಮ ಪ್ರದೇಶವಾಗಿದ್ದು, ಜನಸಾಮಾನ್ಯರು ತೆರಳಲು ಆಸಾಧ್ಯ. ಕೇಂದ್ರ ಸರಕಾರ ಸೇನೆಯನ್ನು ಕಳುಹಿಸಿ ತ್ವರಿತವಾಗಿ ಕಾರ್ಯಾಚರಣೆ ನಡೆಸಬೇಕು ಎಂಬುದು ಮೀನುಗಾರರ ಆಗ್ರಹವಾಗಿದೆ.

ಮನೆ ಮಂದಿ ಅಳಲು
ನಾಪತ್ತೆಯಾಗಿರುವ ಮೀನುಗಾರರಾದ ಬಡಾನಿಡಿಯೂರು ಪಾವಂಜಿಗುಡ್ಡೆಯ ಚಂದ್ರಶೇಖರ ಕೋಟ್ಯಾನ್‌ ಮತ್ತು ದಾಮೋದರ ಸಾಲ್ಯಾನ್‌ ಅವರ ಮನೆಯಲ್ಲಿ ನೀರವ ಮೌನವಿದೆ. ನಾಪತ್ತೆ ವಿಚಾರ ತಿಳಿದಂದಿನಿಂದಲೂ ಮೀನುಗಾರರ ಮನೆಯಲ್ಲಿ ಕಣ್ಣಿರು ಬಿಟ್ಟರೆ ಮುಖದಲ್ಲಿ ನಗುವಿಲ್ಲ. ಮನೆಯವರು ಈಗ ಬಂದಾರು ಆಗ ಬಂದಾರು ಎಂಬ ನಿರೀಕ್ಷೆಯೊಂದೆ ಇವರದ್ದು.

ದೈವ ದೇವರಿಗೆ ಮೊರೆ
ಕುಟುಂಬದವರು ಮಾತ್ರವಲ್ಲ, ಗ್ರಾಮಸ್ಥರು, ಮೀನುಗಾರರು ದೈವ ದೇವರಿಗೆ ಮೊರೆ ಹೋಗಿದ್ದಾರೆ. ಎಲ್ಲ ದೇವಸ್ಥಾನಗಳಲ್ಲೂ ಸಾಮೂಹಿಕ ಪ್ರಾರ್ಥನೆ ನಡೆದಿದೆ. ಅಂಜನ, ಆರೂಢ ಪ್ರಶ್ನೆಗಳನ್ನು ಇರಿಸಿ ಚಿಂತನೆ ನಡೆಸಿದ್ದಾರೆ. ಜೀವಂತವಾಗಿದ್ದಾರೆ, ಬಂಧನದಲ್ಲಿ ಇದ್ದಾರೆ. ಪ್ರಯತ್ನದ ಹಿಂದೆ ನಾನಿದ್ದು ಕರೆತರುವಲ್ಲಿ ಇದ್ದೇನೆಂಬುದು ದೈವ ನೀಡಿದ ನುಡಿ.

ಮುಖಂಡರು ಏನ್ ಹೇಳ್ತಾರೆ?
ರಾಜ್ಯದ ಗೃಹ ಸಚಿವರು ಮೀನುಗಾರರ ಬಾಯಿ ಮುಚ್ಚಿಸಲು ಸಭೆ ನಡೆಸಿದ್ದಾರೆ ವಿನಾ ಶೋಧ ಕಾರ್ಯದಲ್ಲಿ ಅದು ಯಾವುದೇ ಪರಿಣಾಮ ಬೀರಿಲ್ಲ. ಆವರ ಹೇಳಿಕೆಯಂತೆ ಮೂರು ರಾಜ್ಯಗಳ ಗೃಹ ಕಾರ್ಯದರ್ಶಿಗಳ ಸಭೆಯೂ ಆಗಿಲ್ಲ ಎಂದು ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ ಆರೋಪಿಸಿದ್ದಾರೆ. ಪತ್ತೆ ಕಾರ್ಯದಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಇಸ್ರೋ ಅಧ್ಯಕ್ಷರೇ ಹೇಳಿರುವಂತೆ ಈವರೆಗೆ ಅವರನ್ನು ಯಾರೂ ಸಂಪರ್ಕಿಸಿಲ್ಲ. ರಾಜ್ಯ ಸರಕಾರ ತತ್‌ಕ್ಷಣ ಕೇಂದ್ರದ ನೆರವು ಪಡೆದು ಪತ್ತೆ ಹಚ್ಚಬೇಕು, ಇಲ್ಲವೇ ರಾಜ್ಯದ ಮೀನುಗಾರಿಕೆ ಮತ್ತು ಗೃಹಸಚಿವರಿಬ್ಬರೂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂಬ ಆಗ್ರಹವೂ ಇದೆ.

Comments are closed.