ಕರ್ನಾಟಕ

ಜೆಡಿಎಸ್​ ಪಕ್ಷವನ್ನು ಕಾಂಗ್ರೆಸ್​ ತೃತೀಯ ದರ್ಜೆಯ ನಾಗರಿಕರಂತೆ ಕಾಣಬಾರದು: ಮುಖ್ಯಮಂತ್ರಿ ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು: ರಾಜ್ಯದ ಜೆಡಿಎಸ್​- ಕಾಂಗ್ರೆಸ್​ ಮೈತ್ರಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂಬ ಬಗ್ಗೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್​ ಮುಖಂಡ ಎಚ್​.ಡಿ. ದೇವೇಗೌಡ ಘೋಷಿಸಿದ್ದರು. ಇಂದು ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಜೆಡಿಎಸ್​ ಪಕ್ಷವನ್ನು ಕಾಂಗ್ರೆಸ್​ ತೃತೀಯ ದರ್ಜೆಯ ನಾಗರಿಕರಂತೆ ಕಾಣಬಾರದು. ಎರಡೂ ಪಕ್ಷಗಳೂ ಕೊಟ್ಟು-ತೆಗೆದುಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪರಸ್ಪರ ಹೊಂದಾಣಿಕೆಯಿಂದ ಬಿಜೆಪಿ ವಿರುದ್ಧ ಸಮರ ಸಾರಲು ಸಾಧ್ಯ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು, ಜೆಡಿಎಸ್​ ಮತ್ತು ಕಾಂಗ್ರೆಸ್​ ಪಕ್ಷಗಳು ಕರ್ನಾಟಕ ಹಾಗೂ ಕೇರಳದಲ್ಲಿ ಸೀಟು ಹಂಚಿಕೆ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಸ್ಪರ್ಧಿಸಲಿವೆ ಎಂದು ಹೇಳಿದ್ದರು. ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರವಾಗಿ ಮಿತ್ರಪಕ್ಷಗಳಲ್ಲಿ ಹಲವಾರು ಅಸಮಾಧಾನಗಳು ತಲೆದೋರಿದೆ. ಜೆಡಿಎಸ್​ಗೆ ಸ್ಪರ್ಧಿಸಲು ಕೆಲವು ಪ್ರಮುಖ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲು ಕಾಂಗ್ರೆಸ್​ ನಾಯಕರೇ ಒಪ್ಪುತ್ತಿಲ್ಲ ಎನ್ನಲಾಗಿದೆ.

ಪಿಟಿಐ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಸಿಎಂ ಕುಮಾರಸ್ವಾಮಿ, ಮೈತ್ರಿ ಮಾಡಿಕೊಂಡ ಮೇಲೆ ಎರಡೂ ಪಕ್ಷಗಳ ನಾಯಕರ ನಡುವೆ ಸಂಕುಚಿತ ಭಾವನೆಗಳು ಇರಬಾರದು. ಎಲ್ಲ ವಿಷಯಗಳಲ್ಲೂ ಹೊಂದಾಣಿಕೆ ಇರಬೇಕು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಳದಿ ಕನ್ನಡಕವನ್ನು ಧರಿಸಿ ಜಗತ್ತನ್ನು ನೋಡುತ್ತಿದ್ದಾರೆ. ಅವರ ಕನ್ನಡಕ ಮಸುಕಾಗುತ್ತಿದೆ. ಜನವಿರೋಧಿ ಅಧಿಕಾರವನ್ನು ನಡೆಸುತ್ತಿರುವ ಅವರು ರಾಹುಲ್​ ಗಾಂಧಿ ವಿರುದ್ಧ ವಿನಾಕಾರಣ ದಾಳಿ ನಡೆಸುತ್ತಿದ್ದಾರೆ ಎಂದಿದ್ದಾರೆ. ಹಾಗೇ, ರಾಹುಲ್​ ಗಾಂಧಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲು ಬಿಜೆಪಿ ವಿರೋಧಿ ಪಕ್ಷಗಳಲ್ಲಿ ಒಮ್ಮತವಿರಲಿಲ್ಲ ಎಂಬ ವಿಷಯವನ್ನೂ ಒಪ್ಪಿಕೊಂಡಿದ್ದಾರೆ.

ಕಹಿ ಅನುಭವಗಳನ್ನು ದಾಟಿ ಬಂದಿದ್ದೇನೆ:

ರಾಜ್ಯದಲ್ಲಿ ಜೆಡಿಎಸ್​- ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳಾಗಿದೆ. ಈ ಅವಧಿಯಲ್ಲಿ ಎಲ್ಲ ಕಹಿ ಅನುಭವಗಳನ್ನು ಮೆಟ್ಟಿನಿಂತು ಅದೀಕಾರ ನಡೆಸುತ್ತಿದ್ದೇನೆ ಎಂದು ಸಿಎಂ ಹೇಳಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಮುಂದುವರಿಯಲಿದೆ. ನಾವು ಈ ಸರ್ಕಾರವನ್ನು ರಚನೆ ಮಾಡಲು ಮುಂದಾಗಿದ್ದರ ಉದ್ದೇಶವೇ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು ಎಂಬುದಾಗಿತ್ತು. ಈಗ ಲೋಕಸಭಾ ಚುನಾವಣೆಯಲ್ಲೂ ಅದೇ ಉದ್ದೇಶದಿಂದ ನಾವು ಕೈಜೋಡಿಸಲಿದ್ದೇವೆ. ಬಿಜೆಪಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇಶದ ವಾತಾವರಣವನ್ನು ಇನ್ನಷ್ಟು ಹದಗೆಡಿಸುತ್ತಾರೆ ಎಂದು ಸಿಎಂ ಹೇಳಿದ್ದಾರೆ.

ದೇಶದ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಮಣ್ಣು ಮುಕ್ಕಿ 3 ರಾಜ್ಯಗಳಲ್ಲಿ ಕಾಂಗ್ರೆಸ್​ ಜಯಭೇರಿ ಬಾರಿಸಿದ್ದು ಅದಕ್ಕೆ ತಾಜಾ ಉದಾಹರಣೆ. ದೇಶದಲ್ಲಿ ಬಿಜೆಪಿ ವಿರೋಧಿ ಅಲೆ ಶುರುವಾಗಿದೆ. ಕಾಂಗ್ರೆಸ್​ ತನ್ನ ಅತಿಯಾದ ಆತ್ಮವಿಶ್ವಾಸವನ್ನು ಬದಿಗಿಟ್ಟು ಪ್ರಚಾರ ಮಾಡಬೇಕಿದೆ ಎಂಬುದು ನನ್ನ ಅಭಿಪ್ರಾಯ. ಅವರ ಹಳೆಯ ಅನುಭವಗಳಿಂದ ಈಗ ಕಾಂಗ್ರೆಸ್​ ನಾಯಕರಿಗೂ ವಾಸ್ತವದ ಅರಿವಾಗಿದೆ. ಅವರು ಆ ಕಹಿ ಅನುಭವಗಳನ್ನು ಮರೆಯಬಾರದು. ಆ ಅನುಭವದ ಪಾಠದಿಂದ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಎದುರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾಂಗ್ರೆಸ್ ನಮ್ಮನ್ನು ಗೌರವದಿಂದ ಕಾಣಬೇಕು:

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡೋಣ ಎಂದು ಕಾಂಗ್ರೆಸ್​ ನಾಯಕರೇ ನಮ್ಮ ಬಳಿ ಬಂದಿದ್ದರು. ಅವರು ನಮ್ಮನ್ನು ಗೌರಯುತವಾಗಿ ನಡೆಸಿಕೊಳ್ಳಬೇಕು. ನಮ್ಮನ್ನು ಮೂರನೇ ದರ್ಜೆಯ ಪ್ರಜೆಗಳಂತೆ ಕಾಣಬಾರದು. ಮೈತ್ರಿಪಕ್ಷ ಎಂದಮೇಲೆ ಕೊಟ್ಟು-ತೆಗೆದುಕೊಳ್ಳುವ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಒಬ್ಬರು ತ್ಯಾಗ ಮಾಡುತ್ತಾ ಇರುತ್ತಾರೆ, ಇನ್ನೊಬ್ಬರು ಹೇರಿಕೆ ಮಾಡುತ್ತಾ ಇರುತ್ತಾರೆ ಎಂದಾದರೆ ಅಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್​ ಮೇಲೆ ವಾಗ್ದಾಳಿ ನಡೆಸಿದ್ದಾರೆ ಸಿಎಂ ಕುಮಾರಸ್ವಾಮಿ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್​ 9 ಹಾಗೂ ಜೆಡಿಎಸ್​ 2 ಸೀಟುಗಳನ್ನು ಗೆದ್ದಿತ್ತು. ಇದೀಗ ಸೀಟು ಹಂಚಿಕೆ ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ಸವಾಲಿನದ್ದಾಗಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ಈ ಎರಡೂ ಪಕ್ಷಗಳ ನಾಯಕರ ನಡುವೆ ತಿಕ್ಕಾಟ ಉಂಟಾಗುವ ಸಾಧ್ಯತೆಯಿದೆ. ಈ ಭಾಗದಲ್ಲಿ ಕಳೆದ ಬಾರಿ ಜೆಡಿಎಸ್​ ಮತ್ತು ಕಾಂಗ್ರೆಸ್​ ನಡುವೆಯೇ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.

ನಮಗೆ 12 ಸ್ಥಾನ ನೀಡಬೇಕು:

2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆಯಲ್ಲಿ ರಾಜ್ಯದ 28 ಸೀಟುಗಳಲ್ಲಿ 12 ಸ್ಥಾನಗಳನ್ನು ನಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್​ ಬಳಿ ಬೇಡಿಕೆ ಇಟ್ಟಿದ್ದೇವೆ. ಕಾಂಗ್ರೆಸ್ ಕೂಡ ತನಗೆ ಮೀಸಲಾಗಿರುವ ಸ್ಥಾನಗಳ ಬಗ್ಗೆ ಚರ್ಚೆ ನಡೆಸುತ್ತಿದೆ. ಎಂದು ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮೈತ್ರಿ ಸರ್ಕಾರ ರಚನೆಯಾದ ನಂತರ ಸಚಿವ ಸ್ಥಾನ, ನಿಗಮ ಮಂಡಳಿಗಳಲ್ಲಿ ಮೂರನೇ ಎರಡು ಭಾಗ ಕಾಂಗ್ರೆಸ್​ಗೆ ಹಾಗೂ ಮೂರನೇ ಒಂದು ಭಾಗ ಜೆಡಿಎಸ್​ಗೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ನಡೆದುಕೊಂಡು ಬರುತ್ತಿದೆ. ಅದೇರೀತಿ, 28 ಲೋಕಸಭಾ ಕ್ಷೇತ್ರಗಳಿದ್ದು, ಅದರಲ್ಲಿ ಕೂಡ ಮೂರನೇ ಎರಡು ಭಾಗವನ್ನು ಕಾಂಗ್ರೆಸ್​ ತೆಗೆದುಕೊಂಡು ಮೂರನೇ ಒಂದು ಭಾಗವನ್ನು ನಮಗೆ ಬಿಟ್ಟುಕೊಡಬೇಕು ಎಂಬುದು ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್​.ಡಿ. ದೇವೇಗೌಡ ಅಭಿಪ್ರಾಯ ಎಂದು ಸ್ಪಷ್ಟಪಡಿಸಿರುವ ಕುಮಾರಸ್ವಾಮಿ, ಈ ಬೇಡಿಕೆಗೆ ಕಾಂಗ್ರೆಸ್​ ಒಪ್ಪಿಗೆ ನೀಡಿದೆಯಾ? ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಲು ನಿರಾಕರಿಸಿದ್ದಾರೆ.

ಈ ಮೈತ್ರಿ ಸರ್ಕಾರ ಲೋಕಸಭಾ ಚುನಾವಣೆಯವರೆಗೆ ಮಾತ್ರ ನಿಲ್ಲಲಿದೆ, ನಂತರ ಉರುಳಿ ಬೀಳಲಿದೆ ಎಂದು ಕೆಲವರು ಭವಿಷ್ಯ ನುಡಿಯತೊಡಗಿದ್ದಾರೆ. ಆದರೆ, ಲೋಕಸಭಾ ಚುನಾವಣೆಯ ನಂತರ ದೆಹಲಿಯಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಕರ್ನಾಟಕದಲ್ಲೂ ಇನ್ನಷ್ಟು ಉತ್ತಮ ವಾತಾರವಣ ನಿರ್ಮಾಣವಾಗಲಿದೆ ಎಂಬ ನಂಬಿಕೆ ನನಗಿದೆ. ಈ ಬಗ್ಗೆ ಯಾರೂ ಊಹಾಪೋಹಗಳನ್ನು ಹಬ್ಬಿಸಬಾರದು. ನಮ್ಮ ಸರ್ಕಾರವನ್ನು ಹೇಗಾದರೂ ಮಾಡಿ ಉರುಳಿಸಬೇಕು ಎಂದು ಬಿಜೆಪಿ ಸಾಕಷ್ಟು ಪ್ರಯತ್ನ ಮಾಡುತ್ತಲೇ ಇದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳ ಶಾಸಕರನ್ನು ತನ್ನತ್ತ ಸೆಳೆಯಲು ಕುತಂತ್ರ ಮಾಡುತ್ತಿದೆ. ಆದರೆ, ಅದ್ಯಾವುದೂ ಉಪಯೋಗಕ್ಕೆ ಬರುವುದಿಲ್ಲ ಎಂದಿದ್ದಾರೆ.

ಬಿಜೆಪಿಯ ಪ್ರಯತ್ನ ವ್ಯರ್ಥವಾಗಲಿದೆ:

ಬಿಜೆಪಿ ನಾಯಕರು ಯಾವೆಲ್ಲ ಶಾಸಕರನ್ನು ಸಂಪರ್ಕಿಸಿದ್ದಾರೆ ಎಂಬ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿದೆ. ಈ ಬಗ್ಗೆ ನಾನು ಸಂಪೂರ್ಣ ವಿವರವನ್ನು ಕಲೆಹಾಕಿದ್ದೇನೆ. ನಮ್ಮ ಸರ್ಕಾರಕ್ಕೆ ಬಿಜೆಪಿಯಿಂದ ಯಾವುದೇ ಧಕ್ಕೆ ಆಗದಂತೆ ನನ್ನಿಂದ ಏನು ಸಾಧ್ಯವೋ ಆ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷದ ಅಖಿಲೇಶ್​ ಯಾದವ್​ ಮತ್ತು ಬಿಎಸ್​ಪಿಯ ಮಾಯಾವತಿ ಕುರಿತು ಪ್ರಸ್ತಾಪಿಸಿರುವ ಸಿಎಂ ಕುಮಾರಸ್ವಾಮಿ, ಇದೊಂದು ಪ್ರಬಲ ಮೈತ್ರಿ. ಆಎರಡೂ ಎದುರಾಳಿ ಪಕ್ಷಗಳು ಒಂದಾಗಿರುವುದರಿಂದ ಅಲ್ಲಿ ಈ ಬಾರಿ ಬಿಜೆಪಿಗೆ ಭಾರೀ ಹಿನ್ನಡೆಯಾಗುವುದು ಖಚಿತ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿಯನ್ನು ಮಣಿಸಲು ಒಂದು ಪ್ರಬಲ ಪಕ್ಷದ ಅಗತ್ಯವಿತ್ತು. ಇದೀಗ ಕಾಂಗ್ರೆಸ್​ನೊಂದಿಗೆ ಪ್ರಾದೇಶಿಕ ಪಕ್ಷಗಳು ಸೇರಿ ನಿರ್ಮಿಸಿಕೊಂಡಿರುವ ಮಹಾಮೈತ್ರ (ಮಹಾಘಟಬಂಧನ್​) ರಾಷ್ಟ್ರೀಯ ಪಕ್ಷಕ್ಕೆ ಪರ್ಯಾಯವಾಗಿ ಕೆಲಸ ಮಾಡಲಿದೆ ಎಂಬ ನಂಬಿಕೆ ನನ್ನದು ಎಂದು ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Comments are closed.