ಕರಾವಳಿ

ಬಂದ್ ಹಿನ್ನೆಲೆ : ದ.ಕ.ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Pinterest LinkedIn Tumblr

ಮಂಗಳೂರು, ಜನವರಿ.08: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಇಂದು ಮತ್ತು ನಾಳೆ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬಿಗು ಭದ್ರತೆ ಕಲ್ಪಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಮತ್ತು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.

ಮುಷ್ಕರ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಬೆಳಗ್ಗೆಯೇ ಪೆಟ್ರೋಲಿಂಗ್ ನಡೆಸಲಾಗುವುದು. ಈಗಾಗಲೇ 4 ಕೆಎಸ್‌ಆರ್‌ಪಿ ತುಕಡಿ, 12 ಸಿಆರ್‌ಪಿ ತುಕಡಿ ಹಾಗೂ ನಗರದ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಸಿಬ್ಬಂದಿ ಬಂದೋಬಸ್ತ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಂಗಳೂರು ಕಮಿಷನರ್ ಟಿ.ಆರ್. ಸುರೇಶ್ ಹೇಳಿದ್ದಾರೆ.

‘ಬಸ್ ಮಾಲಕರು ಬಸ್ ಬಂದ್ ಮಾಡಲ್ಲ, ಭದ್ರತೆ ಬೇಕು’ ಎಂದು ಕೇಳಿದ್ದು ಅವರಿಗೆ ಸೂಕ್ತ ಭದ್ರತೆ ನೀಡಲು ಇಲಾಖೆ ಬದ್ಧವಾಗಿದೆ. ನಗರದಲ್ಲಿ ಅತೀ ಸೂಕ್ಷ್ಮ, ಸೂಕ್ಷ್ಮ ಪ್ರದೇಶಗಳನ್ನು ಗಮನಿಸಿ ಆ ಪ್ರದೇಶದಲ್ಲಿ ವಿಶೇಷ ನಿಗಾಯಿರಿಸಿ ಹೆಚ್ಚುವರಿ ಸಿಬ್ಬಂದಿ ಹಾಕಲಾಗುವುದು. ಭದ್ರತೆ ವಿಷಯದಲ್ಲಿ ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ ಎಂದು ಕಮಿಷನರ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮಾತನಾಡಿ, ಮುಷ್ಕರದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಎರಡು ಕೆಎಸ್‌ಆರ್‌ಪಿ ತುಕಡಿ, ಎರಡು ಡಿಎಆರ್ ತುಕಡಿ, 15 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನಿಯೋಜಿಸಿದ್ದು, ಬೆಳಗ್ಗೆಯಿಂದಲೇ 25 ಕಡೆಯಲ್ಲಿ ಪೆಟ್ರೋಲಿಂಗ್ ನಡೆಸಲಾಗುವುದು. ಜೊತೆಗೆ 100ಕ್ಕೂ ಹೆಚ್ಚು ಕಡೆ ಸೂಕ್ತ ಭದ್ರತೆ (ಪಾಯಿಂಟ್‌ ಔಟ್) ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾರ್ಮಿಕ ಸಂಘಟನೆಗಳಿಂದ ಸಾರ್ವತ್ರಿಕ ಮುಷ್ಕರಕ್ಕೆ ಕರೆ :

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳಾದ ಇಂಟಕ್, ಎಐಟಿಯುಸಿ, ಸಿಐಟಿಯು, ಎಚ್‌ಎಂಎಸ್, ಎಐಯುಟಿಯುಸಿ, ಯುಟಿಯುಸಿ, ಬ್ಯಾಂಕ್, ಇನ್ಶೂರೆನ್ಸ್, ಪೋಸ್ಟ್, ಆರ್‌ಎಂಎಸ್, ರೈಲ್ವೆ, ಬಿಎಸ್ಸೆನ್ನೆಲ್, ಸರಕಾರಿ ನೌಕರರು, ಖಾಸಗಿ ಸಾರಿಗೆ ನೌಕರರು, ಬಸ್, ಆಟೊ ಚಾಲಕರ ಸಹಿತ ಕಾರ್ಮಿಕ ವಲಯವು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ.

ದ.ಕ. ಜಿಲ್ಲೆಯಲ್ಲಿ ರಿಕ್ಷಾ ಚಾಲಕರ ಸಂಘ ಬೆಂಬಲ ಸೂಚಿಸಿದೆ. ದ.ಕ. ಬೀದಿಬದಿ ವ್ಯಾಪಾರಸ್ಥರ ಸಂಘವು ಬಂದ್‌ಗೆ ಬೆಂಬಲ ಸೂಚಿಸಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ. ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಸಮರ್ಪಕ ಜಾರಿ ಮಾಡಬೇಕು. ಮೋದಿ ಸರಕಾರದ ಅವಧಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಯೋಜನೆಗಳನ್ನು ರೂಪಿಸದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್‌ ಪೂಜಾರಿ ತಿಳಿಸಿದ್ದಾರೆ.

ಬ್ಯಾಂಕ್‌ ನೌಕರರ ಸಂಘಟನೆಗಳೂ ಬಂದ್‌ಗೆ ಬೆಂಬಲ ನೀಡಿರುವ ಕಾರಣ ಬ್ಯಾಂಕ್‌ ವ್ಯವಹಾರಗಳೂ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ಜಿಲ್ಲಾ ರಿಕ್ಷಾ ಚಾಲಕರ ಸಂಘ, ಸಿಪಿಐ (ಎಂ), ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್ವಾದಿ), ಸಿಪಿಐ ಬೆಂಬಲ ಸೂಚಿಸಿವೆ. ಮೋಟಾರ್‌ ಟ್ರಾನ್ಸ್‌ಪೊರ್ಟ್‌ ಆ್ಯಂಡ್‌ ಎಂಜಿನಿಯರಿಂಗ್‌ ವರ್ಕರ್ಸ್‌ ಯೂನಿಯನ್‌ ಬೆಂಬಲಿತ ಕಾರ್ಮಿಕ ಸಂಘಟನೆ, ದಕ್ಷಿಣ ಕನ್ನಡ ಜಿಲ್ಲಾ ಡಿವೈಎಫ್‌ಐ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘದ (ಹಸಿರು ಸೇನೆ), ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು), ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ರಾಜ್ಯ ಪಿಂಚಣಿದಾರರ ಸಂಘದ, ಅಖೀಲ ಭಾರತ ಬೀಡಿ ಫೆಡರೇಶನ್‌ (ಸಿಐಟಿಯು) ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

Comments are closed.