ಕರಾವಳಿ

100ನೇ ವಿಶೇಷ ಪೊಲೀಸ್ ಫೋನ್ ಇನ್ ಕಾರ್ಯಕ್ರಮ : ಟ್ರಾಫಿಕ್ ಸುಧಾರಣೆಗೆ ಸಹಕರಿಸಿದವರಿಗೆ ಗೌರವ – ಸಮ್ಮಾನ

Pinterest LinkedIn Tumblr

ಮಂಗಳೂರು, ಜನವರಿ.05: ಮಂಗಳೂರು ನಗರ ಕಮಿಷನರೇಟ್ ವತಿಯಿಂದ ಪೊಲೀಸ್ ಆಯುಕ್ತಾಲಯದಲ್ಲಿ ಪ್ರತೀ ವಾರ ನಡೆಯುವ ವಿಶೇಷ ಪೊಲೀಸ್ ಫೋನ್ ಇನ್ ಕಾರ್ಯಕ್ರಮಕ್ಕೆ ನೂರರ ಸಂಭ್ರಮ. 100ನೇ ವಿಶೇಷ ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಪ್ರಯುಕ್ತ ಶುಕ್ರವಾರ ಪೊಲೀಸ್ ಆಯುಕ್ತಾಲಯದಲ್ಲಿ ಪೊಲೀಸ್ ಇಲಾಖೆ, ಮನಪಾ, ಸಾರಿಗೆ, ಕೆಎಸ್ಸಾರ್ಟಿಸಿ ಹಾಗೂ ಪತ್ರಕರ್ತರ ಸಮ್ಮುಖ ಸಂವಾದ ಕಾರ್ಯಕ್ರಮದ ನಡೆಯಿತು.

ಈ ವೇಳೆ ಪೊಲೀಸ್ ಆಯುಕ್ತ ಟಿ.ಅರ್.ಸುರೇಶ್ ಅವರು ಮಾತನಾಡಿ, ಪೊಲೀಸ್ ಇಲಾಖೆ ಮತ್ತು ಜನಸಾಮಾನ್ಯರ ಮಧ್ಯೆ ಸಂವಹನವಾಗಿರುವ ಪೊಲೀಸ್ ಫೋನ್ ಇನ್ ಕಾರ್ಯಕ್ರಮವು ಅತ್ಯಂತ ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಜನರ ಸ್ಪಂದನೆಯೇ ಸಾಕ್ಷಿಯಾಗಿದೆ. ಆದರೆ 100ನೇ ಫೋನ್ ಇನ್ ಕಾರ್ಯಕ್ರಮದಲ್ಲೂ ಕೆಲವು ಸಮಸ್ಯೆಗಳು ಪುನರಾವರ್ತನೆಯಾಗುತ್ತಿರುವುದು ಶೋಭೆಯಲ್ಲ. ಹಾಗಾಗಿ ಸಮಸ್ಯೆಗಳನ್ನು ಹೊತ್ತುಕೊಂಡು ಬರುವ ಫೋನ್ ಕರೆಗಳಲ್ಲಿ ಸಮಸ್ಯೆಗಳು ಪುನರಾವರ್ತನೆ ಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.

ಈ ಹಿಂದಿನ ಆಯುಕ್ತ ಚಂದ್ರಶೇಖರ್ 2016ರ ಆಗಸ್ಟ್ 5ರಂದು ಇದನ್ನು ಆರಂಭಿಸಿದ್ದು, ಅವರ ಅವಧಿಯಲ್ಲಿ 44 ಫೋನ್ ಇನ್ ಕಾರ್ಯಕ್ರಮಗಳಾಗಿವೆ. ಆ ಬಳಿಕ ತನ್ನ ಅಧಿಕಾರವಧಿಯಲ್ಲಿ 56 ಕಾರ್ಯಕ್ರಮಗಳು ಜರುಗಿವೆ. ಒಟ್ಟು 2,242 ಫೋನ್ ಕರೆಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ 1,584 ಸಂಚಾರ ವಿಭಾಗಕ್ಕೆ ಮತ್ತು 359 ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದಾಗಿವೆ. 97 ಇತರ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಎಲ್ಲಾ ಕರೆಗಳನ್ನೂ ಅತ್ಯಂತ ತಾಳ್ಮೆಯಿಂದ ಸ್ವೀಕರಿಸಲಾಗಿದೆ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಸುಮಾರು 300ರಷ್ಟು ಕರೆಗಳಿಗೆ ತಕ್ಷಣ ಸ್ಪಂದಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ನುಡಿದರು.

100ನೇ ವಿಶೇಷ ಫೋನ್ ಇನ್ ಕಾರ್ಯಕ್ರಮವನ್ನು 10 ಗಂಟೆಯಿಂದ 11.10ರವರೆಗೆ ನಡೆಸಲಾಯಿತು. ಸುಮಾರು 37 ಕರೆಗಳು ಸ್ವೀಕರಿಸಲ್ಪಟ್ಟವು. ಕರೆ ಮಾಡಿದ ಬಹುತೇಕ ಮಂದಿ ಪೊಲೀಸ್ ಇಲಾಖೆಯನ್ನು ಅಭಿನಂದಿಸಲು ಮರೆಯಲಿಲ್ಲ. ಫೋನ್ ಕರೆ ಸ್ವೀಕರಿಸಿದ ಆಯುಕ್ತರು ಕೂಡ ಅತ್ಯಂತ ಲವಲವಿಕೆಯಿಂದಲೇ ಅಭಿನಂದನೆಗಳನ್ನು ಸ್ವೀಕರಿಸಿದರಲ್ಲದೆ ಸಲಹೆ-ಸೂಚನೆಗಳನ್ನೂ ಬಯಸಿದರು.

ಗೌರವ – ಸನ್ಮಾನ

ಫೋನ್-ಇನ್ ಕಾರ್ಯಕ್ರಮ ಹಾಗೂ ಟ್ರಾಫಿಕ್ ಸುಧಾರಣೆಗೆ ಸಹಕರಿಸಿದ 97ರ ಹರೆಯದ ಜೋ ಗೋನ್ಸಾಲ್ವಿಸ್ , ಪ್ರಾನ್ಸಿಸ್ ಮಾಕ್ಸಿಮ್ ಮೋರಾಸ್ (ಟ್ರಾಫಿಕ್ ವಾರ್ಡನ್), ಜೊಸೆಫ್ ಡಿಸೋಜ (ಸಾಮಾಜಿಕ ಕಾರ್ಯಕರ್ತರು), ರಮೇಶ್ ಚಿಕ್ಕಮಗಳೂರು (ಮಾದರಿ ಅಟೋ ಚಾಲಕ),ಫೋನ್-ಇನ್‌ನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಎಎಸ್ಸೈ ಯೂಸುಫ್, ಎಚ್‌ಸಿ ಪುರುಷೋತ್ತಮ್, ವರುಣ್ ಆಳ್ವ, ಇವೆಂಟ್‌ನ ಗಣೇಶ್ ನಾಯಕ್ ಮುಲ್ಕಿ ಅವರನ್ನು ಗೌರವಿಸಲಾಯಿತು.

2018ರಲ್ಲಿ ಪೊಲೀಸ್ ಇಲಾಖೆಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಣ್ಣಗುಡ್ಡ ಸರಕಾರಿ ಶಾಲೆಯ ವಿದ್ಯಾರ್ಥಿಗಳಾದ ಬಸವರಾಜ್ ನಾ ಹುಳ್ಳಲ್ಲಿ, ವೀರೇಶ್ ಬಸವರಾಜ್ ಸತ್ಯಾಲ್, ಜ್ಯೋತಿ ಅವರಿಗೆ ಬಹುಮಾನ ವಿತರಿಸಲಾಯಿತು.

ದ.ಕ.ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪೊಲೀಸ್ ಇಲಾಖೆಯ ಪರವಾಗಿ ಆಯುಕ್ತ ಟಿ.ಆರ್.ಸುರೇಶ್ ಅವರನ್ನು ಸನ್ಮಾನಿಸ ಲಾಯಿತು.  ಈ ಸಂದರ್ಭ ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಅಧಿಕಾರಿ ದೀಪಕ್ ಕುಮಾರ್, ಆರ್‌ಟಿಒ ಜಾನ್ ಮಿಸ್ಕಿತ್, ಪತ್ರಕರ್ತರ ಸಂಘದ ಅಧ್ಯಕ್ಷ  ಶ್ರೀನಿವಾಸ ನಾಯಕ್ , ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಉಪಸ್ಥಿತರಿದ್ದರು.

Comments are closed.