ಕರಾವಳಿ

ಅಕ್ರಮ ಸಂಬಂಧಕ್ಕೆ ಮಕ್ಕಳಿಬ್ಬರಿಗೆ ವಿಷವಿಕ್ಕಿ ಕೊಂದ ಪಾಪಿ ತಂದೆ ಮೇಲಿನ ಆರೋಪ ಸಾಭೀತು

Pinterest LinkedIn Tumblr

ಕುಂದಾಪುರ: ತನ್ನ ಮನೆಯಲ್ಲಿ ಕೆಲಸಕ್ಕಿದ್ದಾಕೆಯೊಡನೆ ಅಕ್ರಮ ಸಂಬಂಧ ಹೊಂದಿದ್ದು ಇದಕ್ಕೆ ತನ್ನ ಕುಟುಂಬ ಸಮಸ್ಯೆಯಾಗುತ್ತಿದೆಯೆಂಬ ನೆಲೆಯಲ್ಲಿ ಎಲ್ಲರನ್ನೂ ಕೊಲ್ಲಲು ಉಪಹಾರದಲ್ಲಿ ವಿಷ ಹಾಕಿ ಇಬ್ಬರು ಮಕ್ಕಳ ಸಾವು ಹಾಗೂ ಪತ್ನಿ ಕೊಲೆಯತ್ನಕ್ಕೆ ಕಾರಣನಾದ ಆರೋಪಿ ವಿರುದ್ಧ ಹೊರಿಸಲಾದ ಎಲ್ಲಾ ದೋಷಾರೋಪಣೆಗಳು ಸಾಭೀತಾದ ಹಿನ್ನೆಲೆಯಲ್ಲಿ ಬೈಂದೂರು ಗಂಗನಾಡು ನಿವಾಸಿ ಶಂಕರನಾರಾಯಣ ಹೆಬ್ಬಾರ್‌(47) ಅಪರಾಧಿಯೆಂದು ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ತೀರ್ಪು ಪ್ರಕಟಿಸಿದ್ದಾರೆ.

ಬೈಂದೂರು‌ ಗಂಗನಾಡು ಎಂಬಲ್ಲಿ 2016 ಅಕ್ಟೋಬರ್ 16 ರಂದು ನಡೆದಿದ್ದ ಘಟನೆ ಇದಾಗಿದೆ. ಘಟನೆಯಲ್ಲಿ ಹೆಬ್ಬಾರರ ಮಗ ಅಶ್ವಿನ್‌ಕುಮಾರ್‌(16), ಮಗಳು ಐಶ್ವರ್ಯ ಲಕ್ಷ್ಮೀ(14) ಅಸುನೀಗಿದ್ದರು. ಮತ್ತು ಪತ್ನಿ ಮಹಾಲಕ್ಷ್ಮೀ ಗಂಭೀರ ಸ್ಥೀತಿ ತಲುಪಿ ಬಚಾವ್ ಆಗಿದ್ದರು.

(ಅಶ್ವಿನ್‌ಕುಮಾರ್‌, ಐಶ್ವರ್ಯ ಲಕ್ಷ್ಮೀ)

(ಅಪರಾಧಿ ಶಂಕರನಾರಾಯಣ ಹೆಬ್ಬಾರ್)

ಅಡುಗೆ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದ ಶಂಕರನಾರಾಯಣ ಹೆಬ್ಬಾರ್ ತನ್ನ ಮನೆಯ ಕೆಲಸದಾಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದು ಆಕೆ ಇನ್ನೊಬ್ಬನ ಜೊತೆ ವಿವಾಹವಾಗಲು ಮುಂದಾದಾಗ ಆ ವಿರಹವೇದನೆಯನ್ನು ತಾಳದ ಶಂಕರನಾರಾಯಣ ಆಕೆಯಿಲ್ಲದೇ ನಾವ್ಯಾರು ಬದುಕಬಾರದು ಎಂದು ತನ್ನ ಮತ್ತು ಆಕೆಯ ಸಲುಗೆಯ ಕುರಿತು ಮತ್ತು ತನ್ನ ವಿರಹವೇದನೆಯ ಕುರಿತು ಸುದೀರ್ಘ ೧೮ ಪುಟಗಳ ಡೆತ್ ನೋಟ್ ಬೆರೆದಿಟ್ಟು ತಾನೇ ಉಪಹಾರ ತಯಾರು ಮಾಡಿ ಅದಕ್ಕೆ ವಿಷ ಹಾಕಿ ಮಕ್ಕಳು ಹಾಗೂ ಪತ್ನಿಗೆ ನೀಡುತ್ತಾನೆ. ಅಲ್ಲದೇ ತನ್ನ ಮೇಲೆ ಅನುಮಾನ ಬಾರದಿರಲಿ ಎಂಬಂತೆ ಸ್ವಲ್ಪ ಪ್ರಮಾಣದಲ್ಲಿ ತಾನೂ ಕೂಡ ಸೇವಿಸಿರುತ್ತಾನೆ. ಮುಂಜಾನೆ ದಿನ ಮನೆಯಿಂದ ಹಾಲುಡೇರಿಗೆ ಹಾಲು ತಾರದಿದ್ದಾಗ ಈ ಬಗ್ಗೆ ಗಮನಿಸಲು ಅಕ್ಕಪಕ್ಕದವರು ಮನೆ ಬಳಿ ಬಂದಾಗ ವಿಷಾಹಾರ ಸೇವಿಸಿ ನಾಲ್ವರು ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತಾದರೂ ಕೂಡ ಮಕ್ಕಳಿಬ್ಬರು ಮೃತರಾಗಿ ಪತ್ನಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಪಾಲಾಗಿದ್ದು ಕೆಲ ಸಮಯಗಳ ನಂತರ ಸುಧಾರಿಸಿದ್ದರು. ಪ್ರತಿಭಾನ್ವಿತ ಇಬ್ಬರು ಮಕ್ಕಳನ್ನು ತನ್ನ ಅಕ್ರಮ ಅನೈತಿಕ ಪ್ರೇಮದ ಬಲಿಪಡೆದ ಈ ವಿಲಕ್ಷಣ ಘಟನೆ ಆ ಗ್ರಾಮದ ಜನರನ್ನು ಬೆಚ್ಚಿಬೀಳಿಸಿತ್ತು.

ಬೈಂದೂರು ಅಂದಿನ ಸಿಪಿಐ ರಾಘವ ಪಡೀಲ್ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹೆಬ್ಬಾರ್ ಪತ್ನಿ ಸಹಿತ 17 ಮಂದಿ ಸಾಕ್ಷ್ಯಾಧಾರಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿತ್ತು. ಕಾಯಬೇಕಾದ ತಂದೆಯೇ ಮಕ್ಕಳನ್ನು ಬಲಿ‌ಪಡೆದಿದ್ದ ವಿಲಕ್ಷಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಆರೋಪಿ‌ ವಿರುದ್ಧ ಮಾಡಲಾದ ಕೊಲೆ (ಸೆಕ್ಷನ್ 302), ಕೊಲೆ‌ಯತ್ನ (ಸೆಕ್ಷನ್ 307), ವಿಷವುಣಿಸಿದ್ದಕ್ಕೆ (ಸೆಕ್ಷನ್ 328), ಸಾಕ್ಷ್ಯನಾಶ (ಸೆಕ್ಷನ್ 201), ಆತ್ಮಹತ್ಯೆ ಯತ್ನ (309) ಎಲ್ಲಾ ಆರೋಪಣೆಗಳು ಸಾಭೀತಾಗಿದ್ದು ಆತ ದೋಷಿ ಎಂದು ತೀರ್ಪು ಪ್ರಕಟಿಸಿದೆ.

ಶಿಕ್ಷೆ ಪ್ರಮಾಣ ಪ್ರಕಟ ಕುರಿತು ವಾದ ಮಂಡನೆ ವೇಳೆ ಅಪರಾಧಿಗೆ ಕಾನೂನು ವ್ಯಾಪ್ತಿಯಲ್ಲಿ ಗರಿಷ್ಟ ಶಿಕ್ಷೆ ನೀಡಲು ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು ಅಪರಾಧಿ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಸೋಮವಾರದಂದು ವಾದ ಮಂದನೆಗೆ ನ್ಯಾಯಾಲಯ ಅವಕಾಶ ನೀಡಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.