ಮನೋರಂಜನೆ

ಐಟಿ ದಾಳಿ ಹಿನ್ನೆಲೆ; ತಮ್ಮ ಎಲ್ಲ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಸಿಲಿಕಾನ್ ಸಿಟಿಗೆ ಬಂದ ನಟ ಯಶ್

Pinterest LinkedIn Tumblr

ಬೆಂಗಳೂರು: ತಮ್ಮ ನಿವಾಸಗಳ ಮೇಲೆ ಐಟಿ ದಾಳಿಯಾದ ಹಿನ್ನೆಲೆಯಲ್ಲಿ ನಟ ಯಶ್ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಕೆಜಿಎಫ್ ಚಿತ್ರದ ಪ್ರಮೋಶನ್ ಗಾಗಿ ಯಶ್ ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ಉಳಿದುಕೊಂಡಿದ್ದರು. ಐಟಿ ಅಧಿಕಾರಿಗಳ ವಿಚಾರಣೆಗೆ ಕರೆದಿದ್ದರಿಂದ ತಮ್ಮ ಎಲ್ಲ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಸಿಲಿಕಾನ್ ಸಿಟಿಗೆ ಬಂದಿದ್ದಾರೆ.

ಐಟಿ ದಾಳಿ ಎಂಬುವುದು ದೊಡ್ಡ ವಿಷಯ. ಅಧಿಕಾರಿಗಳು ಲೆಕ್ಕಪತ್ರಗಳನ್ನು ಪರಿಶೀಲನೆ ನಡೆಸುತ್ತಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಮಾತ್ರ ನನಗೆ ಗೊತ್ತಿದೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಊಹಾಪೋಹಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ನೇರವಾಗಿ ಮನೆಗೆ ಹೋಗುತ್ತಿದ್ದೇನೆ. ಬೆಳಗ್ಗೆಯಿಂದ ಮನೆಯವರು ಸಹ ನನ್ನೊಂದಿಗೆ ಸಂಪರ್ಕವಿಲ್ಲ ಎಂದು ಯಶ್ ತಿಳಿಸಿದ್ದಾರೆ.

ನಗರದ ಹೊಸಕೆರೆ ಹಳ್ಳಿಯ ನಿವಾಸಕ್ಕೆ ಆಗಮಿಸಿರುವ ಯಶ್, ಐಟಿ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಮನೆಯಲ್ಲಿರುವ ಯಶ್ ತಾಯಿ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ನನಗೇನೂ ಗೊತ್ತಿಲ್ಲ ಎಂಬ ಉತ್ತರವನ್ನೇ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇಂದು ಬೆಳಗ್ಗೆ ಚಂದನವನದ ನಟರಾದ ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್ ಮತ್ತು ಯಶ್ ನಿವಾಸಗಳ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಇತ್ತ ಸುದೀಪ್ ಸಹ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದಾರೆ. ಸತತ 9ಗಂಟೆಗಳ ಪುನೀತ್ ರಾಜ್‍ಕುಮಾರ್ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಪುನೀತ್ ಸಮಾಧಾನದಿಂದ ಉತ್ತರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಧಿಕಾ ತವರು ಮನೆಯ ಮೇಲೆ ಸಹ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಣಂತನಕ್ಕಾಗಿ ತವರು ಮನೆಯಲ್ಲಿರುವ ರಾಧಿಕಾ ಪಂಡಿತ್, ಅಧಿಕಾರಿಗಳ ಯಾವ ಪ್ರಶ್ನೆಗೂ ಉತ್ತರಿಸಿಲ್ಲ ಎಂಬುದಾಗಿ ಹೇಳಲಾಗುತ್ತಿದೆ. ರಾಧಿಕಾ ನಿವಾಸದ ಪರಿಶೀಲನೆಯನ್ನು ಅಂತ್ಯಗೊಳಿಸಿರುವ ಅಧಿಕಾರಿಗಳು ಅವರ ತಂದೆಯನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು. ಕೆಲ ಸಮಯದ ಬಳಿಕ ರಾಧಿಕಾ ತಂದೆ ಮನೆಗೆ ಬಂದಿದ್ದಾರೆ.

Comments are closed.