ಕರಾವಳಿ

ಮಂಗಳೂರಿಗೆ ಕಾಲಿರಿಸಿದ ಲೂಟಿಕೋರರ ತಂಡ : ಪೊಲೀಸರಿಂದ ಹೈ ಅಲರ್ಟ್ – ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸೂಚನೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.26: ಹೊರರಾಜ್ಯದ ದರೋಡೆ ತಂಡವೊಂದು ದ.ಕ-ಉಡುಪಿ ಜಿಲ್ಲೆಗಳಿಗೆ ಆಗಮಿಸಿದ್ದು, ಈ ತಂಡ ಜನರ ಗಮನ ಬೇರೆಡೆ ಸೆಳೆದು ದರೋಡೆಗೈಯ್ಯುವಲ್ಲಿ ಸಕ್ರಿಯವಾಗಿದೆ, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಇರುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.

ಉಡುಪಿ ಜಿಲ್ಲೆಗೆ ಕಾಲಿಟ್ಟ ಐದು ಮಂದಿಯ ತಂ ತಾವು ಪೊಲೀಸರೆಂದು ನಂಬಿಸಿ ಈಗಾಗಲೇ ದರೋಡೆ ನಡೆಸಿದೆ. ಬಳಿಕ ಇದೇ ರೀತಿಯ ಘಟನೆ ಮಂಗಳೂರಿನಲ್ಲಿಯೂ ನಡೆದಿದೆ. ನಿರ್ಜನ ಪ್ರದೇಶಗಳಲ್ಲಿ ಕಾರ್ಯಾಚರಿಸುವ ತಂಡ ರಸ್ತೆಯಲ್ಲಿ ಹೋಗುವವರನ್ನು ತಡೆದು, ರಸ್ತೆಯಲ್ಲಿ ಒಂದು ಕೊಲೆಯಾಗಿದೆ, ಅಥವಾ ಗಲಾಟೆಯಾಗುತ್ತಿದೆ ಎಂದು ಹೇಳುತ್ತಾರೆ. ಬಳಿಕ ನಿಮ್ಮಲ್ಲಿರುವ ಸೊತ್ತುಗಳನ್ನು ತಮ್ಮಲ್ಲಿ ನೀಡಿ ನೀವು ರಸ್ತೆಯಲ್ಲಿ ಮುಂದೆ ಹೋಗಿ, ಇನ್ನೊಂದು ಭಾಗದಲ್ಲಿ ನಾವು ತಂದು ಕೊಡುತ್ತೇವೆ ಎಂದು ನಂಬಿಸಿ ಅಮಾಯಕರನ್ನು ದರೋಡೆ ನಡೆಸುತ್ತಿದೆ.

ಇದೀಗ ತಂಡ ಮಂಗಳೂರಿಗೂ ಕಾಲಿಸಿರಿಸುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಇದಕ್ಕೆ ಪೂರಕ ಎಂಬಂತೆ ಬೈಕ್‌ನಲ್ಲಿ ಬಂದ ಲೂಟಿಕೋರರ ತಂಡವೊಂದು ತಾವು ‘ಸಿಐಡಿ ಪೊಲೀಸ್’ ಎಂದು ನಂಬಿಸಿ ಚಿನ್ನ, ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ನಗರದ ಕಾರ್‌ಸ್ಟ್ರೀಟ್ ಬಳಿ ನಡೆದಿದೆ.

ಅಳಕೆ ನಿವಾಸಿ ಭಗವಾನ್ (70) ಎಂಬವರು ಇಂದು ಬೆಳಗ್ಗೆ 11:45ರ ವೇಳೆ ನಗರದ ಕಾರ್‌ಸ್ಟ್ರೀಟ್ ಬಿಇಎಂ ಸ್ಕೂಲ್‌ನ ಬಳಿ ನಡೆದುಕೊಂಡು ಹೋಗುತ್ತಿದ್ದು, ಈ ಸಂದರ್ಭ ಬೈಕ್‌ನಲ್ಲಿ ಬಂದ ಇಬ್ಬರು ಹಿಂದಿಯಲ್ಲಿ ಮಾತನಾಡುತ್ತಾ ‘ನಾವು ಸಿಬಿಐ ಪೊಲೀಸರು, ನಗರದಲ್ಲಿ ಚಿನ್ನಾಭರಣ ದರೋಡೆ ಮಾಡುವ ತಂಡವಿದೆ. ನೀವು ನಿಮ್ಮ ಚಿನ್ನಾಭರಣವನ್ನು ಜೋಪಾನವಾಗಿ ಕಿಸೆಯಲ್ಲಿ ಕಟ್ಟಿಡಿ’ ಎಂದು ಹೇಳುತ್ತಾರೆ.

ಆದರೆ ಭಗವಾನ್‌ ಅವರು ಏನು ಪ್ರತ್ಯುತ್ತರ ನೀಡದೆ ಮುಂದೆ ಹೋದಾಗ, ಹಠಬಿಡದ ಆ ಇಬ್ಬರು ಮತ್ತೆ ಅಡ್ಡಗಟ್ಟಿ, ಅದೇ ರೀತಿ ಹೇಳಿ ಅವರನ್ನು ನಂಬಿಸುತ್ತಾರೆ. ಅವರ ಬಣ್ಣದ ಮಾತನ್ನು ನಂಬಿದ ಭಗವಾನ್ ಕೂಡಲೇ ಕನ್ನಡಕ, ಮೊಬೈಲ್, ವಾಚ್, ನಗದು, ಉಂಗುರ, ಚಿನ್ನದ ಸರವನ್ನು ಟವಲ್‌ನಲ್ಲಿ ಕಟ್ಟುತ್ತಾರೆ. ಈ ಸಂದರ್ಭ ಆ ಇಬ್ಬರು ನಾವು ಕಟ್ಟಿಕೊಡುತ್ತೇವೆ ಎಂದು ಹೇಳಿ ತೆಗೆದುಕೊಂಡು ಸ್ವಲ್ಪ ಹೊತ್ತಿನಲ್ಲೇ ಆ ಟವಲ್‌ನ್ನು ಮರಳಿ ನೀಡುತ್ತಾರೆ. ಇದಾದ ನಂತರ ಇಬ್ಬರು ಕೂಡಾ ತಾವು ಬಂದ ಬೈಕ್‌ನಲ್ಲಿ ಪರಾರಿಯಾಗುತ್ತಾರೆ.

ಭಗವಾನ್ ಅವರಿಗೆ ಸ್ವಲ್ಪ ಸಮಯದ ಬಳಿಕ ಸಂಶಯ ಬಂದು ಟವಲ್ ಕಟ್ಟು ಬಿಡಿಸಿ ನೋಡಿದಾಗ ಚಿನ್ನದ ಉಂಗುರ ಮತ್ತು ಸರ ಕಳವಾಗಿತ್ತು. ಉಳಿದ ವಸ್ತುಗಳು ಹಾಗೆ ಉಳಿದಿದ್ದವು. ನಂತರ ಅವರಿಗೆ ಮೋಸ ಹೋಗಿರುವುದು ಸ್ಪಷ್ಟವಾಯಿತು. ಲೂಟಿಯಾದ ಸೊತ್ತಿನ ಮೌಲ್ಯ 70 ಸಾವಿರ ರೂ. ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಬಂದರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಉಡುಪಿಯಲ್ಲಿ ಮಂಗಳವಾರ ಬೆಳಗ್ಗೆ 9:30ರ ವೇಳೆ ದರೋಡೆಕೋರರ ತಂಡವೊಂದು ಇದೇ ಮಾದರಿ ಎರಡು ಕಡೆ ಕೃತ್ಯ ನಡೆಸಿ ಮಂಗಳೂರಿನತ್ತ ಪ್ರಯಾಣ ಬೆಳೆಸಿತ್ತು. ಇದರ ಬಗ್ಗೆ ಉಡುಪಿ ಜಿಲ್ಲಾ ಪೊಲೀಸರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲರ್ಟ್ ಆದ ನಗರ ಪೊಲೀಸರು ಠಾಣೆಗಳ ಸಾಗರ ವಾಹನದಲ್ಲಿ ಧ್ವನಿವರ್ಧಕ ಮೂಲಕ ಮಾಹಿತಿ ನೀಡಿದ್ದರು.

ಪೊಲೀಸರು ಧ್ವನಿವರ್ಧಕದಲ್ಲಿ ಮಾಹಿತಿ ನೀಡಿದರೂ ಗ್ಯಾಂಗ್ ಮಾತ್ರ ಕಾರ್‌ಸ್ಟ್ರೀಟ್ ಸಮೀಪ ವ್ಯಕ್ತಿಯೊಬ್ಬರನ್ನು ಲೂಟಿ ಮಾಡಿ ಪರಾರಿಯಾಗಿದೆ. ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ.

ಉಳ್ಳಾಲದಲ್ಲೂ ಪೊಲೀಸರಿಂದ ಹೈ ಅಲರ್ಟ್ :

ಹೊರರಾಜ್ಯದ ದರೋಡೆ ತಂಡವೊಂದು ಮಂಗಳೂರಿನಲ್ಲೂ ಸಕ್ರಿಯವಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಉಳ್ಳಾಲ ಮತ್ತು ಕೊಣಾಜೆ ಠಾಣಾ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಿಸಿಆರ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಪೊಲೀಸ್ ಕಂಟ್ರೋಲ್ ರೂಂ ಆದೇಶದಂತೆ ಉಳ್ಳಾಲ ಮತ್ತು ಕೊಣಾಜೆ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಪಿಸಿಆರ್ ವಾಹನದ ಮೂಲಕ ಸಾರ್ವಜನಿಕವಾಗಿ ಜಾಗೃತಿ ಪ್ರಕಟಣೆಯನ್ನು ನೀಡುತ್ತಿದ್ದಾರೆ. ಈಗಾಗಲೇ ತೊಕ್ಕೊಟ್ಟು, ಉಳ್ಳಾಲ, ಸೋಮೇಶ್ವರ, ತಲಪಾಡಿ ಹಾಗೂ ಕೊಣಾಜೆ ಭಾಗಗಳಲ್ಲಿ ಘೋಷಣೆ ಮಾಡಿದ್ದಾರೆ.

Comments are closed.