ಕರಾವಳಿ

ಕರಾವಳಿ ಉತ್ಸವ ಉದ್ಘಾಟನ ಕಾರ್ಯಕ್ರಮಕ್ಕೆ ಮುತ್ತಿಗೆ : “ಎಂಆರ್‌ಪಿಎಲ್ ವಿಸ್ತರಣೆ ನಿಲ್ಲಿಸಲು ಆಗ್ರಹ

Pinterest LinkedIn Tumblr

ಮಂಗಳೂರು,ಡಿಸೆಂಬರ್.22: ಮಂಗಳೂರಿನಲ್ಲಿ ಶುಕ್ರವಾರ ಸಂಜೆ ನಡೆದ ದ.ಕ.ಜಿಲ್ಲಾ ಕರಾವಳಿ ಉತ್ಸವ ಉದ್ಘಾಟನ ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಎಂಆರ್‌ಪಿಎಲ್ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು 1,011 ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಎಂಆರ್‌ಪಿಎಲ್‌ನಿಂದ ಈಗಾಗಲೇ ಸ್ಥಳೀಯ ಜನರು ಅನೇಕ ತೊಂದರೆ ಅನುಭವಿಸುತ್ತಿದ್ದಾರೆ. ನಾಲ್ಕನೇ ಹಂತದ ವಿಸ್ತರಣೆಯಿಂದ ಮಂಗಳೂರು ಪರಿಸರದ ಜನತೆ ಮತ್ತಷ್ಟು ತೊಂದರೆಗೆ ಒಳಗಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್‌ನ ಉದ್ದೇಶಿತ ವಿಸ್ತರಣಾ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ (ಕೆಕೆಜೆವಿ) ಯ ಆಶ್ರಯದಲ್ಲಿ ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ‘ತುಳುನಾಡು ಉಳಿಸಿ’ ಜನಾಗ್ರಹ ಸಭೆ ಆಯೋಜಿಸಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಭೋಪಾಲ್ ಅನಿಲ ದುರಂತದ ಸಂತ್ರಸರ ಪರ ಹೋರಾಟಗಾರ ಡಾ. ಸತಿನಾಥ ಸಾರಂಗಿ ಭೂಪಾಲ್ ಪ್ರಧಾನ ಭಾಷಣ ಮಾಡಿದ್ದಾರೆ.

ಆದರೆ ಸಾಯಂಕಾಲ ಲೇಡಿಹಿಲ್ ಸಮೀಪದ ಕರಾವಳಿ ಉತ್ಸವ ಮೈದಾನದಲ್ಲಿ ಕರಾವಳಿ ಉತ್ಸವ ಉದ್ಘಾಟನ ಕಾರ್ಯಕ್ರಮದ ವೇಳೆ ಮೇಯರ್ ಭಾಸ್ಕರ್ ಮೊಯ್ಲಿ ಭಾಷಣ ಮಾಡುತ್ತಿರುವಾಗ ವೇದಿಕೆ ಮುಂಭಾಗಕ್ಕೆ ಏಕಾಏಕಿ ಆಗಮಿಸಿದ ಹೋರಾಟಗಾರ್ತಿ ವಿದ್ಯಾದಿನಕರ್ ನೇತ್ರತ್ವದ ಎಂಆರ್‌ಪಿಎಲ್ ವಿಸ್ತರಣೆ ವಿರೋಧಿ ಹೋರಾಟಗಾರರ ತಂಡ “ಕರಾವಳಿ ಉಳಿಸಿ” – “ಎಂಆರ್‌ಪಿಎಲ್ ವಿಸ್ತರಣೆ ನಿಲ್ಲಿಸಿ” ಎಂಬ ಬರಹದ ಪೋಸ್ಟರ್ ಪ್ರದರ್ಶಿಸುವ ಮೂಲಕ ಪ್ರತಿಭಟನೆಗೆ ಮುಂದಾದರು.

ಇದೇ ವೇಳೆ ಎಂಆರ್‌ಪಿಎಲ್ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಕರಾವಳಿ ಉತ್ಸವ ಕಾರ್ಯಕ್ರಮಕ್ಕೆ ಧಿಕ್ಕಾರ ಕೂಗಿದರು.

ಈ ವೇಳೆ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಖ್ಯಾತ ಸಂಗೀತಾ ನಿರ್ದೇಶಕ ಗುರುಕಿರಣ್, ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್., ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಪಂ ಸಿಇಒ ಡಾ. ಸೆಲ್ವಮಣಿ, ಎಡಿಸಿ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮೆರವಣಿಗೆ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಮಮತಾ ಗಟ್ಟಿ, ಕಾರ್ಯಕ್ರಮ ಸಮಿತಿಯ ಪ್ರಮುಖ್ ನರೇಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಕೂಡಲೇ ಮಧ್ಯೆ ಪ್ರವೇಶಿಸಿದ ಪೊಲೀಸರು ಹೋರಾಟಗಾರರನ್ನು ಸ್ಥಳದಿಂದ ದೂರಕ್ಕೆ ಕರೆದೊಯ್ಯುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದರು.

Comments are closed.