ಕರ್ನಾಟಕ

ಕಂಬಳ ಕೋಣಗಳನ್ನು ಸಾಕುವ ಪರಿಯನ್ನು ಪೆಟಾದವರು ನೋಡಬೇಕು!

Pinterest LinkedIn Tumblr


ವರ್ಷದಲ್ಲಿ 18 ದಿನ ನಾಲ್ಕೈದು ನಿಮಿಷದಂತೆ ಕೆಸರುಗದ್ದೆಯಲ್ಲಿ ಕೋಣಗಳನ್ನು ಓಡಿಸುವುದನ್ನೇ ಹಿಂಸೆ ಎಂದು ಬಿಂಬಿಸುವ ಪೆಟಾ, ವರ್ಷಪೂರ್ತಿ ಮಗುವಿನಂತೆ ಕೋಣಗಳನ್ನು ಯಜಮಾನರು ಸಾಕಿರುವುದನ್ನು ನೋಡಿಲ್ಲ. ನೋಡಿದರೆ ಇಷ್ಟು ಪ್ರಾಣಿ ದಯೆ ಇರುವ ಮಂದಿ ಎಲ್ಲಿಯೂ ಇಲ್ಲ ಎಂದು ಹೇಳುತ್ತಾರೇನೋ?!

ನೆಲದ ಆಚರಣೆಯಾಗಿರುವ ಕಂಬಳದ ಕೋಣಗಳಿಗೆ ಕರಾವಳಿಯಲ್ಲಿ ರಾಜಮರ್ಯಾದೆ ಇದೆ. ಅದಕ್ಕೆಂದೇ ಅತ್ಯಾಧುನಿಕ ಹಟ್ಟಿ, ಫ್ಯಾನ್, ಈಜುಕೊಳ (ನಂದಳಿಕೆ ಶ್ರೀಕಾಂತ್ ಭಟ್, ವಿನು ವಿಶ್ವನಾಥ ಶೆಟ್ಟಿ ಕರಿಂಜೆ, ಮಾಳ ಶೇಖರ ಶೆಟ್ಟಿ ಪ್ರಮುಖರು) ಅಭ್ಯಾಸಕ್ಕಾಗಿ ಟ್ರಾೃಕ್, ಶಾಶ್ವತ ಸಹಾಯಕರನ್ನು ನೇಮಿಸಿಕೊಂಡವರು ಹತ್ತಾರು ಮಂದಿ ಸಿಗುತ್ತಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಮೆರೆಸುತ್ತಾರೆ, ಕೋಣಗಳು ಪದಕ ಗೆದ್ದಾಗ ತಾವೇ ಗೆದ್ದಂತೆ ಸಂಭ್ರಮಿಸುತ್ತಾರೆ. ಇಲ್ಲಿ ಶ್ರೀಮಂತಿಕೆಯ ಬಿಂಬ ಇರುವುದಾದರೂ ಪ್ರಾಣಿಪ್ರೀತಿಯನ್ನು ಇಲ್ಲವೆನ್ನುವವರಾರು?

ಕೋಣಗಳ ಜತೆ ಯಜಮಾನರು, ಓಟಗಾರರು, ಸಾಕುವವರು, ಕೊನೆಗೆ ಅಭಿಮಾನಿಗಳೂ ಎಷ್ಟು ಪ್ರೀತಿ ಇಟ್ಟುಕೊಂಡಿರುತ್ತಾರೆ ಎಂಬುದಕ್ಕೆ ಇತ್ತೀಚೆಗೆ ನಂದಳಿಕೆ ಶ್ರೀಕಾಂತ್ ಭಟ್‌ರ ರಾಕೆಟ್ ಮೋಡ ಮೃತಪಟ್ಟಾಗ ಕಂಡಿದ್ದೇವೆ. ಅದಕ್ಕೂ ಮೊದಲು ಕೂಡ ಕೋಣಗಳಿಗಾಗಿ ಕಣ್ಣೀರಿಟ್ಟವರನ್ನು ನೋಡಿದ್ದೇವೆ, ಆದರೆ ಸಾಮಾಜಿಕ ಜಾಲತಾಣದ ಪ್ರಭಾವದಿಂದ ಈಗ ಜಗತ್ತೇ ಈ ಪ್ರೀತಿಯನ್ನು ಸಾಕ್ಷೀಕರಿಸುತ್ತಿದೆ. ಪ್ರೀತಿಯ ಕೋಣಗಳು ಸತ್ತಾಗ ಮನುಷ್ಯರಂತೆ ಸಕಲ ಸಂಸ್ಕಾರಗಳನ್ನು ನೆರವೇರಿಸುವುದು ದಶಕಗಳಿಂದ ನಡೆಯುತ್ತಿದೆ. ಪ್ರಾಣಿ ಪ್ರೀತಿ ಗುರುತಿಸಲು ಇವಿಷ್ಟು ಸಾಲದೆ?

ಸಾಕುವ ವಿಧಾನ: ಕೋಣಗಳು ಸಾಕುಪ್ರಾಣಿಗಳು. ಹೆಚ್ಚಿನ ಬಿಸಿಲು, ತಾಪಮಾನ ತಡೆದುಕೊಳ್ಳುವುದಿಲ್ಲ. ನೆರಳಿನ ಆಸರೆ ಬೇಕು. ಇವುಗಳನ್ನು ಗುಡ್ಡಕ್ಕೆ, ಗೋಮಾಳಕ್ಕೆ ಕಳುಹಿಸಿದರೆ ಬದುಕಲಾರವು. ಒಂದು ಕೋಣಕ್ಕೆ ದಿನಕ್ಕೆ ಕನಿಷ್ಠ ಮೂರುವರೆ ಕೆ.ಜಿ. ಹುರುಳಿ, 100 ಎಂ.ಎಲ್. ತೆಂಗಿನೆಣ್ಣೆ, 10 ಸೂಡಿ ಬೈಹುಲ್ಲು, 40 ಲೀಟರ್ ನೀರು ಬೇಕು. ಪ್ರತಿದಿನ ಸ್ನಾನ ಮಾಡಿಸಿ ಹಚ್ಚಲು 150 ಎಂ.ಎಲ್. ತೆಂಗಿನೆಣ್ಣೆ ಬೇಕೇಬೇಕು. ಪ್ರತಿದಿನ ಆರೈಕೆ ಕಡ್ಡಾಯ.

ಕೋಣಗಳಲ್ಲೂ ಹಲವು ಜಾತಿ: ಕೋಣಗಳಲ್ಲಿ ಹಲವು ಜಾತಿ ಕೋಣಗಳಿವೆ. ನಿಪ್ಪಾಣಿ, ಬೆಳಗಾವಿ, ಹಾವೇರಿ, ಮಲೆಬೆನ್ನೂರು (ಬಡೆಕಾಯಿ ಘಾಟಿ) ಕಡೆಯಿಂದ ಬರುವ ಕೋಣಗಳು ಎತ್ತರ ಜಾಸ್ತಿ. ದ.ಕ, ಉಡುಪಿ, ಸಕಲೇಶಪುರ, ಮೂಡಿಗೆರೆ, ಹೊಸಕೋಟೆ, ಬೇಲೂರು (ಮೂಡುಘಾಟಿ) ಈ ಕಡೆ ಕೋಣಗಳು ಗಿಡ್ಡಕಾಲು ಹೊಂದಿದ್ದು, ಎತ್ತರ ಕಡಿಮೆ. ಆದರೂ ಓಟದಲ್ಲಿ ಎರಡೂ ಸಮಾನ ಸ್ಪರ್ಧೆ ನೀಡುತ್ತವೆ. ಎತ್ತರದ ಕೋಣಗಳಿಗಿಂತ ಗಿಡ್ಡತಳಿ ಕೋಣ ಸಾಕಣಿಕೆ ಸುಲಭ. ಇವುಗಳನ್ನು ಮಲಬಾರ ಕೋಣಗಳೆಂದೇ ಗುರುತಿಸುತ್ತಾರೆ. ಕಾನರಸೆ ಕೋಣ, ಮಲಬಾರ ಕೋಣಗಳಿಗಿಂತ ಎತ್ತರ. ಅಗಲವಾದ ಎದೆ, ಕಾಲು ಎಲುಬು ಸಪೂರ, ದೊಡ್ಡ ಕಣ್ಣುಗಳು, ಸಪೂರ ಬಾಲ, ನೇರ ಗೊರಸು (ಕುದುರೆಯಂತೆ) ಹೊಂದಿರುವ ಕೋಣಗಳು ಚೆನ್ನಾಗಿ ಓಡುವುದರಿಂದ ಬೇಡಿಕೆ ಹೆಚ್ಚು.

ವಿಚಿತ್ರ ಹೆಸರುಗಳ ಹಿಂದೆ: ಕಾಳ, ಬೊಳ್ಳ, ಕೆಂಚ, ಕಬಿಲ ಜಾತಿ ಆಧಾರದಲ್ಲಿ ಕೋಣಗಳಿಗೆ ಇಡುವ ಹೆಸರುಗಳು. ಬೊಳ್ಳ ಜಾತಿಗಿಂತ ಕಾಳ ಜಾತಿಯ ಕೋಣಗಳು ಬಿಸಿಲಿನ ತಾಪಕ್ಕೆ ಹೆಚ್ಚು ಹೊಂದುವುದರಿಂದ ಬೇಡಿಕೆ ಜಾಸ್ತಿ. ಕೋಡುಗಳ ಆಧಾರ ಮೇಲೆ ಕುಟ್ಟಿ, ಪಾಂಚ, ಮೊಂಡ, ಕಾಜೆ ಎಂದು ಹೆಸರಿಡಲಾಗುತ್ತಿತ್ತು. ಕ್ರಮೇಣ ಮನೆಯ ಹೆಸರಿನೊಂದಿಗೆ ಜನಪ್ರಿಯವಾದ ಕೋಣಗಳ ಹೆಸರು- ಕರಿಕಟ್ಟ ಬೊಳ್ಳ, ತಜಂಕೊಟ್ಟು ಬೊಳ್ಳ, ಮಡಪಾಡಿ ಕಾಟಿ, ರಾಕೆಟ್ ಬೊಳ್ಳ ಮುಂತಾದುವು. ಹೀಗೆ ಕೋಣಗಳ ಪ್ರೀತಿ, ಆರೈಕೆಯಲ್ಲಿ ಹೆಸರಿಗೂ ಪ್ರಾಮುಖ್ಯತೆ ಬಂತು. 60ರ ದಶಕದಲ್ಲಿ ಜಯ-ಗೋಪಾಲ ಹೆಸರಿನ ಕೋಣಗಳ ಹೆಸರನ್ನು ಕರೆಗೆ ಇಟ್ಟು ನಿಡ್ಪಳಿಯಲ್ಲಿ ಕಂಬಳ ನಡೆಸಲಾಯಿತು. 80ರ ದಶಕದ ಬಳಿಕ ಚೆನ್ನ, ನಾಗರಾಜ, ರಾಜ, ಶಂಕರ, ಪಾಂಡು, ಮುಖೇಶ ಹೆಸರಿನ ಕೋಣಗಳು ಜನಪ್ರಿಯವಾದವು. ಇಂಥ ಹೆಸರುಗಳು ಈಗಲೂ ಮುಂದುವರಿದಿದೆ.

ಜಾನುವಾರು ಜಾತ್ರೆ: ಹಿಂದೆ ಸೀತಾನದಿ ಮತ್ತು ಸುಬ್ರಹ್ಮಣ್ಯದಲ್ಲಿ ಕೋಣ, ಎತ್ತುಗಳ ಜಾತ್ರೆ ನಡೆಯುತ್ತಿತ್ತು. ಸೀತಾನದಿಗೆ ಹಾವೇರಿ, ಬೆಳಗಾವಿ ಕಡೆಯಿಂದ ಎತ್ತರದ ಕೋಣಗಳು, ಸುಬ್ರಹ್ಮಣ್ಯದ ಕುಲ್ಕುಂದ ಜಾನುವಾರು ಜಾತ್ರೆಗೆ ಗಿಡ್ಡಜಾತಿಯ ಕೋಣಗಳು ಬರುತ್ತಿದ್ದವು. ಕೋಣಗಳ ಬದಲಾವಣೆ, ಖರೀದಿ ನಡೆಯುತ್ತಿತ್ತು. ಈಗ ಜಾತ್ರೆ ನಡೆಯುತ್ತಿಲ್ಲ. ಜೂನಿಯರ್ (2 ಮತ್ತು 4 ಹಲ್ಲುಗಳ ಕೋಣಗಳು) ವಿಭಾಗಕ್ಕೆ ಸೀಮಿತವಾಗಿ ಈಗ ಬೆಳುವಾಯಿ, ಕೋಟ, ಬೆಳ್ಮಣ್‌ಗಳಲ್ಲಿ ಪೈರು (ಕೋಣಗಳ ವ್ಯಾಪಾರ) ನಡೆಯುತ್ತಿದೆ.

Comments are closed.