ಕರಾವಳಿ

ನಾಪತ್ತೆಯಾಗಿದ್ದ ಮಂಗಳೂರಿನ ವಿದ್ಯಾರ್ಥಿ ಕೇರಳದಲ್ಲಿ ಪತ್ತೆ : ಮಾಜಿ ಪೊಲೀಸ್ ಅಧಿಕಾರಿ ಮದನ್ ನಿರಾಳ

Pinterest LinkedIn Tumblr

ಮಂಗಳೂರು : ಮಂಗಳೂರಿನ ಮಾಜಿ ಪೊಲೀಸ್ ಅಧಿಕಾರಿ ಮದನ್ ಅವರೊಂದಿಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ್ ಧಿಢೀರ್ ನಾಪತ್ತೆ ಪ್ರಕರಣ ವಿನಾಯಕ್ ಪತ್ತೆಯಾಗುವ ಮೂಲಕ ಸುಖಾಂತ್ಯ ಕಂಡಿದೆ.

ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಮದನ್ ಅವರ ಜೊತೆ ಕೆಲಸ ಮಾಡುತ್ತಿದ್ದ ಶಕ್ತಿನಗರದ ವಿನಾಯಕ್‌ ಎಂಬ ಯುವಕ ದಿಢೀರ್ ನಾಪತ್ತೆಯಾಗಿದ್ದು, ಇದೀಗ ಅತನನ್ನು ಕೇರಳದ ಕೊಚ್ಚಿನ್‌ ಪೊಲೀಸರು ಪತ್ತೆ ಮಾಡಿ ಉರ್ವ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಶಕ್ತಿನಗರದ ನಿವಾಸಿ ಆಟೋ ಚಾಲಕ ಶಿವಕುಮಾರ್-ಸಾಕಮ್ಮ ದಂಪತಿ ಪುತ್ರ ವಿನಾಯಕ ನ.8ರಂದು ಮಂಗಳೂರಿನ ಬಿಜೈಯಲ್ಲಿರುವ ಅಪಾರ್ಟ್‌ಮೆಂಟ್‌ನಿಂದ ನಾಪತ್ತೆಯಾಗಿದ್ದ. ವಿನಾಯಕ್ ನಾಪತ್ತೆ ಆಗಿರುವುದನ್ನು ನ.15ರಂದು ಮಾಜಿ ಪೊಲೀಸ್ ಅಧಿಕಾರಿ ಮದನ್ ಕರೆ ಮಾಡಿ ಆತನ ಪೋಷಕರಿಗೆ ತಿಳಿಸಿದ್ದರು. ಬಳಿಕ ಹೆತ್ತವರು ಉರ್ವ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಮಾಜಿ ಪೊಲೀಸ್ ಅಧಿಕಾರಿ ಮದನ್

ಅಷ್ಟೇ ಅಲ್ಲ, ಅ.8ರಂದು ವಿನಾಯಕ್ ದಿಢೀರ್ ಆಗಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಮದನ್ ಬಗ್ಗೆ ಸಂಶಯಗೊಂಡ ವಿನಾಯಕ್ ಪೋಷಕರು ಮದನ್ ವಿರುದ್ಧ ಉರ್ವಾ ಠಾಣೆಗೆ ದೂರು ನೀಡಿದ್ದರು. ತಮ್ಮ ಪುತ್ರನ ನಾಪತ್ತೆ ಪ್ರಕರಣದಲ್ಲಿ ಮದನ್ ಪಾತ್ರವಿದೆ. ಪೊಲೀಸರು ಕೂಡ ಮದನ್ ಪರ ಕೆಲಸ ಮಾಡುತ್ತಿದ್ದರೆ ಎಂದು ಆರೋಪಿಸಿ ವಿನಾಯಕ್ ಪೋಷಕರು ಹೈಕೋರ್ಟ್‌ನಲ್ಲಿ ಪುತ್ರನನ್ನು ಹುಡುಕಿ ಕೊಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್​ ನಾಪತ್ತೆಯಾಗಿರುವ ವಿನಾಯಕನನ್ನು ಪತ್ತೆ ಹಚ್ಚಿ ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ಆದೇಶಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಚಾಟಿ ಬೀಸಿದ್ದರಿಂದ ಈ ಪ್ರಕರಣ ಪೊಲೀಸರ ಕುತ್ತಿಗೆ ಕಟ್ಟಿಕೊಂಡಿತ್ತು.

ಇದೀಗ ಕೇರಳದ ಕೊಚ್ಚಿನ್ ನಲ್ಲಿದ್ದ ವಿನಾಯಕ್ ನನ್ನು ಕೇರಳದ ಕೊಚ್ಚಿನ್‌ ಪೊಲೀಸರು ಪತ್ತೆ ಮಾಡಿ ಉರ್ವ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಉರ್ವಾ ಪೊಲೀಸರು ಅತನನ್ನು ಮಂಗಳೂರಿಗೆ ಕರೆತಂದಿದ್ದು,ಇಂದು ಹೈಕೋರ್ಟ್‌ನಲ್ಲಿ ವಿನಾಯಕನನ್ನು ಹಾಜರುಪಡಿಸಿ, ಹೆತ್ತವರ ವಶಕ್ಕೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಮದನ್ ಮಹಿಳೆಯೊಬ್ಬರ ಜೊತೆ ಹೊಂದಿದ್ದ ಸಂಬಂಧ ತಮ್ಮ ಮಗನ ನಾಪತ್ತೆಗೆ ಪ್ರಮುಖ ಕಾರಣ ಎಂದು ವಿನಾಯಕನ ಪೋಷಕರು ಆರೋಪಿಸಿದ್ದರು. ಅದರ ಬೆನ್ನಲ್ಲೇ ಇದೀಗ ನಾಪತ್ತೆಯಾಗಿದ್ದ ವಿನಾಯಕ್ ಧಿಢೀರ್ ಪತ್ತೆಯಾಗಿರುವುದು ಆಶ್ಚರ್ಯಕ್ಕೆ ಎಡೆ ಮಾಡಿದೆ.

Comments are closed.