ಕರಾವಳಿ

ತೋಟ ಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಎಎಸ್‍ಐ ಅಮಾನತು

Pinterest LinkedIn Tumblr

ಮಂಗಳೂರು ನವೆಂಬರ್, 29 : ಮಂಗಳೂರನ್ನು ಬೆಚ್ಚಿ ಬೀಳಿಸಿದ ನಗರದ ತೋಟ ಬೆಂಗ್ರೆ ಬೀಚ್‌ನಲ್ಲಿ ನಡೆದ ೨೨ ವರ್ಷ ವಯಸ್ಸಿನ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ ಆರೋಪದಡಿ ಓರ್ವ ಎಎಸ್‍ಐ ಅಮಾನತುಗೊಂಡಿದ್ದಾರೆ.

ಮಂಗಳೂರು ನಗರ ಮಹಿಳಾ ಪೊಲೀಸು ಠಾಣೆಯಲ್ಲಿ ನವೆಂಬರ್ 26 ರಂದು ಅ.ಕ್ರ.60/2018 ಕಲಂ 376(ಡಿ), 323, 354, 506 ಐಪಿಸಿ ರಂತೆ ದಾಖಲಾದ ಪ್ರಕರಣದ ಸಂತ್ರಸ್ಥೆ ಯುವತಿಯು ತನ್ನ ಮೇಲೆ ನವೆಂಬರ್ 18 ರಂದು ತಣ್ಣೀರುಭಾವಿ ಪರಿಸರದಲ್ಲಿ ಯುವಕರಿಂದ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಬಂಟ್ವಾಳ ನಗರ ಪೊಲೀಸು ಠಾಣೆಯಲ್ಲಿ ನವೆಂಬರ್ 20 ರಂದು ದೂರು ನೀಡಲು ಹೋದಾಗ ಅಲ್ಲಿ ಹಗಲು ಠಾಣಾ ದಿನಚರಿ ಕರ್ತವ್ಯದಲ್ಲಿದ್ದ ಎಎಸ್‍ಐ ರಘುರಾಮ ಹೆಗ್ಡೆರವರು ತಕ್ಷಣಕ್ಕೆ ದೂರನ್ನು ದಾಖಲಿಸಲು ನಿರಾಕರಿಸಿ, ಘಟನೆ ಎಲ್ಲಿ ಸಂಭವಿಸಿದೆಯೋ ಅದೇ ವ್ಯಾಪ್ತಿಯ ಪೊಲೀಸು ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿ ಸಂತ್ರಸ್ಥೆಯನ್ನು ಹಿಂದೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಘುರಾಮ ಹೆಗ್ಡೆ ಅವರನ್ನು ಕರ್ತವ್ಯ ನಿರ್ಲಕ್ಷ ಆರೋಪದಡಿ ಸೇವೆಯಿಂದ ಅಮಾನತುಗೊಳಿಸಿ, ವಿಚಾರಣೆಗೆ ಆದೇಶಿಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

ಘಟನೆ ವಿವರ:

ಬಿಹಾರ ಮೂಲದ ಯುವಕ ಹಾಗೂ ಕಲ್ಲಡ್ಕ ಮೂಲದ ಯುವತಿ ಕಲ್ಲಡ್ಕದ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನ.18ರಂದು ಅವರು ತಣ್ಣೀರುಬಾವಿ ಬೀಚ್‌ಗೆ ಮಧ್ಯಾಹ್ನದ ವೇಳೆಗೆ ಬಂದಿದ್ದರು. ಅಲ್ಲಿಂದ ನಿರ್ಜನ ತೋಟಬೆಂಗ್ರೆ ಬೀಚ್‌ಗೆ ತೆರಳಿದ್ದರು. ಈ ವೇಳೆ ಏಳು ಮಂದಿ ಯುವಕರ ತಂಡ ಅವರ ಮೇಲೆ ಎರಗಿದೆ. ಯುವಕನನ್ನು ಹಿಡಿದು ಥಳಿಸಿದ ತಂಡ ಆತನನ್ನು ಬೆದರಿಸಿ ಹಿಡಿದಿಟ್ಟುಕೊಂಡಿತ್ತು.

ನಂತರ ಆತನ ಎದುರಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ. ಘಟನೆ ಬಳಿಕ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಸಂತ್ರಸ್ತ ಯುವತಿಗೆ ಬೆದರಿಕೆಯೊಡ್ಡಿ ಆಕೆಯ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದರು. ಮರುದಿನ ಯುವತಿಗೆ ಆರೋಪಿಗಳು ಕರೆ ಮಾಡಿ ಕಿರುಕುಳ ನೀಡಲು ಶುರುಮಾಡಿದ್ದರು ಎನ್ನಲಾಗಿದೆ.

ಆದರೆ ಮರ್ಯಾದೆಗೆ ಅಂಜಿದ ಜೋಡಿ ಪ್ರಕರಣದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆರೋಪಿಗಳು ಫೋನ್‌ನಲ್ಲಿ ಕಿರುಕುಳ ನೀಡುತ್ತಿದ್ದರಿಂದ ಅವರು ದೂರು ನೀಡಲು ಬಂಟ್ವಾಳ ಠಾಣೆಗೆ ತೆರಳಿದ್ದರು. ಆದರೆ ಪ್ರಕರಣ ಮಂಗಳೂರಿನಲ್ಲಿ ನಡೆದಿದ್ದರಿಂದ ಅಲ್ಲೇ ದೂರು ನೀಡುವಂತೆ ತಿಳಿಸಲಾಗಿತ್ತು.

ಘಟನೆ ಬಗ್ಗೆ ಸುದ್ದಿಗಳು ಹರಿದಾಡತೊಡಗಿದ್ದರಿಂದ ನಗರ ಪೊಲೀಸ್‌ ಆಯುಕ್ತರ ಗಮನಕ್ಕೆ ಬಂದಿದ್ದು, ಅವರು ಯುವಕ- ಯುವತಿಯನ್ನು ಮಂಗಳೂರಿಗೆ ಕರೆಸಿ ಮಾಹಿತಿ ಪಡೆದಿದ್ದಾರೆ. ಅನಂತರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ. ಪ್ರಕರಣ ದಾಖಲಾದ ಕೂಡಲೇ ಯುವತಿಯ ಮೊಬೈಲ್‌ನಲ್ಲಿ ದಾಖಲಾಗಿದ್ದ ದೂರವಾಣಿ ಸಂಖ್ಯೆಯ ಜಾಡು ಹಿಡಿದ ಪೊಲೀಸರು ನಾಲ್ವರು ಆರೋಪಿಗಳನ್ನು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಯುವಕ 18 ವರ್ಷದವನಾಗಿದ್ದು, ಕಲ್ಲಡ್ಕದಲ್ಲೇ ನೆಲೆಸಿದ್ದಾನೆ. ಈತನಿಗೆ ಹಿಂದಿ ಭಾಷೆ ಬಿಟ್ಟರೆ ಬೇರೆ ಯಾವ ಭಾಷೆಯೂ ಗೊತ್ತಿಲ್ಲ. ಕಳೆದ 2 ವರ್ಷಗಳಿಂದ ಆತ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು.

ಈ ಪ್ರಕರಣದಲ್ಲಿ ಈಗಾಗಲೇ ನಾಲ್ಕು ಮಂದಿ ಆರೋಪಿಗಳಾದ ಬೆಂಗ್ರೆ ಸ್ಯಾಂಡ್‌ಪಿಟ್ ನಿವಾಸಿಗಳಾದ ಪ್ರಜ್ವಲ್ ಸುವರ್ಣ ಯಾನೆ ಪ್ರಜ್ವಲ್ (25), ಅರುಣ್ ಯಾನೆ ಅರುಣ್ ಅಮೀನ್ (26), ತೋಟ ಬೆಂಗ್ರೆ ನಿವಾಸಿಗಳಾದ ಆದಿತ್ಯ ಸಾಲಿಯಾನ್ ಯಾನೆ ಆದಿ (25), ಅಬ್ದುಲ್ ರಿಯಾಝ್ ಯಾನೆ ರಿಯಾಝ್ (35) ಎಂಬವರ ಬಂಧನವಾಗಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ 3 ಮಂದಿ ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬಂದಿಸಲಾಗಿದ್ದು, ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ.

ಆರೋಪಿಗಳ ವಿರುದ್ಧ ಕಠಿನ ಕಾನೂನು ಕ್ರಮಕ್ಕೆ ಆಗ್ರಹ:

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದಿರುವ ತೋಟಬೆಂಗ್ರೆಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶಕ್ಕೆ ಮಂಗಳವಾರ ಬೆಳಗ್ಗೆ ಸಂತ್ರಸ್ತ ಯುವತಿ ಹಾಗೂ ಯುವಕನನ್ನು ಪೊಲೀಸರು ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಸಿಪಿ ಮಂಜುನಾಥ ಶೆಟ್ಟಿ, ಪಣಂಬೂರು ಹಾಗೂ ಮಹಿಳಾ ಠಾಣೆ ಇನ್‌ಸ್ಪೆಕ್ಟರ್, ಸಿಬ್ಬಂದಿ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಏತನ್ಮಧ್ಯೆ ಘಟನೆ ಕುರಿತಂತೆ ಸ್ಥಳೀಯರೂ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿನ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

2013ರಲ್ಲಿ ಕೂಡ ದೇರಳಕಟ್ಟೆಯಲ್ಲಿ ನಡೆದಿತ್ತು:

2013ರ ಡಿ.18 ರಂದು ದೇರಳಕಟ್ಟೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಹಾಗೂ ಆಕೆಯ ಪ್ರಿಯಕರನನ್ನ‌ು ದುಷ್ಕರ್ಮಿಗಳ ತಂಡ ಅಪಹರಿಸಿ ಲೈಂಗಿನ ದೌರ್ಜನ್ಯ ವೆಸಗಿತ್ತು. ಆ ಜೋಡಿಯನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಲೈಂಗಿಕ ಕ್ರಿಯೆ ನಡೆಸುವಂತೆ ಬಲಾತ್ಕಾರದಿಂದ ಬಳಿಕ ಅದನ್ನು ಚಿತ್ರೀಕರಿಸಿ ಹಣ ವಸೂಲಿ ಮಾಡಿದ್ದರು.

ಅತ್ಯಾಚಾರಿಗಳು ಮಾದಕ ವ್ಯಸನಿಗಳು ಶಂಕೆ..?

ತೋಟಬೇಂಗ್ರೆ ಪ್ರದೇಶವು ಸಮುದ್ರ ಹಾಗೂ ಫಲ್ಗುಣಿ ನಡುವೆ ಇರುವುದರಿಂದ ಪ್ರವಾಸಿಗಳು ಹಾಗೂ ದೂರದ ಊರುಗಳಿಂದ ಪರಿಸರ ವೀಕ್ಷಣೆಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ತೋಟಬೆಂಗ್ರೆ ಪ್ರದೇಶದಲ್ಲಿ ಮಾದಕ ವ್ಯಸನ ಜಾಲ ಹರಡಿದ್ದು, ಈ ಬಗ್ಗೆ ಹಲವು ಆರೋಪಗಳು ಕೇಳಿಬರುತ್ತಿದ್ದವು. ಅತ್ಯಾಚಾರ ನಡೆಸಿದ ತಂಡದ ಏಳು ಮಾದಕ ವ್ಯಸನಗಳೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆಯೂ ಪೊಲೀಸ್ ಇಲಾಖೆ ತನಿಖೆ ನಡೆಸಿದೆ.

Comments are closed.