ಕರಾವಳಿ

ಜ.19 : ಮಂಗಳೂರಿನಲ್ಲಿ ಡಾ| ಎಂ.ಎನ್. ರಾಜೇಂದ್ರಕುಮಾರ್ ರಜತ ಸಂಭ್ರಮ

Pinterest LinkedIn Tumblr

ಮಂಗಳೂರು, ನವೆಂಬರ್.29: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಡಾ| ಎಂ. ಎನ್. ರಾಜೇಂದ್ರಕುಮಾರ್ ಅವರು 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜ.19ರಂದು ಮಂಗಳೂರಿನ ನೆಹರು ಮೈದಾನದಲ್ಲಿ ರಜತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಹಿರಿಯ ನಿರ್ದೇಶಕರಾದ ಟಿ. ಜಿ. ರಾಜಾರಾಮ್‌ ಭಟ್ ಅವರು ಈ ಬಗ್ಗೆ ಮಾಹಿತಿ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಡಾ| ಎಂ. ಎನ್. ರಾಜೇಂದ್ರಕುಮಾರ್ ಜನವರಿ 19ರಂದು 25 ವರ್ಷ ಪೂರೈಸಲಿದ್ದಾರೆ. ಸತತ 25 ವರ್ಷ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ದೇಶದಲ್ಲೇ ಪ್ರಥಮವಾಗಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ನೀಡಿರುವ ರಾಜೇಂದ್ರಕುಮಾರ್ ಅವರ ಅಧ್ಯಕ್ಷತೆಯ ರಜತ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಸಂಸ್ಥೆಗಳು ನಿರ್ಧರಿಸಿದೆ ಎಂದರು.

ಕಾರ್ಯಕ್ರಮದ ಪೂರ್ವಭಾವಿಯಾಗಿ ಜ.18ರಂದು ಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ರಾಷ್ಟ್ರಮಟ್ಟದ ಸಹಕಾರಿ ದಿಗ್ಗಜರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.

ಜ.19ರಂದು ನೆಹರು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಜಿಲ್ಲೆಗಳ ಸಹಕಾರಿಗಳು, ನವೋದಯ ಸ್ವಸಹಾಯ ಸಂಘದ ಸದಸ್ಯರು ಸಹಿತ 2ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಸಂಘಟಿಸಲು ಕರಾವಳಿಯ ಸಹಕಾರಿ ಮುಖಂಡರನ್ನು ಒಳಗೊಂಡ ಅಭಿನಂದನಾ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಸಹಕಾರಿ ಮ್ಯೂಸಿಯಂ:

ಅಭಿನಂದನಾ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರು ಅಧ್ಯಕ್ಷರಾಗಿ 25 ವರ್ಷ ಪೂರೈಸುತ್ತಿರುವುದು ಸಮಸ್ತ ಸಹಕಾರಿಗಳಿಗೆ ಹೆಮ್ಮೆಯ ವಿಷಯ. ರಜತ ಸಂಭ್ರಮವನ್ನು ಅವಿಸ್ಮರಣೀಯವಾಗಿ ಸಲು ಶಾಶ್ವತ ಸಹಕಾರಿ ಮ್ಯೂಸಿಯಂ ಸ್ಥಾಪಿಸಲಾಗುವುದು. ಮೊಳಹಳ್ಳಿ ಶಿವರಾವ್ ಅವರಿಂದ ಆರಂಭಗೊಂಡು ಇದುವರೆಗಿನ ಸಹಕಾರಿ ಕ್ಷೇತ್ರದ ಎಲ್ಲ ಬೆಳವಣಿಗೆಯನ್ನು ಈ ಮ್ಯೂಸಿಯಂನಲ್ಲಿ ದಾಖಲಿಸಲಾಗುವುದು. ಮ್ಯೂಸಿಯಂ ಸ್ಥಾಪನೆಗೆ ತಜ್ಞರ ಸಮಿತಿ ರಚಿಸಲಾಗಿದೆ ಎಂದರು.

ರಜತ ಸಂಭ್ರಮ ಕಾರ್ಯಕ್ರಮದ ಬಗ್ಗೆ ಜಿಲ್ಲೆಯ ಸಹಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ. ಸಹಕಾರಿ ಆಸ್ಪತ್ರೆ, ಸಹಕಾರಿ ಕ್ಷೇತ್ರದ ಮೂಲಕ ಪ್ರವಾಸೋದ್ಯಮ ಅಭಿವೃದ್ದಿ, ಸಹಕಾರಿ ಐಟಿ ಕೇಂದ್ರ ಸ್ಥಾಪನೆ ಮುಂತಾದ ಸಲಹೆಗಳು ಬಂದಿವೆ. ಇವುಗಳನ್ನು ಕಾರ್ಯಗತ ಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದೆಂದರು.

ರಜತ ಸಂಭ್ರಮದ ಭವ್ಯ ಮೆರವಣಿಗೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ :

ರಜತ ಸಂಭ್ರಮದ ಭವ್ಯ ಮೆರವಣಿಗೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಲಿದ್ದಾರೆ. ನೆಹರು ಮೈದಾನದಲ್ಲಿ ನಡೆಯುವ ಐತಿಹಾಸಿಕ ಸಮಾರಂಭದಲ್ಲಿ ಪ್ರಧಾನ ವೇದಿಕೆ ಸಹಿತ ಮೂರು ವೇದಿಕೆ ನಿರ್ಮಿಸಲಾಗುವುದು. ಒಂದು ವೇದಿಕೆಯಲ್ಲಿ ಜಿಲ್ಲೆಯ ಸಹಕಾರಿ ಸಂಘಗಳ ಅಧ್ಯಕ್ಷರು, ಇನ್ನೊಂದು ವೇದಿಕೆಯಲ್ಲಿ ಜಿಲ್ಲೆಯ ಎಲ್ಲ ಹಾಲಿ, ಮಾಜಿ ಜನಪ್ರತಿನಿಧಿಗಳು ಆಸೀನರಾಗಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಹಾಗೂ ರಾಜ್ಯದ ಸಚಿವರುಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕಿನ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಬಿ. ನಿರಂಜನ್, ಭಾಸ್ಕರ್ ಎಸ್. ಕೋಟ್ಯಾನ್, ಬಿ. ರಘುರಾಮ ಶೆಟ್ಟಿ, ಎಂ. ವಾದಿರಾಜ ಶೆಟ್ಟಿ, ಕೆ.ಎಸ್. ದೇವರಾಜ್, ಸದಾಶಿವ ಉಳ್ಳಾಲ್, ರಾಜು ಪೂಜಾರಿ, ಶಶಿಕುಮಾರ್ ರೈ ಬಿ, ಬಿ. ರಾಜೇಶ್ ರಾವ್, ಎಸ್.ಬಿ. ಜಯರಾಮ ರೈ, ರಮೇಶ್ ಶೆಟ್ಟಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ ಹಾಗೂ ಅವಿಭಜಿತ ಜಿಲ್ಲೆಯ ಎಲ್ಲಾ ಪ್ರಾಥಮಿಕ ಸಹಕಾರಿ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Comments are closed.