ಕರಾವಳಿ

ಮುಖ್ಯಮಂತ್ರಿ ಕುಮಾರಸ್ವಾಮಿ ಟಿಪ್ಪು ಜಯಂತಿ ಬದಲಾಗಿ ಸಿದ್ಧರಾಮಯ್ಯ ಜಯಂತಿ ಆಚರಿಸಲಿ : ಸಂಸದ ನಳಿನ್ ಕುಮಾರ್ ಲೇವಾಡಿ

Pinterest LinkedIn Tumblr

ಮಂಗಳೂರು, ನವೆಂಬರ್.09: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟಿಪ್ಪು ಜಯಂತಿ ಬದಲಾಗಿ ಸಿದ್ಧರಾಮಯ್ಯ ಜಯಂತಿ ಆಚರಿಸಬಹುದಿತ್ತು ಎಂದು ಸಂಸದ ನಳಿನ್ ಕುಮಾರ್ ಲೇವಾಡಿ ಮಾಡಿದ್ದಾರೆ.

ರಾಜ್ಯ ಸಮ್ಮಿಶ್ರ ಸರಕಾರ ನ.10ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸಿ ದ.ಕ. ಜಿಲ್ಲಾ ಬಿಜೆಪಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಯನ್ನುದ್ದೇಶಿಸಿ ಅವರು ಮಾತನಾಡಿದರು. “ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸುತ್ತಾರೆ. ಟಿಪ್ಪುಗಿಂತ ಸಿದ್ದರಾಮಯ್ಯ ಬಹುದೊಡ್ಡ ಮತಾಂಧರಾಗಿರುವುದರಿಂದ ಕುಮಾರಸ್ವಾಮಿ ಸಿದ್ದರಾಮಯ್ಯ ಜಯಂತಿ ಆಚರಿಸಲಿ ಎಂದು ಹೇಳಿದರು.

ಟಿಪ್ಪು ಜಯಂತಿ ಆಚರಿಸಬೇಕು ಎಂದು ಯಾವ ಮುಸಲ್ಮಾನನೂ ಕೇಳಲಿಲ್ಲ, ಜಯಂತಿ ಆಚರಣೆ ಇಸ್ಲಾಮಿನಲ್ಲೂ ಇಲ್ಲ. ಕೇವಲ ಮುಸ್ಲಿಮರನ್ನು ಖುಷಿಪಡಿಸಬೇಕು ಎಂಬ ನಿಟ್ಟಿನಲ್ಲಿ ಸಿದ್ದರಾಮಯ್ಯ ಟಿಪ್ಪು ಜಯಂತಿಗೆ ಚಾಲನೆ ನೀಡಿದರು. ಹಿಂದೂ-ಕ್ರೈಸ್ತ-ಮುಸ್ಲಿಮರ ಮಧ್ಯೆ ಸಿದ್ದರಾಮಯ್ಯ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಟಿಪ್ಪುವಿಗಿಂತಲೂ ದೊಡ್ಡ ಮತಾಂಧರಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

2015ರಲ್ಲಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಿದಾಗ ಕುಮಾರಸ್ವಾಮಿ ವಿರೋಧಿಸಿದ್ದರು. ಹಾಗಾಗಿ ಕುಮಾರಸ್ವಾಮಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಲಾರರು ಎಂದು ಭಾವಿಸಿದ್ದೆವು. ಆದರೆ, ಕಾಂಗ್ರೆಸ್ ಮರ್ಜಿಯಲ್ಲಿರುವ ಕುಮಾರಸ್ವಾಮಿ ಇದೀಗ ವೌನ ತಾಳಿದ್ದಾರೆ. ಅವರೊಬ್ಬ ಹೆಣ್ಣೊ-ಗಂಡೋ ಎಂದು ಗೊತ್ತಾಗುತ್ತಿಲ್ಲ ಎಂದು ನಳಿನ್ ಕುಮಾರ್ ಹೇಳಿದರು.

ಕದ್ದುಮುಚ್ಚಿ ಸಭಾಂಗಣದೊಳಗೆ ಆಚರಿಸುವ ಬದಲು ಸಾರ್ವಜನಿಕ ಸ್ಥಳದಲ್ಲಿ ಟಿಪ್ಪು ಜಯಂತಿ ಆಚರಿಸಲಿ, ಸರಕಾರ ತನ್ನ ತಾಕತ್ತು ತೋರಿಸಲಿ ಎಂದು ಮಂಗಳೂರು (ಸುರತ್ಕಲ್) ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಸವಾಲು ಹಾಕಿದರು.

ಬಿಜೆಪಿ ರಾಜ್ಯ ಮುಖಂಡೆ ಸುಲೋಚನಾ ಭಟ್ ಅವರು ಮಾತನಾಡಿ, ಈ ಹಿಂದೆ ಟಿಪ್ಪು ಆಚರಣೆಗೆ ವಿರೋಧಿಸಿದ್ದ ಕುಮಾರಸ್ವಾಮಿಯು ಟಿಪ್ಪು ಒಕ್ಕಲಿಗರಿಗೂ ಅನ್ಯಾಯ ಎಸಗಿದ್ದಾನೆ ಎಂದಿದ್ದರು. ಕಾಂಗ್ರೆಸ್ ಮರ್ಜಿನಲ್ಲಿರುವ ಕಾರಣ ಅವರು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸದಿದ್ದರೂ ಕೂಡಾ ಉದ್ಘಾಟನಾ ಕಾರ್ಯಕ್ರಮದಿಂದ ದೂರ ಸರಿದಿದ್ದಾರೆ. ಆ ಮೂಲಕ ಅವರ ಆತ್ಮಸಾಕ್ಷಿ ಚುಚ್ಚಿರುವುದು ಸಾಕ್ಷಿಯಾಗಿದೆ ಎಂದು ಹೇಳಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, 2016ರಲ್ಲಿ ಮುಡಾ ಪ್ರಕಟಿಸಿದ ‘ಮಂಗಳೂರು ದರ್ಶನ’ ಕೃತಿಯಲ್ಲಿ ಟಿಪ್ಪು ಏನು ಎಂಬುದನ್ನು ಸಾಕ್ಷಿ ಸಮೇತ ಪ್ರಕಟಿಸಲಾಗಿದೆ. ಆ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಂದಿನ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಯು.ಟಿ.ಖಾದರ್ ಇದ್ದರು. ಟಿಪ್ಪು ವಿರುದ್ಧ ಬರೆದರೆ, ಅವಹೇಳನಕಾರಿ ಹೇಳಿಕೆ ನೀಡಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಾಕತ್ತಿದ್ದರೆ ಮೊದಲು ರೈ, ಸೊರಕೆ, ಖಾದರ್ ಹಾಗೂ ಕೃತಿಯ ವಿರುದ್ಧ ಕ್ರಮ ಜರುಗಿಸಲಿ ಎಂದು ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ್, ಬಿಜೆಪಿ ರಾಜ್ಯ ವಕ್ತಾರ ಅನ್ವರ್ ಮಾಣಿಪ್ಪಾಡಿ, ಮಾಜಿ ಶಾಸಕ ಯೋಗೀಶ್ ಭಟ್, ಸಂತೋಷ್ ಕುಮಾರ್ ರೈ ಬೋಳಿಯಾರು, ಭಾಸ್ಕರ ಚಂದ್ರ ಶೆಟ್ಟಿ, ಸಂಜಯ ಪ್ರಭು, ರಮೇಶ್ ಕಂಡೆಟ್ಟು, ರೂಪಾ ಡಿ. ಬಂಗೇರ, ಸತೀಶ್ ಕುಂಪಲ, ನಿತಿನ್ ಕುಮಾರ್, ರಾಮಚಂದರ್ ಬೈಕಂಪಾಡಿ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಆನಂದ ಬಂಟ್ವಾಳ ಮತ್ತಿತರರು ಪಾಲ್ಗೊಂಡಿದ್ದರು.

Comments are closed.