ಕರಾವಳಿ

ಕಾರಾಗೃಹದಲ್ಲಿ ಖೈದಿಗಳ ಮನ ಪರಿವರ್ತನೆ ಆಗಬೇಕು- ಜಿಲ್ಲಾ ನ್ಯಾಯಾಧೀಶರು

Pinterest LinkedIn Tumblr

ಉಡುಪಿ: ಕಾರಾಗೃಹದಲ್ಲಿನ ಖೈದಿಗಳು ತಮ್ಮ ವಿಚಾರಣಾಧೀನ ಅಥವಾ ಶಿಕ್ಷೆಯ ಅವಧಿಯಲ್ಲಿ ತಾವು ತಪ್ಪು ಮಾಡಿರುವ ಕುರಿತು ಚಿಂತಿಸಿ ಮನಪರಿವರ್ತನೆ ಮಾಡಿಕೊಂಡು, ಬಿಡುಗಡೆಯ ನಂತರ ಹೊಸ ವ್ಯಕ್ತಿತ್ವದೊಂದಿಗೆ ಸಮಾಜಕ್ಕೆ ಮರಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವೆಂಕಟೇಶ ನಾಯ್ಕ್ ಟಿ ಹೇಳಿದ್ದಾರೆ.

ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ (ರಿ), ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಕಾರಾಗೃಹದ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ 2018 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೋ ಅನಿರೀಕ್ಷಿತ ಸಂದರ್ಭದಲ್ಲಿ ಕೋಪದಿಂದ ಕಾನೂನು ಉಲ್ಲಂಘಿಸಿ ಕಾರಾಗೃಹಕ್ಕೆ ಬಂದಿರುತ್ತೀರಿ, ನಿಮಗೆ ಶಿಕ್ಷೆ ಆಗುವವರೆಗೂ ನೀವು ವಿಚಾರಣಾಧೀನ ಖೈದಿಗಳಾಗಿರುತ್ತೀರಿ, ನ್ಯಾಯಾಲಯ ವಿಚಾರಣೆ ನಂತರ ಅಪರಾಧ ಸಾಬೀತಾದರೆ ಶಿಕ್ಷೆಗೆ ಒಳಗಾಗುತ್ತೀರಿ, ಇಲ್ಲವಾದರೆ ಬಿಡುಗಡೆ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಮತ್ತೆ ಮರುಳುತ್ತೀರಿ, ಕಾರಾಗೃದಲ್ಲಿ ಇರುವಷ್ಟು ದಿನ ಉತ್ತಮ ಚಿಂತನೆಗಳಿಂದ ಮನಪರಿರ್ವನೆ ಹೊಂದಿ, ಕಾರಾಗೃದಲ್ಲಿ ಉತ್ತಮ ನಡವಳಿಕೆ ರೂಢಿಸಿಕೊಳ್ಳಿ, ಪ್ರತಿದಿನ ಯೋಗಭ್ಯಾಸದಂತಹ ಉತ್ತಮ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ, ಕಾರಾಗೃಹದಲ್ಲಿ ಸಹ ಜಿಲ್ಲಾ ಕಾರಾಗೃಹ ಅಧೀಕ್ಷಕರು ನಿಮ್ಮ ನಡವಳಿಕೆಯ ಬಗ್ಗೆ ದಾಖಲೆ ಇಡುತ್ತಾರೆ, ನಿಮ್ಮ ನಡವಳಿಕೆ ಉತ್ತಮವಾಗಿದ್ದರೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಈ ದಾಖಲೆ ನಿಮಗೆ ನೆರವಾಗಲಿದೆ, ಯಾವುದೇ ಸಮಸ್ಯೆಗಳಿದ್ದರೆ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತಂದು ನೆರವು ಪಡೆಯಿರಿ ಎಂದು ಜಿಲ್ಲಾ ನ್ಯಾಯಾಧೀಶರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಯಾವುದೋ ಒತ್ತಡದಿಂದ ತಿಳುವಳಿಕೆ ಇಲ್ಲದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಖೈದಿಗಳಾಗಿರುತ್ತೀರಿ, ಕಾರಾಗೃಹದಲ್ಲಿ ನಿಮ್ಮ ಜೀವನ ಶೈಲಿ, ವ್ಯಕ್ತಿತ್ವ ಬದಲಿಸಿಕೊಳ್ಳಿ, ಶಿಸ್ತು ರೂಢಿಸಿಕೊಳ್ಳಿ, ಓದುವ ಹವ್ಯಾಸ ಬೆಳೆಸಿಕೊಳ್ಳಿ, ನೀವು ಅಪರಾಧದಿಂದ ಮುಕ್ತರಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದಾಗ ನಿಮ್ಮ ಉತ್ತಮ ನಡವಳಿಕೆ ಹೊಸ ಜೀವನ ಪ್ರಾರಂಭಿಸಲು ನೆರವಾಗಲಿದೆ, ಕೋಪ, ಉದ್ವೇಗ, ಸೇಡು ನಿಯಂತ್ರಿಸಿಕೊಂಡು, ಮನದಲ್ಲಿ ಪ್ರೀತಿಯ ಗುಣ ಬೆಳೆಸಿಕೊಳ್ಳಿ, ಕಾರಾಗೃಹದಿಂದ ಹೊಸ ವ್ಯಕ್ತಿಯಾಗಿ ಹೊರ ಹೋಗಿ, ಸನ್ಮಾರ್ಗದಲ್ಲಿ ನಡೆಯಿರಿ, ಕಾನೂನು ಸೇವೆ ಪ್ರತಿಯೊಬ್ಬರಿಗೂ ಲಭ್ಯವಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದುಕೊಳ್ಳಿ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಹೆಚ್.ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ಕೆಎಂಸಿ ಮಣಿಪಾಲದ ಚರ್ಮಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪ್ರೊಫೆಸರ್ ಡಾ. ಸತೀಶ್ ಪೈ ಕಾರಾಗೃಹ ವಾಸಿಗಳ ಚರ್ಮ ಪರೀಕ್ಷೆ ನಡೆಸಿದರು, ಕೆಎಂಸಿ ಮನೋರೋಗ ವಿಭಾಗದ ಪ್ರೊಫೆಸರ್ ಡಾ.ಪಿ.ಎಸ್.ವಿ.ಎನ್. ಶರ್ಮಾ ಉಪನ್ಯಾಸ ನೀಡಿದರು. ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯ ಜತ್ತಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Comments are closed.