ಕರಾವಳಿ

ಕಾಂಟ್ರಾಕ್ಟ್ ಕೊಡದಿದ್ದಕ್ಕೆ ಕೆಲ ಕಾರ್ಯಕರ್ತರಿಗೆ ನನ್ನ ಮೇಲೆ ಕೋಪ: ಶಾಸಕ ಸುಕುಮಾರ ಶೆಟ್ಟಿ

Pinterest LinkedIn Tumblr

ಕುಂದಾಪುರ: ಬೈಂದೂರು ಕ್ಷೇತ್ರದಲ್ಲಿ ನನ್ನ ವಿರುದ್ದ ಯುವಶಕ್ತಿ ಮುನಿಸಿಕೊಂಡಿಲ್ಲ. ಬದಲಾಗಿ ನಾಲ್ಕೈದು, ಬೆರಳೆಣಿಕೆಯಷ್ಟು ಮಂದಿ ಲಾಭ ಸಿಕ್ಕಿಲ್ಲ ಎನ್ನುವರ ಕಾರಣಕ್ಕೆ ಸಿಟ್ಟುಗೊಂಡಿದ್ದಾರೆ. ಅವರಿಗೆ ಕಾಂಟ್ರಾಕ್ಟ್ (ಕಾಮಗಾರಿ ಗುತ್ತಿಗೆ) ಕೊಡಲಿಲ್ಲ ಎಂಬ ಮುನಿಸಿದೆ. ನಾಲ್ಕೈದು ಮಂದಿಯ ಅವರದ್ದು ಶಕ್ತಿಯಲ್ಲ’- ಹೀಗೆ ತನ್ನದೇ ಕಾರ್ಯಕರ್ತರ ವಿರುದ್ಧ ಕಿಡಿ ಕಾರಿದ್ದು ಬೈಂದೂರಿನ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ.

ಶನಿವಾರ ಶಿವಮೊಗ್ಗ ಲೋಕಸಭಾ ಚುನಾವಣೆ ಹಿನ್ನೆಲೆ ಬೈಂದೂರು ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿದ ಸಂದರ್ಭ ಬೈಂದೂರಿನ ಬಿಜೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಈ ಉತ್ತರ ನೀಡಿದ್ದಾರೆ.

ಹಿಂದೆ ವಿಧಾನಸಭೆಯಲ್ಲಿ ನನ್ನ ಪರ ಕೆಲಸ ಮಾಡಿದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮುನಿಸಿಕೊಂಡಿದ್ದಾರೆ. ಇವರೆಲ್ಲರೂ ಸಮಯ ಸಾಧಕರು. ಹಣಕ್ಕಾಗಿ ಬೇರೆ-ಬೇರೆ ಪಕ್ಷಗಳಿಗೆ ವಲಸೆ ಹೋಗುವವರು. ಇವರು ದೇಶಕ್ಕಾಗಿ, ಪಕ್ಷಕ್ಕಾಗಿ ದುಡಿಯುತ್ತಿಲ್ಲ. ಬದಲಾಗಿ ತಮ್ಮ ಸ್ವಂತಕ್ಕಾಗಿ, ಹಣಕ್ಕಾಗಿ, ಹೊಟ್ಟೆಗಾಗಿ ದುಡಿಯುತ್ತಿದ್ದಾರೆ. ಸೋಷೀಯಲ್ ಮೀಡಿಯಾಗಳಲ್ಲಿ ನನ್ನ ವಿರುದ್ದ ಬರಹ ಪ್ರಕಟಿಸಿದರೆ ಅದನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತನ್ನನ್ನು ವಿರೋಧಿಸುತ್ತಿರುವ ಕೆಲ ಬಿಜೆಪಿ ಯುವ ಕಾರ್ಯಕರ್ತರ ವಿರುದ್ದ ಶಾಸಕ ಸುಕುಮಾರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರು ಗರಂ!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿಯವರ ವಿರುದ್ದ ಗೆಲುವು ಸಾಧಿಸಿ ಬೈಂದೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಬಿ‌ಎಂ ಸುಕುಮಾರ ಶೆಟ್ಟಿಯವರ ಕಾರ್ಯವೈಖರಿಯ ವಿರುದ್ದ ಇತ್ತೀಚೆಗೆ ಬಿಜೆಪಿ ಯುವ ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾತಾಣಗಳಲ್ಲಿ ಶಾಸಕರ ವಿರುದ್ದ ಬರಹಗಳನ್ನು ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ಹಂತದಲ್ಲಿ ಈ ಚುನಾವಣೆಯಲ್ಲಿ ‘ನೋಟಾ’ ಅಸ್ತ್ರ ಹೂಡಲು ಆಲೋಚಿಸಿದ್ದರಾದರೂ ಕೊನೆ ಹಂತದಲ್ಲಿ ಪಕ್ಷದ ಕೆಲಸ ಮಾಡಿದ್ದರು. ಸದ್ಯ ಕಾಂಟ್ರಾಕ್ಟ್ ಕಾರ್ಯಕರ್ತರೆಂಬ ಶಾಸಕರ ಈ ಹೇಳಿಕೆ ಯುವ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ‘ಅವರ ಕಾಂಟ್ರಾಕ್ಟ್ ನಂಬಿಕೊಂಡು ನಾವಿಲ್ಲ. ನಾವೇನು ಗತಿಗೆಟ್ಟಿಲ್ಲ. ಅವರು ಹೇಳಿದ್ದನ್ನೆಲ್ಲಾ ಕೇಳಿಕೊಂಡಿರಲು ನಾವು ಮತಿಗೆಟ್ಟಿಲ್ಲ. ಇದಕ್ಕೆಲ್ಲಾ ಎರಡೇ ದಿನದಲ್ಲಿ ತಕ್ಕ ಉತ್ತರ ಸಿಗುತ್ತೆಂದು ತೀಕ್ಷ್ಣವಾಗಿ ಕಾರ್ಯಕರ್ತರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Comments are closed.