ಕರಾವಳಿ

ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ : ಎಕ್ಸ್‌ಪರ್ಟ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು

Pinterest LinkedIn Tumblr

ಮಂಗಳೂರು, ಅಕ್ಟೋಬರ್.6: ನಗರದ ಎಕ್ಸ್‌ಪರ್ಟ್ ಕಾಲೇಜು ವಿದ್ಯಾರ್ಥಿಯ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಕ್ಸ್‌ಪರ್ಟ್ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಅಧ್ಯಾಪಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶನಿವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ನಗರದ ಎಕ್ಸ್‌ಪರ್ಟ್ ಕಾಲೇಜು ವಿದ್ಯಾರ್ಥಿ ಗೋವಾ ಮೂಲದ ನೇವಿಲ್ ಸಲ್ದಾನಾ ಫೆರ್ನಾಂಡಿಸ್ ಇತ್ತೀಚಿಗೆ ಆತ್ಮಹತ್ಯೆಗೆ ಶರಣಗಿದ್ದರು. ವಿದ್ಯಾರ್ಥಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಎಕ್ಸ್‌ಪರ್ಟ್ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಅಧ್ಯಾಪಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ನೇವಿಲ್ ಸಲ್ದಾನಾ ಫೆರ್ನಾಂಡಿಸ್ ಆತ್ಮಹತ್ಯೆ ಮಾಡಲು ಎಕ್ಸ್‌ಪರ್ಟ್ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರೇ ಕಾರಣ. ತನ್ನ ಡೆತ್‌ನೋಟ್‌ನಲ್ಲೂ ನೇವಿಲ್ ಕೃತ್ಯಕ್ಕೆ ಕಾರಣ ಯಾರು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಪ್ರತಿಭಟನಕಾರರು ಆಪಾದಿಸಿದ್ದಾರೆ.

ಆತ್ಮಹತ್ಯೆಗೈದ ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ ನೀಡಬೇಕು, ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ನಡೆದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣವನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

ಸಂಘದ ರಾಜ್ಯ ಸಲಹೆಗಾರ, ನ್ಯಾಯವಾದಿ ದಿನಕರ ಶೆಟ್ಟಿ, ಸರ್ವ ಕಾಲೇಜು ವಿದ್ಯಾರ್ಥಿ (ಪಿಜಿ) ಸಂಘದ ಅಧ್ಯಕ್ಷ ಭಾತೇಶ್ ಅಳಕೆಮಜಲು, ಸಂಘದ (ಪಿಯು) ಅಧ್ಯಕ್ಷ ನಿಹಾಲ್ ರೈ, ಉಪಾಧ್ಯಕ್ಷ ಹಿತೇಶ್, ರಾಜ್ಯ ಕಾರ್ಯದರ್ಶಿ ಆಸ್ಟೆಲ್ ಲೋಬೊ, ಸಂಘದ (ಇಂಜಿನಿಯರಿಂಗ್) ಅಧ್ಯಕ್ಷ ಸುಶಾಂತ್ ರೊಡ್ರಿಗಡ್, ಸಂಘದ (ಪಿಜಿ) ಪ್ರಧಾನ ಕಾರ್ಯದರ್ಶಿ ಮಜೀದ್, ಜನನ್ ಶೆಟ್ಟಿ, ಶಾಫಿ, ಆಕಾಶ್, ಅಶ್ವಿತ್ ಅಡಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.