ಕರಾವಳಿ

ರೈಲ್ವೆ ಇಲಾಖೆಯ ವಿದ್ಯುತ್ ಕೇಬಲ್ ಕಳವು ಪ್ರಕರಣ : ಐವರು ಕುಖ್ಯಾತ ಡಕಾಯಿತರ ಬಂಧನ

Pinterest LinkedIn Tumblr

ಮಂಗಳೂರು,: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದಲ್ಲಿ ವಿದ್ಯುತ್ ಚಾಲಿತ ರೈಲ್ವೆ ಕಾಮಗಾರಿಗೆಂದು ತ್ರಿಮೂರ್ತಿ ಕಂಪೆನಿಯವರು ಕೆಂಜಾರು ಮೂಡಾಯಿ ಮಠ ಎಂಬಲ್ಲಿ ಶೇಖರಿಸಿಟ್ಟಿದ್ದ ವಿದ್ಯುತ್ ಕೇಬಲ್ ಕಳವು ಮಾಡಿದ ಐವರು ಆರೋಪಿಗಳನ್ನು ಶಾಂತಿಗುಡ್ಡೆಯಲ್ಲಿ ಬಜ್ಪೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಳವಾರು ಬಳಿಯ ಆರೀಫ್ ಯಾನೆ ಮುಹಮ್ಮದ್ ಆರೀಫ್ (28), ಕಿನ್ನಿಪದವು ನಿವಾಸಿ ರಮ್ಲಾನ್ ಇದ್ದೀನ್ ಯಾನೆ ಕಮಲ್ (20), ಕಳವಾರು ಆಶ್ರಯ ಕಾಲನಿ ನಿವಾಸಿ ಅಝರುದ್ದೀನ್ (23), ತೆಂಕ ಎಕ್ಕಾರು ಭಟ್ರಕೆರೆಯ ಅಬ್ದುಲ್ ಹಮೀದ್ (24) ಹಾಗೂ ಕೆಂಜಾರು ಪೇಜಾವರದ ಮುಹಮ್ಮದ್ ಹಕೀಂ (21) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಸುಮಾರು ಎರಡು ಲಕ್ಷ ರೂ. ಮೌಲ್ಯದ ಸೊತ್ತನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಸಿಲ್ವರ್ ಬಣ್ಣದ ಕೆ.ಎ 21 ಪಿ 0479 ನಂಬ್ರದ ಓಮ್ನಿ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಸೆ.11ರಂದು ಬೆಳಗ್ಗಿನ ಜಾವ 2 ಗಂಟೆ ಸುಮಾರು ಕೆಂಜಾರು ಗ್ರಾಮದಲ್ಲಿ ವಿದ್ಯುತ್ ಚಾಲಿತ ರೈಲ್ವೆ ಕಾಮಗಾರಿಗೆಂದು ತ್ರಿಮೂರ್ತಿ ಕಂಪೆನಿಯವರು ಕೆಂಜಾರು ಮೂಡಾಯಿ ಮಠ ಎಂಬಲ್ಲಿ ಶೇಖರಿಸಿಟ್ಟಿದ್ದ ವಿದ್ಯುತ್ ಕೇಬಲ್‌ನ್ನು ಆರೋಪಿಗಳು ಕಳವುಗೈದಿದ್ದರು. ಕಳವುಗೈದ ಒಟ್ಟು ಸೊತ್ತಿನ ಮೌಲ್ಯ 1.50 ಲಕ್ಷ ರೂ. ಎಂದು ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಲೆಸ್ಲಿ ವೇಗಸ್ ನೀಡಿದ ದೂರಿನಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೋಮವಾರ ಬೆಳಗ್ಗೆ ಶಾಂತಿಗುಡ್ಡೆ ವ್ಯಾಪ್ತಿ ಓಮ್ನಿ ಕಾರಿನಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಪೊಲೀಸ್ ಉಪ ನಿರೀಕ್ಷಕರು ಹಾಗೂ ಅಪರಾಧ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದರು. ಪೊಲೀಸರು ಓಮ್ನಿ ಕಾರನ್ನು ಸುತ್ತುವರಿದು ಆರೋಪಿಗಳನ್ನು ವಿಚಾರಣೆ ಮಾಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕಳ್ಳತನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು.

ಕಾರ್ಯಾಚರಣೆಯಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ನಿರ್ದೇಶನದಂತೆ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಡಿ.ಎಸ್. ಮಾರ್ಗದರ್ಶನದಲ್ಲಿ ಬಜ್ಪೆ ಪೊಲೀಸ್ ಠಾಣಾ ನಿರೀಕ್ಷಕ ಎಸ್.ಪರಶಿವಮೂರ್ತಿ, ಪಿಎಸ್ಸೈ ಶಂಕರ್ ನಾಯರಿ, ಎಎಸ್ಸೈಗಳಾದ ಪೊವಪ್ಪ, ರಾಮಚಂದ್ರ, ಜನಾರ್ದನ್ ಗೌಡ ಹಾಗೂ ಎಚ್.ಸಿ.ಗಳಾದ ಪ್ರಕಾಶ್ ಮೂರ್ತಿ, ಚಂದ್ರ ಮೋಹನ್, ರಾಜೇಶ್, ಪಿಸಿಗಳಾದ ಭರತ್, ಶಶಿಧರ್, ಪ್ರೇಮಾನಂದ, ಲಕ್ಷ್ಮಣ ಕಾಂಬ್ಲೆ ಭಾಗವಹಿಸಿದ್ದರು.

Comments are closed.