ಕರಾವಳಿ

ಉರ್ವಾ ನೂತನ ಮಾರುಕಟ್ಟೆ ಸಂಕೀರ್ಣಕ್ಕೆ ಅಂತಿಮ ಟಚ್ : ಮೀನುಗಾರ ಮಹಿಳೆಯರ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವ ಖಾದರ್

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.18: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಸೋಮವಾರ ನಗರದ ಉರ್ವ ಮಾರ್ಕೆಟ್‌ನಲ್ಲಿ 12.5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ನೂತನ ಮಾರುಕಟ್ಟೆ ಸಂಕೀರ್ಣದ ಕಾಮಗಾರಿಯ ಪರಿಶೀಲನೆ ನಡೆಸಿದರು.

ಉರ್ವ ಮಾರ್ಕೆಟ್‌ನಲ್ಲಿ ನಿರ್ಮಿಸಲಾಗುವ ನೂತನ ಮಾರುಕಟ್ಟೆ ಸಂಕೀರ್ಣದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕಾಮಗಾರಿ ಪೂರ್ತಿಯಾದ ಬಳಿಕ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗುವುದು. ಇನ್ನೊಂದು ತಿಂಗಳೊಳಗೆ ಕಾಮಗಾರಿ ಪೂರ್ತಿಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗುವುದು ಎಂದು ಸಚಿವರು ಈ ವೇಳೆ ಸುದ್ಧಿಗಾರರಲ್ಲಿ ತಿಳಿಸಿದರು.

ಈ ಹಿಂದೆ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳ ಅಭಿಪ್ರಾಯ ಸಂಗ್ರಹಿಸಿ, ಅವರ ಬೇಡಿಕೆಯಂತೆ ಮಾರುಕಟ್ಟೆಯಲ್ಲಿ ಹಲವು ಮಾರ್ಪಾಡುಗಳನ್ನು ನಡೆಸಲಾಗುವುದು. ಹೆಚ್ಚುವರಿ ಸ್ಟಾಲ್‌ಗಳನ್ನು ನಿರ್ಮಾಣ ಮಾಡಲು 2ನೇ ಹಂತದ ಯೋಜನೆಗೆ ಆದೇಶವನ್ನೂ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಕಾಮಗಾರಿ ಪರಿಶೀಲನೆ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ಮೀನುಗಾರ ಮಹಿಳೆಯರು ಹಲವು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ಮೀನು ಮಾರುಕಟ್ಟೆಯಲ್ಲಿ ಗ್ರಾನೈಟ್ ಹಾಸಲಾಗಿದ್ದು, ನುಣುಪು ಮೇಲ್ಪದರದಿಂದಾಗಿ ಮುಂದೆ ಸಮಸ್ಯೆಯಾಗಲಿದೆ. ಇಲ್ಲಿ ಗಾಳಿ ಬೆಳಕು ಸರಿಯಾಗಿ ಬೀಳುವಂತೆ ಕಿಟಕಿಗಳನ್ನು ದೊಡ್ಡ ಗಾತ್ರದಲ್ಲಿ ಕಟ್ಟಬೇಕು. ಶೌಚಾಲಯ, ಬಾತ್‌ರೂಮ್ ಸಹಿತ ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಖಾದರ್, ಮೀನು ಮಾರುಕಟ್ಟೆಯ ಮೇಲ್ಪದರವನ್ನು ಗಡಸುಗೊಳಿಸುವಂತೆ ಮತ್ತು ವಿಶ್ರಾಂತಿ ಕೊಠಡಿಯನ್ನು ನಿರ್ಮಿಸುವಂತೆಯೂ ಸೂಚಿಸಿದರು.

ಪ್ರಸ್ತುತ ಉರ್ವ ಮಾರ್ಕೆಟ್‌ನಲ್ಲಿ 36 ಮೀನುಗಾರ ಮಹಿಳೆಯರಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಮಂದಿ ಇಲ್ಲಿ ವ್ಯಾಪಾರ ಮಾಡಬಹುದಾಗಿದ್ದರಿಂದ ಮಾರುಕಟ್ಟೆಯನ್ನು ವಿಸ್ತರಿಸಲಾಗುವುದು. ಅದಕ್ಕಾಗಿ ಯೋಜನೆ ಸಿದ್ಧಪಡಿಸುವಂತೆ ಸಚಿವ ಖಾದರ್ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ಮೇಯರ್ ಭಾಸ್ಕರ ಮೊಯ್ಲಿ, ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಆಯುಕ್ತ ಮುಹಮ್ಮದ್ ನಝೀರ್ ಹಾಗೂ ಮತ್ತಿತರ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

Comments are closed.