ಕರಾವಳಿ

ಉಡುಪಿಯ ಶ್ರೀ ಕೃಷ್ಣಮಠದಲ್ಲಿಂದು ಜನ್ಮಾಷ್ಟಮಿ ಸಂಭ್ರಮ

Pinterest LinkedIn Tumblr

ಉಡುಪಿ: ಶ್ರೀ ಕೃಷ್ಣ ನಗರಿ ಉಡುಪಿಯಲ್ಲಿ ಇಂದು (ಸೆ.2) ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ರಾತ್ರಿ 11.48ಕ್ಕೆ ಚಂದ್ರೋದಯವಾಗಲಿದ್ದು, ತುಳಸಿ ಗಿಡದ ಬಳಿ ಅಘ್ರ್ಯಪ್ರದಾನ ಮಾಡಲಾಗುತ್ತದೆ. ಶನಿವಾರದಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಕೃಷ್ಣನ ದರ್ಶನಕ್ಕೆ ಆಗಮಿಸುತ್ತಿದ್ದು, ವೇಷಗಳು ಹಬ್ಬದ ಮೆರುಗು ಹೆಚ್ಚಿಸಿವೆ.

ಕಳೆದ ಒಂದು ವಾರದಿಂದ ಜನ್ಮಾಷ್ಟಮಿಗೆ ವಿವಿಧ ರೀತಿಯಲ್ಲಿ ಕೃಷ್ಣ ಮಠ ಮತ್ತು ಮಠದ ಪರಿಸರ ಸಜ್ಜುಗೊಳ್ಳುತ್ತಾ ಬಂದಿದೆ. ಚಕ್ಕುಲಿ, ವಿವಿಧ ಬಗೆಯ ಲಡ್ಡುಗಳ ತಯಾರಿ ಆರಂಭಗೊಂಡಿದೆ. ಲಡ್ಡು, ಚಕ್ಕುಲಿಗೆ ಬೇಕಾದ ಹಿಟ್ಟುಗಳ ಮಾರಾಟವೂ ಮಾರುಕಟ್ಟೆಯಲ್ಲಿ ಭರದಿಂದ ಸಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯ ಎರಡು ದಿನ ಪೂರ್ವದಲ್ಲೇ ಅಂಗಡಿ ಮುಂಗಟ್ಟುಗಳು ರಥಬೀದಿಗೆ ಲಗ್ಗೆ ಇಟ್ಟಿದ್ದು, ವ್ಯಾಪಾರ ಆರಂಭಗೊಂಡಿದೆ. ಹೂಹಣ್ಣು ಮಾರಾಟವು ಜೋರಾಗಿದೆ.

ಕೃಷ್ಣಾಷ್ಟಮಿಗೆಂದು ದೇಗುಲದ ಒಳಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ದೇವರಿಗೆ ಜನ್ಮಾಷ್ಟಮಿಯಂದು ವಜ್ರಕವಚದ ಅಲಂಕಾರ ಮಾಡಿದರೆ, ವಿಟ್ಲಪಿಂಡಿಯಂದು ಗೋಪಾಲಕೃಷ್ಣನ ಅಲಂಕಾರ ಮಾಡಲಾಗುತ್ತದೆ. ಸೆ. 2ರ ಬೆಳಗ್ಗೆಯಿಂದಲೇ ಸಹಸ್ರ ವಿಷ್ಣು ಪಾರಾಯಣ, ಲಕ್ಷ ತುಳಸಿ ಅರ್ಚನೆ ನಡೆಯಲಿದ್ದು, ಬೆಳಗ್ಗೆ 10 – ಸಂಜೆ 6ರ ವರೆಗೆ ಮಧ್ವಮಂಟಪದಲ್ಲಿ ವಿವಿಧ ಮಹಿಳಾ ತಂಡಗಳಿಂದ ನಡೆಯುವ ಭಜನೆ, ಮಧ್ಯಾಹ್ನ 12ರಿಂದ ಓಲಗ ಮಂಟಪದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸುಬ್ರಾಯ ಭಂಡಾರಿ ಅವರಿಂದ ವೈವಿಧ್ಯ ಸಂಗೀತ ಜುಗಲ್‌ಬಂದಿ, ಸಂಜೆ 6ರಿಂದ ಗಿಟಾರ್‌ ಕಲಾವಿದ ಶರತ್‌ ಹಳೆಯಂಗಡಿ ತಂಡದಿಂದ ವೈವಿಧ್ಯಮಯ ಕಾರ್ಯಕ್ರಮ, ಸಂಜೆ 7ಕ್ಕೆ ಪ್ರವೀಣ್‌ ಗೋಡ್ಕಿಂಡಿಯವರಿಂದ ರಾಜಾಂಗಣದಲ್ಲಿ ವೇಣು ವಾದನ ಕಛೇರಿ ನಡೆಯಲಿದೆ.

Comments are closed.