ಕರಾವಳಿ

ಮಂಗಳೂರು : ಆರೆಸ್ಸೆಸ್‌ನಿಂದ ಕೇರಳದ ಸಂತ್ರಸ್ತರಿಗೆ ಒಂದು ಕೋಟಿಗೂ ಅಧಿಕ ಮೊತ್ತದ ದಿನಬಳಕೆ ವಸ್ತುಗಳ ರವಾನೆ

Pinterest LinkedIn Tumblr

ಮಂಗಳೂರು : ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೇರಳದ ಸಂತ್ರಸ್ತರಿಗೆ ಮಂಗಳೂರು ಮಹಾನಗರ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸೇವಾ ಭಾರತಿಯ ಮೂಲಕ ಒಂದು ಕೋಟಿಗೂ ಅಧಿಕ ಮೊತ್ತದ ದಿನಬಳಕೆಯ ವಸ್ತುಗಳು ಸೇರಿದಂತೆ ವಿವಿಧ ಅಗತ್ಯ ಸಾಮಗ್ರಿಗಳನ್ನು ರವಾನಿಸಿದೆ.

ಅಕ್ಕಿ, ಹಾಲು, ಎಣ್ಣೆ, ಔಷಧಿಗಳು ಸೇರಿದಂತೆ ಒಟ್ಟು ಆರು ಲೋಡ್ ಸಾಮಗ್ರಿಗಳನ್ನು ಇದುವರೆಗೆ ಸಾಗಿಸಲಾಗಿದೆ. ಇಲ್ಲಿನ ಮಣ್ಣಗುಡ್ಡೆ ಪ್ರತಾಪನಗರದಲ್ಲಿರುವ ಸಂಘನಿಕೇತನದಲ್ಲಿ ವಸ್ತುಗಳನ್ನು ಸಂಗ್ರಹಿಸಿ ಸಾಗಿಸಲಾಗುತ್ತಿದ್ದು, ಮಂಗಳವಾರ ಬೆಳಗ್ಗೆ ಲಾರಿಯ ಮೂಲಕ ಆರನೇ ಲೋಡ್ ಸಾಮಗ್ರಿಯನ್ನು ಕೇರಳಕ್ಕೆ ಕಳುಹಿಸಲಾಯಿತು.

ಈ ಸಂದರ್ಭ ಕೇಶವ ಸ್ಮೃತಿ ಸಂವರ್ಧನಾ ಸಮಿತಿಯ ಕಾರ್ಯದರ್ಶಿ ರಘುವೀರ್ ಕಾಮತ್, ವಿಶ್ವಸ್ಥರಾದ ಶ್ರೀನಿವಾಸ ಪ್ರಭು,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್., ಮಹಾನಗರ ವ್ಯವಸ್ಥಾ ಪ್ರಮುಖ್ ಶಾಂತಾರಾಮ್ ಕೆ.ಎಂ., ಸಹ ಸಂಘ ಚಾಲಕ್ ಸುನಿಲ್ ಆಚಾರ್, ಸೇವಾಭಾರತಿಯ ಕಾರ್ಯಕರ್ತರಾದ ರಾಮರಾಯ ಕಾಮತ್, ದಿವಾಕರ ಭಟ್, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

3 ಲೋಡ್ ಕುಚಲಕ್ಕಿ, 3 ಸಾವಿರ ಲೀಟರ್ ಹಾಲು

ಸಂತ್ರಸ್ತರ ನೆರವಿಗೆ ಸ್ಪಂದಿಸುತ್ತಿರುವ ಆರೆಸ್ಸೆಸ್ ಇದುವರೆಗೆ 3 ಲೋಡ್ ಅಕ್ಕಿಯನ್ನು ಕೇರಳಕ್ಕೆ ರವಾನಿಸಿದೆ. 3 ಸಾವಿರ ಲೀಟರ್ ಹಾಲು, 200 ಬಾಕ್ಸ್ ಬಿಸ್ಕತ್, ತಲಾ 2 ಲೀಟರ್ ಬಾಟಲಿಯ 500 ಬಾಕ್ಸ್ ನೀರು, 50 ಬಾಕ್ಸ್ ಔಷಧಿಗಳು, 2 ಸಾವಿರ ಸೀರೆಗಳು, 1,500 ಶರ್ಟ್, 5 ಬಾಕ್ಸ್ ಮಕ್ಕಳ ವಸ್ತ್ರಗಳು, 2 ಬಾಕ್ಸ್ ಸಾಬೂನು, 2 ಬಾಕ್ಸ್ ಕ್ಯಾಂಡಲ್ ಮತ್ತು ಬೆಂಕಿಪೊಟ್ಟಣ, ತಲಾ 3 ಬಾಕ್ಸ್ ಟೂತ್‌ಬ್ರಶ್ ಮತ್ತು ಟೂತ್‌ಪೇಸ್ಟ್, ಸ್ವಚ್ಛತೆ ಹಾಗೂ ಇತರ ಕೆಲಸ ಕಾರ್ಯಗಳಿಗಾಗಿ 50 ಹಾರೆ, ಬಕೆಟ್, ಮಗ್ ಇತ್ಯಾದಿ ಸಾಮಗ್ರಿಗಳು, ಸ್ಯಾನಿಟರಿ ಬಾಕ್ಸ್, ಫಿನಾಯಿಲ್ ಮತ್ತು ಡೆಟಾಲ್ ತಲಾ ಹತ್ತು ಬಾಕ್ಸ್, ತೆಂಗಿನ ಎಣ್ಣೆ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ವಿವಿಧ ಪೊಟ್ಟಣಗಳಲ್ಲಿ ತುಂಬಿಸಿ ಸಾಗಿಸಲಾಗಿದೆ.

ಸೇವಾ ಭಾರತಿಯ ಮೂಲಕ ಈ ಎಲ್ಲಾ ಆಹಾರ ಸಾಮಾಗ್ರಿಗಳು ರವಾನೆಯಾಗಿದ್ದು, ಕೇರಳದಲ್ಲಿನ ಸೇವಾಭಾರತಿಯ ತಂಡಕ್ಕೆ ಕೈಗೊಪ್ಪಿಸಲಿದೆ. ಅಲ್ಲಿ ಆ ತಂಡವಸ್ತುಗಳನ್ನು ವಿಂಗಡನೆ ಮಾಡಿ ಹಂಚಲಿದೆ ಎಂದು ಕೇಶವ ಸ್ಮೃತಿ ಸಂವರ್ಧನಾ ಸಮಿತಿಯ ಕಾರ್ಯದರ್ಶಿ ರಘುವೀರ್ ಕಾಮತ್ ತಿಳಿಸಿದ್ದಾರೆ.

ಕಳಸದಿಂದಲೂ ಬಂತು ಸಾಮಗ್ರಿ :

ಪುತ್ತೂರು, ಸುಳ್ಯ, ಬೆಳ್ತಂಗಡಿ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನ ಕಳಸ ಮುಂತಾದೆಡೆಯಿಂದ ಆರೆಸ್ಸೆಸ್ ಕಾರ್ಯಕರ್ತರು, ಸಾರ್ವಜನಿಕರು ವಿವಿಧ ಸಾಮಗ್ರಿಗಳನ್ನು ಸಂಘನಿಕೇತನಕ್ಕೆ ತಂದೊಪ್ಪಿಸುತ್ತಿದ್ದಾರೆ. ಬಂದ ವಸ್ತುಗಳನ್ನು ಸೇವಾಭಾರತಿಯ ಕಾರ್ಯಕರ್ತರು ವಿಂಗಡಿಸಿ ಜೋಡಿಸಿಡುತ್ತಿದ್ದಾರೆ. ಕಳಸದಿಂದ 2 ಸಾವಿರ ಸೀರೆ, 1500 ಶರ್ಟ್ ಇತ್ಯಾದಿ ಬಟ್ಟೆ ಬರೆಗಳು ಬಂದಿವೆ. ಜನತೆ ಸಂತ್ರಸ್ತರ ನೆರವಿಗೆ ಸ್ಪಂದಿಸುತ್ತಿದ್ದಾರೆ. ಇಂತಹ ಮಾನವೀಯ ಮೌಲ್ಯಗಳು ಹೆಚ್ಚಾಗಬೇಕು ಎಂದು ಸುನಿಲ್ ಆಚಾರ್ ಈ ಸಂದರ್ಭ ತಿಳಿಸಿದರು.

ಸಾಗಾಟಕ್ಕೆ ಕೆನರಾ ಸ್ಪ್ರಿಂಗ್ಸ್ ನೆರವು :

ಸಂಗ್ರಹಗೊಂಡ ಸಾಮಾಗ್ರಿಗಳನ್ನು ಪ್ರೇಮನಾಥ ಕುಡ್ವ ಅವರ ಮಾಲಕತ್ವದ `ಕೆನರಾ ಸ್ಪ್ರಿಂಗ್ಸ್’ ಲಾರಿಗಳ ಮೂಲಕ ಸಾಗಿಸಲಾಗುತ್ತಿದೆ. ಉಚಿತವಾಗಿ ಅವರು ಈ ಲಾರಿಗಳನ್ನು ವಸ್ತುಗಳ ಸಾಗಾಟಕ್ಕಾಗಿ ಒದಗಿಸುತ್ತಿದ್ದಾರೆ.

Comments are closed.