ಕರಾವಳಿ

ಭಾರತವನ್ನು ಜಗತ್ತಿನ ಎತ್ತರಕ್ಕೆ ಕೊಂಡೊಯ್ದವರು ವಾಜಪೇಯಿ : ನುಡಿನಮನ ಸಲ್ಲಿಸಿ ಸಂಸದ ನಳಿನ್‌ಕುಮಾರ್ ಕಟೀಲ್

Pinterest LinkedIn Tumblr

ಮಂಗಳೂರು, ಆಗಸ್ಟ್.17: ಆಗಸ್ಟ್ 16 ರಂದು ವಿಧಿವಶರಾದ ಅಜಾತಶತ್ರು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ರಾತ್ರಿ ಶೃದ್ಧಾಂಜಲಿ ಅರ್ಪಿಸಲಾಯಿತು.

ನುಡಿನಮನ ಸಲ್ಲಿಸಿ ಮಾತನಾಡಿದ ಸಂಸದ ನಳಿನ್‌ಕುಮಾರ್ ಕಟೀಲ್ ಅವರು, ಸಚ್ಛಾರಿತ್ರ್ಯದ ರಾಜಕಾರಣಿಯಾದ ವಾಜಪೇಯಿ ಜಗತ್ತಿನ ಎತ್ತರಕ್ಕೆ ಭಾರತವನ್ನು ಕೊಂಡೊಯ್ದವರು. ವಾಜಪೇಯಿ ನುಡಿದಂತೆ ನಡೆದ, ರಾಷ್ಟ್ರಮಾತೆಯ ಆರಾಧನೆಯೇ ತನ್ನ ಪ್ರಮುಖ ಕರ್ತವ್ಯವೆಂದು ತನ್ನ ಜೀವನವನ್ನು ರಾಷ್ಟ್ರಹಿತಕ್ಕೆ ಅರ್ಪಿಸಿಕೊಂಡ ಅಪೂರ್ವ ವ್ಯಕ್ತಿ. ರಾಜಕೀಯ ಕ್ಷೇತ್ರದಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದಕ್ಕೆ ಅವರ ಬದುಕು ನಿದರ್ಶನವಾಗಿದೆ.ಸರ್ವ ಶಿಕ್ಷಾ ಅಭಿಯಾನದ ಮೂಲಕ ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು ಎಂದು ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದವರು ಎಂದು ಹೇಳಿದರು.

ಮಾಜಿ ಶಾಸಕ, ಮಾಜಿ ಉಪಸಭಾಪತಿ ಎನ್.ಯೋಗೀಶ್ ಭಟ್ ಮಾತನಾಡಿ, ಪ್ರಧಾನಿಯಾಗಿ ದೇಶಕ್ಕೆ ಒಳ್ಳೆಯ ಆಡಳಿತ ನೀಡಿದ ವಾಜಪೇಯಿ ಅವರು ತನ್ನ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಈ ನಿಟ್ಟಿನಲ್ಲಿ ಶ್ರಮಿಸಿದವರು. ಅವರು ಕೈಗೊಂಡ ನಿಲುವುಗಳು ಅಚಲವಾಗಿರುತ್ತಿದ್ದವು ಎಂದು ತಿಳಿಸಿದರು.

ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮಾಜಿ ಶಾಸಕ ಎನ್.ಯೋಗೀಶ್ ಭಟ್, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಸೇರಿದಂತೆ ಹಲವು ಮಂದಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಗಲಿದ ವಾಜಪೇಯಿ ಅವರಿಗೆ ನುಡಿನಮನ ಸಲ್ಲಿಸಿದರು.

Comments are closed.