ಕರಾವಳಿ

ನಾಯಿ ಹಿಡಿಯಲು ಬಂದು ಬಾವಿಗೆ ಬಿದ್ದ ಚಿರತೆ: ಅರಣ್ಯಾಧಿಕಾರಿಗಳಿಂದ ಚಿರತೆ ರಕ್ಷಣೆ

Pinterest LinkedIn Tumblr

ಕುಂದಾಪುರ: ತಾಲೂಕಿನ ಹೊಂಬಾಡಿ-ಮಂಡಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಹುಣ್ಸೆಮಕ್ಕಿಯಲ್ಲಿ ತಡರಾತ್ರಿ ನಾಯಿ ಹಿಡಿಯಲು ಬಂದ ಚಿರತೆ ಬಾವಿಗೆ ಬಿದ್ದಿದೆ.

ರಾತ್ರಿ ಸುಮಾರು ಒಂದು ಗಂಟೆ ಸುಮಾರಿಗೆ ಹುಣ್ಸೆಮಕ್ಕಿ ನಿವಾಸಿ ಬಾಬಿ ಕುಲಾಲ್ ಎಂಬವರ ಮನೆಯ ನಾಯಿಯನ್ನು ಹಿಡಿಯಲೆತ್ನಿಸಿದ ಚಿರತೆ ನಾಯಿ ಸಮೇತವಾಗಿ ಬಾವಿಗೆ ಹಾರಿತ್ತು. ಚಿರತೆ ಕೂಗುವ ಸದ್ದಿಗೆ ಎಚ್ಚರಗೊಂಡ ಮನೆಯವರು ಹೊರಗಡೆ ಬಂದು ನೋಡುವಾಗ ಬಾವಿಯೊಳಗೆ ನಾಯಿ ಹಾಗೂ ಚಿರತೆ ಕೂಗುತ್ತಿತ್ತು. ತಡಮಾಡದೆ ಬಾವಿಯೊಳಗೆ ಬುಟ್ಟಿಯೊಂದನ್ನು ಇಳಿಸಿ ನಾಯಿಯನ್ನು ಮೇಲಕ್ಕೆತ್ತಿದ್ದು, ಕೋಟ ಪೊಲೀಸ್ ಠಾಣೆಗೆ ಕರೆ ಮಾಡಿ ಚಿರತೆ ಬಾವಿಯೊಳಗಿರುವ ಬಗ್ಗೆ ಮಾಹಿತಿ ನೀಡಿದರು. ರಾತ್ರಿಯೆ ಸ್ಥಳಕ್ಕಾಗಮಿಸಿದ ಕೋಟ ಪೊಲೀಸರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಬೆಳಗ್ಗೆಯಿಂದ ಚಿರತೆಯನ್ನು ಮೇಲೆತ್ತಲು ಸತತ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೋನನ್ನು ಹಗ್ಗದ ಮೂಲಕ ಬಾವಿಯೊಳಗಿಳಿಸಿ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು.

ಐದು ವರ್ಷದ ಗಂಡು ಚಿರತೆ ಇದಾಗಿದ್ದು, ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಡಲಾಗಿದೆ.

Comments are closed.