ಕುಂದಾಪುರ: ತಾಲೂಕಿನ ಹೆಮ್ಮಾಡಿ ಪರಿಸರದಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರ ಮಾಹಿತಿ ಮೇರೆಗೆ ಪೊಲಿಸರು ಠಾಣೆಗೆ ಕರೆತಂದು ವಿಚಾರಿಸಿದ್ದು ಆತ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದ ಹಿನ್ನೆಲೆ ಆರೋಗ್ಯ ಇಲಾಖೆ ಸಹಕಾರದಲ್ಲಿ ಧಾರವಾಡದ ಡಿಮ್ಯಾನ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಕುಂದಾಪುರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿ ಮೂಲದ ಉಮೇಶ್ ಗೌಡರ್ (24) ಎಂಬಾತ ಗುರುವಾರ ಬೆಳಿಗ್ಗೆ ಹೆಮ್ಮಾಡಿ ಪರಿಸರದಲ್ಲಿ ಅಡ್ಡಾಡುತ್ತಿದ್ದಾಗ ಸಾರ್ವಜನಿಕರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ಕರೆದೊಯ್ಯುತ್ತಾರೆ. ಠಾಣೆಯಲ್ಲಿ ಪಿಎಸ್‌ಐ ಹರೀಶ್ ಆರ್.ನಾಯ್ಕ್ ಆತನನ್ನು ವಿಚಾರಣೆಗೊಳಪಡಿಸಿದಾಗ ಆತನೊಬ್ಬ ಮಾನಸಿಕ ಅಸ್ವಸ್ಥ ಎಂಬುದು ತಿಳಿಯುತ್ತದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ ಅವರ ಗಮನಕ್ಕೆ ತರುತ್ತಾರೆ. ಕೂಡಲೇ ಇದಕ್ಕೆ ಸ್ಪಂದಿಸಿದ ಆರೋಗ್ಯ ಇಲಾಖೆಯವರು ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ಮಾನಸಿಕ ರೋಗ ತಜ್ಞರ ಮೂಲಕ ತಪಾಸಣೆ ನಡೆಸಿ ಸರ್ಟಿಪಿಕೇಟ್ ನೀಡುತ್ತಾರೆ. ಕೆಲವು ಕಾನೂನು ತೊಡಕಿನ ಹಿನ್ನೆಲೆ ಗುರುವಾರ ಉಮೇಶನಿಗೆ ಪುನರ್ವಸತಿ ಕಲ್ಪಿಸಿ ಶುಕ್ರವಾರ ಬೆಳಿಗ್ಗೆ ಧಾರವಾಡದಲ್ಲಿರುವ ಡಿಮ್ಯಾನ್ಸ್ ಆಸ್ಪತ್ರೆಗೆ ಆತನನ್ನು ಪೊಲೀಸರ ಸುಪರ್ದಿಯಲ್ಲಿ ಕಳುಹಿಸಲಾಗುತ್ತದೆ. ಅಲ್ಲದೇ ಆತನ ಮನೆಯವರ ಪತ್ತೆಗೂ ಮುಂದಾಗಿದ್ದಾರೆ.

ಡಿವೈಎಸ್ಪಿ ದಿನೇಶ್ ಕುಮಾರ್, ಪಿ.ಎಸ್.ಐ ಹರೀಶ್ ಆರ್ ನಾಯ್ಕ್ ಮುತುವರ್ಜಿಯಲ್ಲಿ ಎ.ಎಸ್.ಐ ಸುಧಾಕರ, ತಾರನಾಥ, ಸುಧಾ ಪ್ರಭು, ಎಚ್.ಸಿ.ಗಳಾದ ವೆಂಕಟರಮಣ, ಸುಬ್ಬಣ್ಣ ಶೆಟ್ಟಿ, ಜಗನ್ನಾಥ, ಸಿಬ್ಬಂದಿಗಳಾದ ಮಂಜುನಾಥ್, ಪ್ರವೀಣ್ ಕುಮಾರ್ ಈತನನ್ನು ಉಡುಪಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವಲ್ಲಿ ಇದ್ದರು.
ಸಿ.ಎಂ, ಹೋಂ ಮಿನಿಸ್ಟರ್ ಗೊತ್ತು..!
ಠಾಣೆಗೆ ಕರೆತಂದ ಸಂದರ್ಭ ನನಗೆ ಸಿಎಂ ಗೊತ್ತಿದೆ. ಹೋಂ ಮಿನಿಸ್ಟರ್ ಅವರಿಗೆ ಫೋನ್ ಮಾಡಿ ಕೊಡಿ… ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಪರಿಚಯವಿದೆ. ನಾನು ಐತಿಹಾಸಿಕ ಪುರುಷ ಎಂದೆಲ್ಲಾ ಮಾತನಾಡುತಿದ್ದ ಉಮೇಶನನ್ನು ನೋಡಿ ಸ್ವತಃ ಪೊಲೀಸರೇ ಈತನಿಗೆ ಚಿಕಿತ್ಸೆ ಅಗತ್ಯವಿದೆ ಎಂದು ಮನಗಂಡಿದ್ದರು. ಈ ಬಗ್ಗೆ ಡಿವೈಎಸ್ಪಿ ಹಾಗೂ ಎಸ್‌ಐ ಕಾಳಜಿ ಹಾಗೂ ಸಮಯ ಪ್ರಜ್ಞೆ ಹಾಗೂ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪರ ಸ್ಪಂದನೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಒಂದಷ್ಟು ಜ್ನಾನವುಳ್ಳವನಾಗಿ ಕಾಣಿಸುವ ಉಮೇಶ್ ಕೆಲವೊಂದು ಬಾರಿ ಮೂಡಿಯಂತೆಯೂ ವರ್ತಿಸುತ್ತಿದ್ದ. ಚಾಲಕ ವೃತ್ತಿ ಮಾಡಿಕೊಂಡಿದ್ದ ಆತನಿಗೆ ಸೂಕ್ತ ಚಿಕಿತ್ಸೆ ಸಿಕ್ಕಿ ಆತ ಮೊದಲಿನಂತೆ ಆಗಲಿ.
ವರದಿ – ಯೋಗೀಶ್ ಕುಂಭಾಸಿ
Comments are closed.