ರಾಷ್ಟ್ರೀಯ

ಒಂದೇ ಮನೆಯ ನಾಲ್ವರ ಮೃತ ದೇಹಗಳು ಮನೆಯ ಹಿಂಬದಿಯ ಗುಂಡಿಯಲ್ಲಿ ಪತ್ತೆ!

Pinterest LinkedIn Tumblr


ತಿರುವನಂತಪುರಂ: ನಾಪತ್ತೆಯಾಗಿದ್ದ ಕೇರಳ ಕುಟುಂಬದ ನಾಲ್ಕು ಸದಸ್ಯರ ಮೃತದೇಹಗಳು ಅವರ ಮನೆಯ ಹಿಂಬದಿಯ ಗುಂಡಿಯಲ್ಲಿ ಪತ್ತೆಯಾಗಿದೆ.

ಘಟನೆ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದ್ದು, ಮೃತ ಪಟ್ಟವರನ್ನು ಕೃಷ್ಣನ್ (52), ಪತ್ನಿ ಸುಶೀಲಾ (50) ಹಾಗೂ ಅವರ ಮಗಳು ಹರ್ಷ (21), ಮಗ ಅರ್ಜುನ್(19) ಎಂದು ಗುರುತಿಸಲಾಗಿದ್ದು, ಕಳೆದ ನಾಲ್ಕು ದಿನಗಳಿಂದಲೂ ನಾಪತ್ತೆಯಾಗಿದ್ದ ಇವರ ಶವ ಮನೆಯ ಹಿಂಭಾಗದಲ್ಲಿ ಗುಂಡಿಯಲ್ಲಿ ಹೂಳಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತಪಟ್ಟವರು ಮುಂಡನ್ಮುಡಿಯಲ್ಲಿರುವ ರಬ್ಬರ್ ಎಸ್ಟೇಟ್‍ನಲ್ಲಿ ವಾಸವಾಗಿದ್ದರು. ಕೃಷ್ಣನ್ ರಬ್ಬರ್ ತೋಟವನ್ನು ಹೊಂದಿದ್ದು, ಅವರು ವಾಮಾಚಾರ ಅಭ್ಯಾಸ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಈ ಘಟನೆ ಕುರಿತು ಪೊಲೀಸರು ಸ್ಥಳೀಯರನ್ನು ವಿಚಾರಣೆ ಮಾಡಿದಾಗ ನಾಲ್ಕು ದಿನಗಳಿಂದ ಅವರು ಕಾಣೆಯಾಗಿದ್ದರು ಎಂದು ಹೇಳಿದ್ದಾರೆ. ಹಾಗಾಗಿ ಪೊಲೀಸರು ಮನೆಯ ಸುತ್ತಮುತ್ತಲೂ ಪರಿಶೀಲಿಸಿದಾಗ ಒಂದರ ಮೇಲೊಂದರಂತೆ ಬಿದ್ದಿರುವ ಕೊಳೆತ ಮೃತದೇಹಗಳು ಪತ್ತೆಯಾಗಿವೆ. ಈ ಕೃತ್ಯ ಭಾನುವಾರ ನಡೆದಿದ್ದು, ಮನೆಯಲ್ಲಿ ಸುತ್ತಿಗೆ ಮತ್ತು ಚಾಕು ಸಿಕ್ಕಿದೆ.

ಬುಧವಾರ ಮನೆಗೆ ಕುಟುಂಬದ ಸಂಬಂಧಿಕರು ಬಂದಿದ್ದು, ಆ ಸಂದರ್ಭದಲ್ಲಿ ಮೆಟ್ಟಿಲುಗಳ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈಗ ಮರಣೋತ್ತರ ಪರೀಕ್ಷೆಗೆಂದು ಮೃತ ದೇಹಗಳನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಮೃತ ದೇಹಗಳ ಮೇಲೆ ಆಗಿರುವ ಗಾಯಗಳನ್ನು ನೋಡಿದರೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Comments are closed.