ಕರ್ನಾಟಕ

ಬಿಬಿಎಂಪಿ ಏಕೆ ಬೇಕು, ಮುಚ್ಚಿಬಿಡಿ: ಹೈಕೋರ್ಟ್‌ ಛೀಮಾರಿ

Pinterest LinkedIn Tumblr


ಬೆಂಗಳೂರು: ಜನರಿಗಾಗಿ ಕೆಲಸ ಮಾಡದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಏಕೆ ಬೇಕು ಮುಚ್ಚಿಬಿಡಿ. ಪಾಲಿಕೆ ಇರುವುದು ದಿನದ 24 ಗಂಟೆಗಳೂ ಜನರ ಕೆಲಸ ಮಾಡಲು, ಅದು ತನ್ನ ಕರ್ತವ್ಯ ಮಾಡದೆ ವಿಫಲವಾದರೆ ಅದ್ಯಾಕೆ ಬೇಕು?

ಹೀಗೆಂದು ಹೈಕೋರ್ಟ್‌ ಬುಧವಾರ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಮತ್ತು ನ್ಯಾ.ಆರ್‌.ದೇವದಾಸ್‌ ಅವರಿದ್ದ ವಿಭಾಗೀಯ ಪೀಠ ಪಾಲಿಕೆಯ ಕಾರ‍್ಯವೈಖರಿಯ ವಿರುದ್ಧ ಅಕ್ಷರಶಃ ವಾಗ್ದಾಳಿ ನಡೆಸಿತು. ಅಲ್ಲದೆ, ಅನಧಿಕೃತ ಫ್ಲೆಕ್ಸ್‌, ಬಂಟಿಂಗ್ಸ್‌, ಬ್ಯಾನರ್ಸ್‌ ತೆರವುಗೊಳಿಸಿ ಸಂಜೆಯೊಳಗೆ ವರದಿ ಸಲ್ಲಿಸುವಂತೆಯೂ ಆದೇಶ ನೀಡಿತು.

ಎರಡೂ ಪ್ರಕರಣಗಳಲ್ಲಿಯೂ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ”ಸಣ್ಣ ಪುಟ್ಟ ಕೆಲಸಗಳನ್ನೂ ನಿರ್ಲಕ್ಷಿಸುವ ಇಂತಹ ಪಾಲಿಕೆ ಇರಬೇಕೇ? ಅದು ಎಚ್ಚೆತ್ತುಕೊಳ್ಳದಿದ್ದರೆ ಬೇರೆ ರೀತಿ ಕ್ರಮ ಕೈಗೊಳ್ಳಬೇಕಾಗುತ್ತದೆ ”ಎಂದೂ ಹೇಳಿತು.

ನಗರದ ಅನಧಿಕೃತ ಫ್ಲೆಕ್ಸ್‌ ಹಾವಳಿ ಕುರಿತು ಸಾಮಾಜಿಕ ಕಾರ‍್ಯಕರ್ತ ಸಾಯಿದತ್ತ ಸಲ್ಲಿಸಿದ್ದ ಪಿಐಎಲ್‌ ಅನ್ನು ನ್ಯಾಯಪೀಠ ವಿಚಾರಣೆ ಕೈಗೆತ್ತಿಕೊಂಡಿತು. ನ್ಯಾಯಾಲಯ ಫುಲ್‌ ಗರಂ ಆಗಿ ” ಬೆಂಗಳೂರಿನಲ್ಲಿ ಎಗ್ಗಿಲ್ಲದೆ ಹಾಕಿರುವ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್‌ಗಳು ಪ್ರಕರಣ ಸಂಖ್ಯೆ99 ತಲುಪುವುದರೊಳಗೆ ತೆರವಾಗಬೇಕು”ಎಂದು ಪಾಲಿಕೆ ಪರ ವಕೀಲರಾದ ವಿ. ಶ್ರೀನಿಧಿಗೆ ಸೂಚಿಸಿತು.

”ಮಧ್ಯಾಹ್ನದೊಳಗೆ ಅಕ್ರಮ ಬ್ಯಾನರ್‌ ತೆರವಾಗಬೇಕು. ತೆರವಾಗಿದೆಯೋ ಇಲ್ಲವೋ ಎಂದು ಪರಿಶೀಲಿಸುತ್ತೇವೆ. ಕೋರ್ಟ್‌ ಕಮಿಷನರ್‌ ಕಳುಹಿಸಿ ಪರಿಶೀಲಿಸಬೇಕಾಗುತ್ತದೆ”ಎಂದು ಎಚ್ಚರಿಕೆ ನೀಡಿದ್ದ ನ್ಯಾಯಪೀಠ ಮಧ್ಯಾಹ್ನ ಬಿಬಿಎಂಪಿ ಅಧಿಕಾರಿಗಳ ಖುದ್ದು ಹಾಜರಿಗೂ ಸೂಚನೆ ನೀಡಿತು.

ಕ್ಲೋಸ್‌ ಡೌನ್‌ ಬಿಬಿಎಂಪಿ: ನಂತರ ನ್ಯಾಯಪೀಠ, ರಿಚ್ಮಂಡ್‌ ರಸ್ತೆಯಲ್ಲಿನ ಅನಧಿಕೃತ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕುರಿತಾದ ಪಿಐಎಲ್‌ ವಿಚಾರಣೆಯನ್ನು ಕೈಗೆತ್ತಿಕೊಂಡಿತು.

ಆಗ ಕೋರ್ಟ್‌ ಮತ್ತೆ ಗರಂ ಆಗಿ ”ಕಳೆದ ವಿಚಾರಣೆ ವೇಳೆ ಹೊಸ ಜಾಹೀರಾತು ನೀತಿ ತರುತ್ತೇವೆ, ಎಲ್ಲ ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌, ಬಂಟಿಂಗ್ಸ್‌ ಹಾವಳಿ ನಿಯಂತ್ರಿಸುತ್ತೇವೆಂದು ಹೇಳಿದ್ದೀರಿ , ಏಲ್ಲಿದೆ ನೀತಿ?” ಎಂದು ಪಾಲಿಕೆ ಪರ ವಕೀಲ ವಿ. ಶ್ರೀನಿಧಿಯವರನ್ನು ಪ್ರಶ್ನಿಸಿತು.

ಅವರು ”ನೀತಿಯ ಕರಡು ಸಿದ್ಧವಿದೆ.ಅದನ್ನು ಬಿಬಿಎಂಪಿ ಕೌನ್ಸಿಲ್‌ ಮುಂದಿಟ್ಟು ಅನುಮೋದನೆ ಪಡೆಯಬೇಕು” ಎಂದು ಹೇಳಿದರು.

ಅದಕ್ಕೆ ಸಿಟ್ಟಿಗೆದ್ದ ನ್ಯಾಯಪೀಠ ”4 ವಾರದಲ್ಲಿ ಜಾಹಿರಾತು ನೀತಿ ರೂಪಿಸುವ ಭರವಸೆ ಏನಾಯಿತು? ಬಿಬಿಎಂಪಿ ಇರುವುದು ದಿನದ 24ಗಂಟೆ ಜನರ ಕೆಲಸ ಮಾಡೋದಕ್ಕೆ ?ಅದನ್ನು ನಿರ್ವಹಿಸದಿದ್ದರೆ ಬಿಬಿಎಂಪಿ ಏಕೆ ಬೇಕು? ಇದೆಂಥಾ ಬಿಬಿಎಂಪಿ, ನೀವು ಬಿಬಿಎಂಪಿಯನ್ನು ಮುಚ್ಚಿಬಿಡಿ (ಕ್ಲೋಸ್‌ ಡೌನ್‌)” ಎಂದು ಝಾಡಿಸಿತು.

”ಪಾಲಿಕೆಯ ನಿರ್ಲಕ್ಷ್ಯ ನೀಡಿದರೆ, ಬಿಬಿಎಂಪಿ ಆಡಳಿತ ಕುಸಿದು ಬಿದ್ದಿದೆ ಎಂದು ಪರಿಗಣಿಸಬೇಕಾದೀತು. ಆಗ ಕಾನೂನು ತನ್ನ ಕೆಲಸ ಮಾಡುತ್ತದೆ. ಬಿಬಿಎಂಪಿ ಸಂವಿಧಾನಕ್ಕಿಂತಲೂ ಮೇಲಿದೆಯೇ? ಕೌನ್ಸಿಲ್‌ನಲ್ಲಿ ತೀರ್ಮಾನ ಕೈಗೊಳ್ಳಲು ವಿಳಂಬವೇಕೆ? ಬೆಂಗಳೂರಿನ ಗತ ವೈಭವ ಮರಳಬೇಕಿದೆ. ನೀವು ವಿಫಲರಾಗಿ ಪರ್ಯಾಯ ವ್ಯವಸ್ಥೆ ತರುವಂತೆ ಮಾಡಬೇಡಿ ”ಎಂದು ಹೇಳಿತು.

ಸಮಜಾಯಿಷಿ ಒಪ್ಪದ ಕೋರ್ಟ್‌: ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ನ್ಯಾಯಪೀಠಕ್ಕೆ ಸಮಜಾಯಿಷಿ ನೀಡಲು ಮುಂದಾದರೂ ನ್ಯಾಯಾಲಯ ಒಪ್ಪಲಿಲ್ಲ. ಪಾಲಿಕೆ ವಕೀಲರು ಮಧ್ಯಾಹ್ನ 2.30ರವರೆಗೆ ಕಾಲಾವಕಾಶ ಕೋರಿದರು.

5 ಸಾವಿರ ಫ್ಲೆಕ್ಸ್‌ ತೆರವು

ಮಧ್ಯಾಹ್ನ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಪಾಲಿಕೆ ಪರ ವಕೀಲರು ”ಬೆಳಿಗ್ಗೆ ಕೋರ್ಟ್‌ ಆದೇಶ ನೀಡಿದ ತಕ್ಷಣವೇ ಸಮರೋಪಾದಿಯಲ್ಲಿ ಬೆಂಗಳೂರು ನಗರದಲ್ಲಿ ಅನಧಿಕೃತ ಫ್ಲೆಕ್ಸ್‌ ತೆರವು ಕಾರ‍್ಯ ನಡೆಯುತ್ತಿದೆ. ಮಧ್ಯಾಹ್ನ ಎರಡು ಗಂಟೆ ವೇಳೆಗೆ 5ಸಾವಿರ ಫ್ಲೆಕ್ಸ್‌ ತೆರವು ಮಾಡಲಾಗಿದೆ. ಪಾಲಿಕೆ ಸಿಬ್ಬಂದಿ ನಿರಂತರವಾಗಿ ಆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಯೋಜನೆ ಸಲ್ಲಿಸಿ: ಪಾಲಿಕೆ ವಾದವನ್ನು ಆಲಿಸಿದ ಬಳಿಕ ನ್ಯಾಯಾಲಯ ಅದನ್ನು ದಾಖಲಿಸಿಕೊಂಡು ”ಬಿಬಿಎಂಪಿ ತೆರವುಗೊಳಿಸಿದ ಎಲ್ಲ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಹೋರ್ಡಿಂಗ್‌ಗಳನ್ನು ತನ್ನ ಸುಪರ್ದಿಯಲ್ಲಿಯೇ ಇಟ್ಟುಕೊಳ್ಳಬೇಕು, ತೆರವು ಕಾರ‍್ಯದ ವಿಡಿಯೋ ಮಾಡಿ ಕೋರ್ಟ್‌ಗೆ ಸಲ್ಲಿಸಬೇಕು. ಅಲ್ಲದೆ, ಮತ್ತೆ ಮುಂದಿನ ದಿನಗಳಲ್ಲಿ ಆ ಹಾವಳಿ ತಲೆ ಎತ್ತದಂತೆ ನಿಯಂತ್ರಿಸಲು ಏನು ಕ್ರಮ ಕೈಗೊಳ್ಳುವಿರಿ ಎಂಬ ಬಗ್ಗೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಿ”ಎಂದು ಆದೇಶ ನೀಡಿತು.

ಅಲ್ಲದೆ, ಫ್ಲೆಕ್ಸ್‌, ಬ್ಯಾನರ್‌ ಮುದ್ರಣ ಮಾಡುವವರ ವಿರುದ್ಧ ಕ್ರಮ ಕೈಗೊಂಡು ಆ ಬಗ್ಗೆ ಮುಂದಿನ ವಿಚಾರಣೆ ವೇಳೆ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.

ಕ್ಲೀನ್‌ ಬೆಂಗಳೂರು, ರಿಟೇನ್‌ ಗ್ಲೋರಿ

”ಕ್ಲೀನ್‌ ಬೆಂಗಳೂರು ಅಂದರೆ ಕೇವಲ ಫ್ಲೆಕ್ಸ್‌, ಬ್ಯಾನರ್‌, ಪೋಸ್ಟರ್‌ ಹಾವಳಿಯಿಂದ ಮಾತ್ರವಲ್ಲ ಎಲ್ಲ ರೀತಿಯಲ್ಲೂ ಸಹ ಶುಚಿಯಾಗಬೇಕು. ನ್ಯಾಯಾಲಯ ಇದನ್ನು ಗಮನಿಸುತ್ತದೆ. ಬೆಂಗಳೂರಿನ ಗತ ವೈಭವದ ಸೌಂದರ್ಯ ಮರಳಬೇಕು, ಅದಕ್ಕಾ ಗಿ ಪಾಲಿಕೆ ಕೆಲಸ ಮಾಡಬೇಕು” ಎಂದು ಸಿಜೆ ದಿನೇಶ್‌ ಮಹೇಶ್ವರಿ ನೇತೃತ್ವದ ನ್ಯಾಯಪೀಠ ತಾಕೀತು ಮಾಡಿತು.

Comments are closed.