ಕರಾವಳಿ

ಪ್ರತ್ಯೇಕ ಪ್ರಕರಣ: ಮೀನುಗಾರನ ಮರ್ಡರ್, ಮೂಗಿಯ ಅತ್ಯಾಚಾರ: ಆರೋಪ ಸಾಭೀತು

Pinterest LinkedIn Tumblr

ಕುಂದಾಪುರ ಖಾರ್ವಿಕೇರಿಯಲ್ಲಿ ಯುವಕನ ಮರ್ಡರ್: ನಾಲ್ವರ ವಿರುದ್ಧದ ಆರೋಪ ಸಾಭೀತು. ಆಗಸ್ಟ್ 9ಕ್ಕೆ ಶಿಕ್ಷೆ ಪ್ರಕಟ
ಕಳೆದ ನಾಲ್ಕು ವರ್ಷಗಳ ಹಿಂದೆ ಕುಂದಾಪುರದ ಖಾರ್ವಿಕೇರಿಯಲ್ಲಿ ನಡೆದ ಮೀನುಗಾರ ಪ್ರಮೋದ್ ಖಾರ್ವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಹೊರಿಸಲಾದ ಆರೋಪಗಳು ಸಾಭೀತಾಗಿದ್ದು ಅವರನ್ನು ದೋಷಿಗಳೆಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದಾರೆ.

(ಪ್ರಮೋದ್ ಖಾರ್ವಿ)

ಜೀವನ್ (34), ಹರ್ಬಟ್ ಕುಮಾರ್ ಬರೆಟ್ಟೋ (38), ಜೋಸೆಫ್ (47), ರೋಶನ್ ವಿಲ್ಪ್ರೆಡ್ ಬೆರೆಟ್ಟೋ (46) ಎನ್ನುವವರು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದು ಆಗಸ್ಟ್ 9 ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

2014 ಅಕ್ಟೋಬರ್ ತಿಂಗಳಿನಲ್ಲಿ ಇಲ್ಲಿ ಮೀನುಗಾರಿಕೆ, ಚಿಪ್ಪು ತೆಗೆಯುವ ಕಾಯಕ ಮಾಡಿಕೊಂಡಿದ್ದ ಖಾರ್ವಿಕೇರಿಯ ಮೇಲ್ ಖಾರ್ವಿಕೇರಿ ನಿವಾಸಿ ಪ್ರಮೋದ್ ಕುಮಾರ್ ಖಾರ್ವಿ ನಿಗೂಢವಾಗಿ ಸಾವನ್ನಪ್ಪಿದ್ದು ತಾನು ವಾಸಿಸುತ್ತಿದ್ದ ಸ್ಥಳದ ಸಮೀಪ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳ ಬೆನ್ನತ್ತಿದ್ದ ಈತನನ್ನು ಕೊಲೆ ಮಾಡಲಾಗಿದೆಯೆಂದು ಕುಟುಂಬದವರು ಹಾಗೂ ಸ್ಥಳೀಯರು ಆರೋಪಿಸಿದ್ದು ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣದ ಬಗ್ಗೆ ಪೊಲಿಸರು ತನಿಖೆ ನಡೆಸಿದ್ದು ಅಂದಿನ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ. ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆರೋಪಿಗಳು ಇದೇ ವೇಳೆ ಜಾಮೀನು ಪಡೆದುಕೊಂಡಿದ್ದರು. ಸುಮಾರು ೨೩ ಮಂದಿ ಸಾಕ್ಷ್ಯಾಧಾರಗಳ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದೆ.

ಕೊಲೆಯಾದ ಪ್ರಮೋದ್ ಖಾರ್ವಿ ಕೊಲೆಯಾಗುವ ವೇಳೆ ಆರೋಪಿಗಳ ಜೊತೆಯಿದ್ದಿದ್ದು ಆತನನ್ನು ಅಟ್ಟಿಸಿಕೊಂಡು ಹೋದ ಬಗ್ಗೆ ಹಾಗೂ ಹಲ್ಲೆ ನಡೆಸಿದ ಬಗ್ಗೆ ಸಾಕ್ಷಿಗಳಿತ್ತು. ಅಂತೆಯೇ ಮರಣೋತ್ತರ ಪರಿಕ್ಷೆ ವರದಿಯಲ್ಲಿಯೂ ಆತ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದರ ಬಗ್ಗೆ ದಾಖಲಾಗಿತ್ತು. ಇದೆರಡೂ ಅಂಶಗಳು ತಾಳೆಯಾದ ಕಾರಣ ಇದೊಂದು ಪೂರ್ವಯೋಜಿತ ಕೊಲೆಯೆಂಬುದು ನ್ಯಾಯಾಲಯದಲ್ಲಿ ಸಾಭೀತಾಗಿದೆ.

———————————–
ಮೂಗಿಯ ಮೇಲೆ ಬಲತ್ಕಾರ: ಅಪರಾಧಿಗೆ ಆ.3ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

ಬೈಂದೂರಿನ ಯಡ್ತರೆ ವ್ಯಾಪ್ತಿಯ ರೆಸಾರ್ಟ್ ಒಂದರಲ್ಲಿ ಕಾರ್ಮಿಕಳಾಗಿದ್ದ ಮೂಗಿ ಹಾಗೂ ಕಿವುಡಿಯಾದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಬಲತ್ಕಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ದೋಷಿಯೆಂದು ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶ ಪ್ರಕಾಶ ಖಂಡೇರಿ ಪ್ರಕಟಿಸಿದ್ದು ಆಗಸ್ಟ್ 3ಕ್ಕೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

ಸಂತ್ರಸ್ತ ಯುವತಿ ಕೆಲಸ ಮಾಡುತ್ತಿದ್ದ ರೆಸಾರ್ಟಿನಲ್ಲಿಯೇ ವಾಹನ ಚಾಲಕನಾಗಿದ್ದ ಯೋಗೀಶ್ ಅಪರಾಧಿಯಾಗಿದ್ದು ವಿಶೇಷ ಚೇತನೆಯಾದ ಈ ಯುವತಿಯನ್ನು ನಂಬಿಸಿ ಬಲತ್ಕಾರ ನಡೆಸಿದ್ದು ಬಳಿಕ ಪರಾರಿಯಾಗಿದ್ದ. ಮಗಳಿಗಾದ ಅನ್ಯಾಯದ ಕುರಿತು ಸಂತ್ರಸ್ತೆಯ ತಂದೆ ದೂರು ನೀಡಿದ್ದು ತನಿಖೆ ನಡೆಸಿದ ಅಂದಿನ ಬೈಂದೂರು ಸಿಪಿ‌ಐ ಸುದರ್ಶನ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸಂತ್ರಸ್ತೆ ಸಹಿತ ೧೩ ಮಂದಿ ಸಾಕ್ಷ್ಯಾಧಾರಗಳ ವಿಚಾರಣೆ ನಡೆದಿದ್ದು ಯೋಗೀಶ್ ವಿರುದ್ಧ ಹೊರಿಸಲಾದ ಆರೋಪಣೆಗಳು ಸಾಭೀತಾದ ಹಿನ್ನೆಲೆ ಆತ ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದೆ.

ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದಾರೆ.

Comments are closed.