ಕರಾವಳಿ

ಇಂದು ರಾತ್ರಿ ರಕ್ತವರ್ಣದ ಚಂದಿರನ ದರ್ಶನ : ಈ ಗ್ರಹಣ ಬಗ್ಗೆ ಜ್ಯೋತಿಶಾಸ್ತ್ರ ಏನು ಹೇಳುತ್ತದೆ..? ಯಾವ ಮುನ್ನೆಚ್ಚರಿಕೆ ಅಗತ್ಯ..? ಇಲ್ಲಿದೆ ವಿವರ

Pinterest LinkedIn Tumblr

ಮಂಗಳೂರು,ಜುಲೈ.27 : ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರಗ್ರಹಣ ಇಂದು ರಾತ್ರಿ ಸಂಭವಿಸಲಿದ್ದು, ವಿದ್ಯಮಾನ ವೀಕ್ಷಣೆ ಗಾಗಿ ಜನಸಾಮಾನ್ಯರು ಸೇರಿದಂತೆ ವಿಜ್ಞಾನಿಗಳು ಕೂಡಾ ಕಾತುರರಾಗಿದ್ದಾರೆ. ಯಾಕೆಂದರೆ ಇಂದು ರಾತ್ರಿಯ ರಕ್ತವರ್ಣದ ಚಂದಿರನ ದರ್ಶನ ತಪ್ಪಿಸಿಕೊಂಡರೆ, ಇನ್ನು 104 ವರ್ಷ ಕಾಯಬೇಕು. ಖಗ್ರಾಹ ಚಂದ್ರಗ್ರಹಣ ಇನ್ನು 2123ರಲ್ಲಿ ಸಂಭವಿಸಲಿದೆ.

ಇಂದು ರಾತ್ರಿ 11.43ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, 2.43ನಿಮಿಷಕ್ಕೆ ಗ್ರಹಣ ಪೂರ್ಣತೆ, ಬೆಳಗಿನ ಜಾವ 3.49ಕ್ಕೆ ಗ್ರಹಣ ಮೋಕ್ಷ ಕಾಲ. ಈ ಅತ್ಯಪರೂಪದ ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಹುದಾಗಿದೆ. ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಭಾರತವೂ ಸೇರಿದಂತೆ ಆಫ್ರಿಕಾ, ಯುರೋಪ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಬ್ಲಡ್ ಮೂನ್ ಕಾಣಿಸಲಿದೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ.

ಗ್ರಹಣದ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ನೇರವಾಗಿ ಬೀಳದೆ ಚದುರಿದಂತೆ ಬೀಳುತ್ತದೆ. ಚಂದ್ರನ ಮೇಲೆ ಬಿದ್ದ ಅಲ್ಪ ಸ್ವಲ್ಪ ಬೆಳಕು ಪರೋಕ್ಷವಾಗಿ ಭೂಮಿಗೆ ಪ್ರತಿಫಲನಗೊಳ್ಳುತ್ತದೆ. ಭೂಮಿಯ ವಾತಾವರಣದಿಂದ ಚಂದ್ರ ಕೆಂಪು ಬಣ್ಣಗಳಿಗೆ ತಿರುಗಿದಂತೆ ಗೋಚರಿಸಲಿದೆ. ಈ ರೀತಿ ರಕ್ತವರ್ಣ ಚಂದ್ರ ದರ್ಶನದ ಜೊತೆಗೆ ಶುಕ್ರವಾರ ಸುಮಾರು 15 ವರ್ಷಗಳ ಬಳಿಕ ಮಂಗಳ ಗ್ರಹವೂ ಕೂಡಾ ಭೂಮಿಯ ಅತ್ಯಂತ ಸಮೀಪಕ್ಕೆ ಬರಲಿದೆ. ಇದರಿಂದ ಮಂಗಳ ಗ್ರಹ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸಲಿದೆ.

ಗ್ರಹಣ ಬಗ್ಗೆ ಜ್ಯೋತಿಶಾಸ್ತ್ರ ಏನು ಹೇಳುತ್ತದೆ..?

ಜ್ಯೋತಿಶಾಸ್ತ್ರದ ಪ್ರಕಾರ ಚಂದ್ರನ ಮೇಲೆ ರಾಹುವಿನ ದೃಷ್ಟಿ ಬಿದ್ದಾಗ ಅದು ದೊಡ್ಡ ಮಟ್ಟದ ಚಂದ್ರದೋಷವೆಂದು ಕರೆಯಲಾಗುತ್ತದೆ. ಜನ್ಮ ಕುಂಡಲಿಯಲ್ಲಿ ಚಂದ್ರನು ಕೆಲವೊಂದು ಅಪವಿತ್ರ ಸ್ಥಾನಗಳಲ್ಲಿ ಇದ್ದರೆ ಆಗ ಚಂದ್ರದೋಷವು ಕಂಡುಬರುವುದು. ಇದರಿಂದಾಗಿ ಅತಿಯಾದ ಚಿಂತೆ ಮತ್ತು ಒತ್ತಡ ಬರುವುದು. ಇದರಿಂದ ಆದಷ್ಟು ಮಟ್ಟಿಗೆ ನೀವು ಚಂದ್ರಗ್ರಹಣ ನೋಡುವುದರಿಂದ ದೂರವಿರಿ.

ವಿವಾಹಿತರಿಗೂ ಇದರಿಂದ ದೂರವಿರಲು ಹೇಳಲಾಗುತ್ತದೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಚಂದ್ರಗ್ರಹಣ ವೀಕ್ಷಿಸಲೇಬಾರದು. ಈ ಗ್ರಹಣದ ಸಮಯದಲ್ಲಿ ಶನಿಯ ಮನೆ ಮತ್ತು ಚಂದ್ರನ ಮನೆಯಿಂದ ಪರಿಣಾಮ ಉಂಟಾಗುವುದು. ಇದರಿಂದಾಗಿ ಧನು, ಮಕರ ಮತ್ತು ವೃಶ್ಚಿಕ ರಾಶಿಯವರಿಗೆ ಈ ಮೂಲಕ ಸಾಡೇ ಸಾತಿ ಶನಿಯು ಪ್ರಾರಂಭವಾಗುವುದು.

ಇದರ ಪರಿಣಾಮವಾಗಿ ರಾಶಿಚಕ್ರಗಳು ಋಣಾತ್ಮಕ ಪರಿಣಾಮವನ್ನು ಎದುರಿಸಬೇಕಾಗುವುದು. ಆದರೆ ಇದಕ್ಕೆ ಚಿಂತಿಸಬೇಕಾಗಿಲ್ಲ ಋಣಾತ್ಮಕ ಪರಿಣಾಮಕ್ಕೆ ಒಳಗಾಗುವ ರಾಶಿಯವರು ಈಶ್ವರ ದೇವರನ್ನು ಆರಾಧಿಸಬೇಕು.

ಚಂದ್ರಗ್ರಹಣದ ದಿನ ದಾನ ಮಾಡಿದರೆ ತುಂಬಾ ಫಲಪ್ರದವಾಗಿರುವುದು. ಯಾವ ರೀತಿಯ ದಾನ ಮಾಡಬೇಕೆಂದರೆ ಚಿನ್ನದಿಂದ ಮಾಡಿದ ಸರ್ಪ, ಬೆಳ್ಳಿ ಅಥವಾ ತಾಮ್ರವನ್ನು ತಾಮ್ರದ ಪಾತ್ರೆಯಲ್ಲಿ ಹಾಕಿ ಅದರೊಟ್ಟಿಗೆ ಕಪ್ಪು ಎಳ್ಳನ್ನು ಹಾಕಿ ಕೊಟ್ಟರೆ ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಇನ್ನು ಗ್ರಹಣದ ಸಮಯವು ಸೂತಕದ ಕಾಲ ಎಂದು ಕರೆಯಲಾಗುವುದು. ಗ್ರಹಣದ ಪರಿಣಾಮವು 108 ದಿನಗಳ ಕಾಲ ಇರುತ್ತದೆ ಎನ್ನುವ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿಯೇ ಯಾವ ರಾಶಿಯವರು ಬದಲಾವಣೆಯನ್ನು ಅನುಭವಿಸಬೇಕಾಗುವುದು ಎನ್ನುವುದನ್ನು ಪರಿಶಿಲಿಸಿ.

ಚಂದ್ರ ಗ್ರಹಣವನ್ನು ಶುಭ, ಅಶುಭ ಹಾಗೂ ಮಿಶ್ರ ಫಲ ಅಂತ ವಿಂಗಡಿಸಬಹುದು.

ಅಶುಭ ಫಲ : ಮಕರ, ಕುಂಭ, ಧನು, ಮಿಥುನ

ಶುಭ ಫಲ: ಮೇಷ, ಸಿಂಹ, ವೃಶ್ಚಿಕ ಹಾಗೂ ಮೀನ

ಮಿಶ್ರ ಫಲ : ವೃಷಭ, ಕರ್ಕಾಟಕ, ಕನ್ಯಾ, ತುಲಾ

ಹನ್ನೆರಡು ರಾಶಿಗಳ ಮೇಲೆ ಚಂದ್ರ ಗ್ರಹಣದ ಫಲಾಫಲ

ಶುಭ ಹಾಗೂ ಮಿಶ್ರ ಫಲ ಕೊಡುವ ರಾಶಿಗಳ ವಿಚಾರದಲ್ಲಿ ಒಂದೆರಡು ರಾಶಿಯ ಬಗ್ಗೆ ಜ್ಯೋತಿಷಿಗಳಲ್ಲೇ ಭಿನ್ನವಾದ ಅಭಿಪ್ರಾಯ ಕೇಳಿಬರುತ್ತದೆ.

ಕೇತುಗ್ರಸ್ತ ಚಂದ್ರಗ್ರಹಣ :

ವಿಳಂಬಿ ನಾಮ ಸಂವತ್ಸರದ ಆಷಾಢ ಶುಕ್ಲ ಹುಣ್ಣಿಮೆ ಅಂದರೆ 27-07-2018ರ ಶುಕ್ರವಾರದಂದು ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರಗಳಲ್ಲಿ, ಮಕರ ರಾಶಿಯಲ್ಲಿ, ಮೇಷ, ವೃಷಭ ಮತ್ತು ಮಿಥುನ ಲಗ್ನಗಳಲ್ಲಿ, ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತದೆ.

ಗ್ರಹಣದ ಸ್ಪರ್ಶ ಕಾಲ : ರಾತ್ರಿ 11.54

ಗ್ರಹಣ ಮಧ್ಯ ಕಾಲ : ಮಧ್ಯರಾತ್ರಿ 1.52

ಗ್ರಹಣ ಮೋಕ್ಷ ಕಾಲ : ರಾತ್ರಿ 3.49

ಗ್ರಹಣವು ಭಾರತ ದೇಶದಲ್ಲಿ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ. ಆಷಾಢ ಮಾಸದ ಪೌರ್ಣಮಿಯಂದು ಚಂದ್ರ ಗ್ರಹಣ ಸಂಭವಿಸಲಿದ್ದು, ಸ್ಪರ್ಶ ಕಾಲ ರಾತ್ರಿ 11.54 ರಿಂದ ಪ್ರಾರಂಭವಾಗಿ ರಾತ್ರಿ 3.49ಕ್ಕೆ ಮೋಕ್ಷ ಕಾಲವಾಗಿರುತ್ತದೆ.

ಭೋಜನ ವಿಚಾರ :

ಸೂರ್ಯೋದಯಾದಿ ಹಗಲು 12.29 ರವರೆಗೆ ಆಹಾರ ಸೇವಿಸಬಹುದು. ಬಾಲಕರು, ವೃದ್ಧರು, ರೋಗಿಗಳು, ಅಶಕ್ತರು ಆ ದಿನ ಹಗಲು 3.38 ರವರೆಗೂ ಆಹಾರ ಸೇವಿಸಬಹುದು. ಗ್ರಹಣ ಮಧ್ಯಕಾಲಾನಂತರ ಅಂದರೆ ರಾತ್ರಿ 1.51ರ ನಂತರ ತರ್ಪಣ ನೀಡಬಹುದು. ಶ್ರಾದ್ಧ ವಿಚಾರ : 27-07-2018ರ ಶುಕ್ರವಾರ ನಡೆಸತಕ್ಕ ಆಷಾಢ ಶುಕ್ಲ ಪೌರ್ಣಮಿ ಶ್ರಾದ್ಧವನ್ನು ಮಾರನೇ ದಿನ (28-07-2018) ಶನಿವಾರ ನಡೆಸಬೇಕು.

ಉತ್ತರಾಷಾಢ, ಶ್ರವಣ ನಕ್ಷತ್ರದವರು, ಮಕರ, ಧನುಸ್ಸು ರಾಶಿಯವರು ಇಲ್ಲಿ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದುಕೊಂಡು, ಗ್ರಹಣ ಮುಗಿಯುವವರೆಗೂ ತಮ್ಮಲ್ಲಿಟ್ಟುಕೊಂಡು, ಗ್ರಹಣ ಮೋಕ್ಷಾ ನಂತರ ದಕ್ಷಿಣೆ ಸಮೇತ ದಾನ ಮಾಡತಕ್ಕದ್ದು.

ಶ್ಲೋಕ :

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ | ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 || ‌‌

ಸೂತಕ ಸಮಯ – ಅಶುಭ ಕಾಲ : ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ

ಗ್ರಹಣದ ಆಚರಣೆ ಶಾಸ್ತ್ರದ ವಚನ, ಎಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಅದು. ಅವಶ್ಯವಾಗಿ ಆಚರಣೆ ಮಾಡಲೇಬೇಕು. ಗ್ರಹಣ ಕಾಲವನ್ನು ಸೂತಕ ಸಮಯ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಆ ಸಮಯ ಬಹಳ ಅಶುಭ ಕಾಲವಾಗಿರುತ್ತದೆ.

ಗ್ರಹಣದ ಆರಂಭ ಹಾಗೂ ಅಂತ್ಯಗಳಲ್ಲಿ ಧರಿಸಿದ ಬಟ್ಟೆಯ ಸಮೇತ ಸ್ನಾನವನ್ನು ಮಾಡಲೇಬೇಕು. ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ. ‌ ‌ ಚಂದ್ರ ಗ್ರಹಣದ ಸೂತಕವು ಗ್ರಹಣ ಆರಂಭದ ಒಂಬತ್ತು ಗಂಟೆಗಳ ಮೊದಲು ಆರಂಭವಾಗುತ್ತದೆ.

ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ. ಗ್ರಹಣ ಕಾಲದಲ್ಲಿ ಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು. ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು

ಗ್ರಹಣ ಕಾಲದಲ್ಲಿ ಸಮುದ್ರ ಸ್ನಾನ ಸರ್ವೋತ್ತಮ :

ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ. ಗ್ರಹಣ ಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು ಎಂದು ಯಮನ ಆದೇಶವಿದೆ. ತೀರ ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನವನ್ನು ಮಾಡಬೇಕು. ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು.

ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆಯನ್ನು ಹಾಕಿರಬೇಕು. ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು. ‌

Comments are closed.