ಕರಾವಳಿ

ಮಂಗಳೂರಿನ ಅಕ್ರಮ ಜುಗಾರಿ ಅಡ್ಡೆಗಳು, ಡ್ಯಾನ್ಸ್ ಬಾರ್,ಮಸಾಜ್ ಪಾರ್ಲರ್‌ಗಳ ವಿರುದ್ಧ ಕ್ರಮಕ್ಕೆ ಡಿವೈಎಫ್‌ಐ ಆಗ್ರಹ

Pinterest LinkedIn Tumblr

ಮಂಗಳೂರು, ಜುಲೈ.14: ನಗರದ ಹಲವು ಕಡೆ ನಡೆಯುತ್ತಿರುವ ಜೂಜಾಟ, ಜುಗಾರಿ ಅಡ್ಡೆಗಳು, ಡ್ಯಾನ್ಸ್ ಬಾರ್ ಹಾಗೂ ಮಸಾಜ್ ಪಾರ್ಲರ್‌ಗಳ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ.

ಈ ಅಕ್ರಮ ಅಡ್ಡೆಗಳು ನಗರದಲ್ಲಿ ಮತ್ತೆ ಕಾರ್ಯಾಚರಿಸಲು ಆರಂಭಿಸಿವೆ. ರಿಕ್ರಿಯೇಶನ್ ಕ್ಲಬ್‌ಗಳ ಹೆಸರಿನಲ್ಲಿ ಅನುಮತಿಯನ್ನು ಪಡೆದು ಸ್ಕಿಲ್‌ಗೇಮ್, ವೀಡಿಯೋ ಗೇಮ್ ಕೇಂದ್ರಗಳು, ಜುಗಾರಿ ಅಡ್ಡೆಗಳನ್ನು ರಾಜಾರೋಷವಾಗಿ ನಡೆಸುತ್ತಿವೆ. ಇವುಗಳ ಹಾವಳಿಯಿಂದಾಗಿ ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಅನೇಕ ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿವೆ.

ಕೂಲಿಕಾರರು, ಅಟೋಚಾಲಕರು ಹಾಗೂ ಸಣ್ಣ ಪುಟ್ಚ ವ್ಯಾಪಾರಿಗಳನ್ನೇ ಗುರಿಯಾಗಿಸಿ ಅವರ ದುಡಿಮೆಯ ಹಣವನ್ನು ಪೂರ್ಣವಾಗಿ ಕಿತ್ತುಕೊಳ್ಳುವ ಇಂಥ ಜೂಜುಗಳಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಿದ್ದಿದೆ. ಮಾತ್ರವಲ್ಲದೆ ಕಾಲೇಜು ವಿದ್ಯಾರ್ಥಿಗಳೂ ಜೂಜಾಟದ ಚಟಕ್ಕೆ ಬಲಿಯಾಗುವ ಸಾಧ್ಯತೆ ಇದೆ.

ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಇಂಥ ಜೂಜು ಕೇಂದ್ರಗಳನ್ನು ಮುಚ್ಚಲಾಗಿತ್ತು. ಆದರೆ ಇದೀಗ ಮತ್ತೆ ತಲೆ ಎತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಮಾಫಿಯಾದವರ ಹೊಂದಾಣಿಕೆಯಿಂದಾಗಿ ಇಂತಹ ಜೂಜು ಕೇಂದ್ರಗಳು ಬೆಳೆಯಲು ಕಾರಣವಾಗಿದೆ.

ಕೆಲವು ಪೊಲೀಸರು ನೇರವಾಗಿ ಮಾಫಿಯಾದೊಂದಿಗೆ ನೇರ ಶಾಮೀಲಾಗಿದ್ದಾರೆ. ಇದರಿಂದ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚು ಅಪಾಯವಿದ್ದು, ಶಾಂತಿ ಸೌಹಾರ್ದಕ್ಕೂ ಧಕ್ಕೆಯಾಗಬಹುದು.

ಆ ಹಿನ್ನೆಲೆಯಲ್ಲಿ ಇವುಗಳ ವಿರುದ್ಧ ಕಾರ್ಯಾಚರಣೆ ನಡೆಸಬೇಕು ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ರಫೀಕ್ ಹರೇಕಳ, ನಿತಿನ್ ಕುತ್ತಾರ್, ಅಮಲ್ ಅವರನ್ನೊಳಗೊಂಡ ನಿಯೋಗ ಒತ್ತಾಯಿಸಿದೆ.

Comments are closed.