ಕರಾವಳಿ

ರಕ್ತದಾನ ಶ್ರೇಷ್ಠ ದಾನ – ರಕ್ತದಾನ ಮಾಡಿದಾಗ ಸಿಗುವ ಆನಂದ ಬೇರೆ ಯಾವ ದಾನದಲ್ಲೂ ಸಿಗುವುದಿಲ್ಲ :ರಕ್ತದಾನ ಮಾಡಿ ನ್ಯಾಯಾಧೀಶ ಕೆ.ಎಸ್.ಬೀಳಗಿ

Pinterest LinkedIn Tumblr

ಮ0ಗಳೂರು ಜುಲೈ. 3 ರಕ್ತದಾನ ಮಹಾದಾನ; ರಕ್ತದಾನದಿಂದ ಇನ್ನೊಬ್ಬರಿಗೆ ಜೀವದಾನ ನೀಡುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಪೂರಕ ಎಂದು ಜಿಲ್ಲಾ ಕಾನೂನು ಪ್ರಾಧಿಕಾರ, ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್.ಬೀಳಗಿ ಹೇಳಿದರು.

ಅವರು ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಆರೋಗ್ಯ ಇಲಾಖೆ, ಮಂಗಳೂರು ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ರಕ್ತದಾನ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಇವರು ಪ್ರಾಸ್ತಾವಿಕದಲ್ಲಿ ಎಲ್ಲರಿಗೂ ರಕ್ತದ ಅವಶ್ಯಕತೆ ಇದೆ. ಇತ್ತೀಚೆಗೆ ರಕ್ತದಾನದ ಬಗ್ಗೆ ನಮ್ಮ ಸಮಾಜದಲ್ಲಿ ಜಾಗೃತಿ ಮೂಡಿದ್ದು, ಕೆಲವು ಸಂದರ್ಭಗಳಲ್ಲಿ ಮಾಹಿತಿ ಕೊರತೆಯಿಂದ ಅಮಾಯಕರಿಗೆ ತೊಂದರೆಯಾಗುತ್ತಿದೆ. ಜಗತ್ತಿನಲ್ಲಿ 12 ಮಿಲಿಯನ್ ರಕ್ತದ ಅವಶ್ಯಕತೆ ಇದ್ದರೂ, ವಿವಿಧ ರಕ್ತ ಬ್ಯಾಂಕ್‍ಗಳಲ್ಲಿ 9 ಮಿಲಿಯನ್ ರಕ್ತ ಮಾತ್ರ ಸಿಗುತ್ತಿದೆ. ಅದ್ದರಿಂದ ಯುವಕರಲ್ಲಿ ಇನ್ನಷ್ಟು ಜಾಗೃತಿ ಮೂಡಿಸ ಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ರಕ್ತದಾನ ಮಾಡಿದಾಗ ಸಿಗುವ ಆನಂದ ಬೇರೆ ಯಾವ ದಾನದಲ್ಲೂ ಸಿಗುವುದಿಲ್ಲ. 18 ರಿಂದ 60 ವರ್ಷದವರೆಗಿನ ಆರೋಗ್ಯಪೂರ್ಣ ವ್ಯಕ್ತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು, ರಕ್ತದಾನದಿಂದ ಹೊಸ ಹೊಸ ರಕ್ತಕಣ ಉತ್ಪತ್ತಿಯಾಗುತ್ತದೆ. ಎಂದರು.

ವೆನ್‍ಲಾಕ್ ರಕ್ತ ವರ್ಗೀಕರಣ ವಿಭಾಗದ ಡಾ. ಶರತ್ ಮಾತನಾಡಿ, ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯವಾಗಿದ್ದು, ನಾವು ನೀಡುವ 350 ಎಂ ಎಲ್ ರಕ್ತವನ್ನು ವಿಂಗಡಿಸಿ 3 ಜೀವಗಳಿಗೆ ಜೀವದಾನ ಮಾಡಬಹುದಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ರಕ್ತ ವರ್ಗೀಕರಣ ವಿಭಾಗ ಕಾರ್ಯವೆಸಗುತ್ತಿದ್ದು, ಎ, ಬಿ, ಎಬಿ, ಹಾಗೂ ಓ ಎಂದು ವಿಂಗಡಿಸಲಾಗಿದೆ.

ರಕ್ತದಲ್ಲಿ ಕೊಬ್ಬು ಇರುವ ರಕ್ತವನ್ನು ಎ, ಎಂದು ಸ್ವಲ್ಪ ಕಡಿಮೆ ಕೊಬ್ಬಿರುವ ರಕ್ತವನ್ನು ಬಿ, ಎಬಿ ಎಂದು ಹಾಗೂ ಕೊಬ್ಬಿಲ್ಲದ ರಕ್ತವನ್ನು ಓ ಎಂದು ವಿಂಗಡಿಸಲಾಗುತ್ತಿದೆ. ಈ ರಕ್ತವನ್ನು ವಿವಿಧ ರೋಗಿಗಳಿಗೆ ಔಷಧಿಯ ರೂಪದಲ್ಲಿ ನೀಡಲಾಗುತ್ತಿದೆ. ಅದ್ದರಿಂದ ಎಲ್ಲಾ ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದರು.

ಕಾರ್ಯಕ್ರಮದ ಅಧಕ್ಷತೆಯನ್ನು ಮಂಗಳೂರು ವಕೀಲರ ಸಂಘದ ಅಧ್ಯಕ ಎಂ.ಆರ್ ಬಳ್ಳಾಲ್ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ, ರಾಜೇಶ್, ಡಾ. ರತ್ನಾಕರ್, ಹಾಗೂ ನ್ಯಾಯಾಲಯದ ಎಲ್ಲಾ ವಿಭಾಗಗಳ 216 ಸಿಬ್ಬಂದಿಗಳು ಉಪಸ್ಥಿತರಿದ್ದು, ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ದಿನಕರ ಶೆಟ್ಟಿ ವಂದಿಸಿದರು. ನ್ಯಾಯಾಲಯದ ಸಿಬ್ಬಂದಿ ಭೀಮರಾಯಪ್ಪ ಕಾರ್ಯಕ್ರಮ ನಿರೂಪಿಸಿದರು.

Comments are closed.