ಕರಾವಳಿ

ಮಂಗಳೂರು : ಅಡ್ಯಾರ್ ಕಣ್ಣೂರು ಬಳಿ ಭೀಕರ ಅಪಘಾತ : ಓರ್ವ ಮೃತ್ಯು – ಮೂವರು ಗಂಭೀರ

Pinterest LinkedIn Tumblr

ಮಂಗಳೂರು, ಜೂನ್ 27: ಪಾರ್ಕ್ ಮಾಡಲಾಗಿದ್ದ ಕಾರಿಗೆ ಮತ್ತೊಂದು ಕಾರು ಢಿಕ್ಕಿ ಹೊಡೆದು ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟು ಇತರ ಮೂವರು ಗಾಯಗೊಂಡ ಘಟನೆ ನಗರ ಹೊರವಲಯದ ಅಡ್ಯಾರ್ ಕಣ್ಣೂರು ಮಸೀದಿಯ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಮುಹಮ್ಮದ್ ಫಾರೂಕ್

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಅಡ್ಯಾರ್ ನಿವಾಸಿ ಮುಹಮ್ಮದ್ ಫಾರೂಕ್ (30) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹನೀಫ್, ಜುನೈದ್, ಸರ್ಫ್‍ರಾಜ್ ಎಂಬವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ರಾತ್ರಿ ಸುಮಾರು 1 ಗಂಟೆ ವೇಳೆಗೆ ಮಳೆ ಸುರಿಯುತ್ತಿದ್ದ ಕಾರಣ ದ್ವಿಚಕ್ರ ಸವಾರನೊಬ್ಬ ಮಸೀದಿ ಬಳಿ ನಿಂತಿದ್ದ ಪರಿಚಯದ ಕಾರಲ್ಲಿ ಹೋಗಿ ಕುಳಿತು ಕಾರೊಳಗಿದ್ದ ಇತರ ಇಬ್ಬರು ಯುವಕರೊಂದಿಗೆ ಮಾತಾಡುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಈ ಕಾರಿಗೆ ಹಾಗೂ ಅಲ್ಲೆ ನಿಂತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ವೇಳೆ ಕಾರಿನಲ್ಲಿದ್ದ ಮುಹಮ್ಮದ್ ಫಾರೂಕ್ ಮೃತಪಟ್ಟರೆ, ಜುನೈದ್, ಹನೀಫ್, ಸರ್ಫ್‍ರಾಜ್ ಎಂಬವರು ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಕಾರು ಮಸೀದಿಯ ಆವರಣದೊಳಗೆ ನಿಂತಿದ್ದ ರಿಕ್ಷಾದ ಮೇಲೆ ಅಪ್ಪಳಿಸಿದೆ.

ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಮಂಗಳೂರು ಸಂಚಾರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments are closed.