ಕರಾವಳಿ

ತುಳು ಚಿತ್ರರಂಗ ಗಿನ್ನೆಸ್ ದಾಖಲೆಗೆ ಸಿದ್ಧತೆ : ಕಡಂದಲೆ ಸುರೇಶ್ ಭಂಡಾರಿಯವರಿಂದ 17 ಗಂಟೆಗಳಲ್ಲಿ 10 ನಿರ್ದೇಶಕರಿಂದ ತುಳು ಚಿತ್ರ ನಿರ್ಮಾಣ

Pinterest LinkedIn Tumblr

ಮಂಗಳೂರು, ಜೂನ್.23: ನಾಗೇಶ್ವರ ಸಿನಿ ಕಂಬೈನ್ಸ್ ಸಂಸ್ಥೆಯ ಮೂಲಕ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ ಅವರ ನೇತೃತ್ವದಲ್ಲಿ 17 ಗಂಟೆಗಳಲ್ಲಿ 10 ನಿರ್ದೇಶಕರ ಮೂಲಕ ಚಲನಚಿತ್ರವೊಂದರ ಚಿತ್ರೀಕರಣವೊಂದಕ್ಕೆ ತಯಾರಿ ನಡೆಸಲಾಗಿದೆ. ಈ ಮೂಲಕ ತುಳು ಸಿನೆಮಾ ರಂಗವು ಇದೀಗ ಗಿನ್ನೆಸ್ ದಾಖಲೆ ನಿರ್ಮಿಸಲು ಹೊರಟಿದೆ.

ತುಳು ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟ,ನಟಿಯ ಜೊತೆಗೆ ಶನಿವಾರ ನಗರದ ಹೋಟೆಲೊಂದರಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ ಹಾಗೂ ನಟ ಸೌರಭ್ ಭಂಡಾರಿ ಅವರು ಚಿತ್ರದ ಕುರಿತು ಮಾಹಿತಿ ನೀಡಿದರು. ನಾಗೇಶ್ವರ ಸಿನಿ ಕಂಬೈನ್ಸ್ ಸಂಸ್ಥೆಯಿಂದ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ ನೇತೃತ್ವದಲ್ಲಿ ನಿರ್ಮಾಣವಾಗಲಿರುವ ಈ ಚಿತ್ರ ತುಳುವಿನ ಪ್ರಥಮ ಮಲ್ಟಿಸ್ಟಾರ್ ಚಿತ್ರವಾಗಲಿದೆ. ಚಿತ್ರಕ್ಕೆ 10ಕ್ಕೂ ಅಧಿಕ ಕ್ಯಾಮರಾಗಳು ಬಳಕೆಯಾಗಲಿದ್ದು, ಏಕಕಾಲದಲ್ಲಿ 10 ಲೊಕೇಶನ್‌ಗಳಲ್ಲಿ ಚಿತ್ರ ಗರಿಷ್ಠ 17 ಗಂಟೆಯೊಳಗೆ ಚಿತ್ರೀಕರಣ ನಡೆಸಲಿದೆ ಎಂದು ಹೇಳಿದರು.

ಚಿತ್ರದ ನಾಮಕರಣವನ್ನು ಇನ್ನಷ್ಟೇ ಘೋಷಿಸಬೇಕಿದ್ದು, ಚಿತ್ರದಲ್ಲಿ 10 ನಾಯಕ ನಟರು ಅಭಿನಯಿಸಲಿದ್ದಾರೆ. ವಿಶೇಷವೆಂದರೆ ತುಳು ಚಿತ್ರರಂಗ ಕ್ಷೇತ್ರದ ದಿಗ್ಗಜರು, ನಟರ ನಡುವೆ, ಚಿತ್ರದಲ್ಲಿ ತುಮಿಳಿನ ಖ್ಯಾತ ಖಳನಾಯಕ ಪಾತ್ರಧಾರಿ ಪುಲಿಕುಟ್ಟಿ ಚಿತ್ರ ಖ್ಯಾತಿಯ ರಾಜಸಿಂಹ ಖಳನಾಯಕನಾಗಿ ನಟಿಸಲಿದ್ದಾರೆ ಎಂದು ನಟ ಸೌರಭ್ ಭಂಡಾರಿ ತಿಳಿಸಿದರು.

ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಂಕಲನ ಹರೀಶ್ ಕೊಟ್ಪಾಡಿಯವರದ್ದಾಗಿದ್ದು, ಖ್ಯಾತ ನಿರ್ದೇಶಕರಾದ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ದೇವದಾಸ್ ಕಾಪಿಕಾಡ್, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ನಿರ್ದೇಶಕರಾದ ಮಯೂರ್ ಶೆಟ್ಟಿ, ರಂಜಿತ್ ಸುವರ್ಣ, ರಾಜ್ ಕಮಲ್, ರಿತೇಶ್ ಬಂಗೇರ, ರಘು ಶೆಟ್ಟಿ ಮುಂತಾದವರು ಚಿತ್ರವನ್ನು ನಿರ್ದೇಶಲಿದ್ದಾರೆ. ಈ ಚಿತ್ರದಲ್ಲಿ ತುಳುನಾಡ ಚಕ್ರವರ್ತಿ ಅರ್ಜುನ್ ಕಾಪಿಕಾಡ್, ತೌಳಭ ಸ್ಟಾರ್ ಸೌರಭ್ ಭಂಡಾರಿ, ರಾಕಿಂಗ್ ಸ್ಟಾರ್ ರೂಪೇಶ್ ಶೆಟ್ಟಿ, ಪೃಥ್ವಿ ಅಂಬರ್, ಅಸ್ತಿಕ್ ಶೆಟ್ಟಿ ನಾಯಕ ನಟರಾಗಿ ಅಭಿನಯಿಸಲಿದ್ದಾರೆ. ಜೊತೆಗೆ ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟರು ಸಮಾಗಮದೊಂದಿಗೆ ಚಿತ್ರ ಮೂಡಿ ಬರಲಿದೆ.

ಉಳಿದ ನಿರ್ದೇಶಕರು ಹಾಗೂ ನಾಯಕ ನಟರ ಜತೆ ಮಾತುಕತೆ ನಡೆಯುತ್ತಿದ್ದು, ನಟಿಯಾಗಿ ಸದ್ಯ ಪೂಜಾ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಇತರ ನಾಯಕಿಯರನ್ನು ಸನ್ನಿವೇಶಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಕಡಂದಲೆ ಸುರೇಶ್ ಭಂಡಾರಿ ತಿಳಿಸಿದರು.

ಖ್ಯಾತ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ, ಕನ್ನಡದಲ್ಲಿ ಈಗಾಗಲೇ 18 ಗಂಟೆಗಳಲ್ಲಿ ಚಿತ್ರವೊಂದು ಚಿತ್ರೀಕರಣಗೊಂಡ ದಾಖಲೆಯಿದೆ. ಇದೀಗ ತುಳುವಿನಲ್ಲಿ 17 ಗಂಟೆಗಳಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ವಿಚಾರ. ಸೆಪ್ಟಂಬರ್ 8 ಎಂಬ ಚಿತ್ರವನ್ನು 24 ಗಂಟೆಗಳಲ್ಲಿ ನಿರ್ಮಿಸಲಾಗಿತ್ತು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತುಳು ಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ, ನಿರ್ದೇಶಕ ರಾಜೇಶ್ ಬ್ರಹ್ಮಾವರ್, ನಟ ಅರ್ಜುನ್ ಕಾಪಿಕಾಡ್, ನಟಿ ಪೂಜಾ ಶೆಟ್ಟಿ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದ ಹರೀಶ್ ಕೊಟ್ಪಾಡಿ, ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ, ಪಮ್ಮಿ ಕೊಡಿಯಾಲ್‌ಬೈಲ್ ಹಾಗೂ ನಿರ್ದೇಶಕರಾದ ರಾಜ್ ಕಮಲ್, ಮಯೂರ್ ಶೆಟ್ಟಿ, ರಂಜಿತ್ ಸುವರ್ಣ, ರಿತೇಶ್ ಬಂಗೇರ, ರಘು ಶೆಟ್ಟಿ, ನಟ ಚೇತನ್ ರೈ ಮಾಣಿ ಹಾಗೂ ತುಮಿಳಿನ ಖ್ಯಾತ ಖಳನಾಯಕ ಪಾತ್ರಧಾರಿ ಪುಲಿಕುಟ್ಟಿ ಚಿತ್ರ ಖ್ಯಾತಿಯ ರಾಜಸಿಂಹ ಉಪಸ್ಥಿತರಿದ್ದರು.

__ಸತೀಶ್ ಕಾಪಿಕಾಡ್ ಮೊಬೈಲ್ ಸಂಖ್ಯೆ : 9035089084

Comments are closed.