ಮುಂಬೈ

ಇಂದಿನಿಂದ ಮಹಾರಾಷ್ಟ್ರದಲ್ಲಿ ರಾಜ್ಯಾದ್ಯಂತ ಪ್ಲಾಸ್ಟಿಕ್‌ ನಿಷೇಧ

Pinterest LinkedIn Tumblr


ಮುಂಬಯಿ: ನಾನಾ ಸವಾಲುಗಳ ಮಧ್ಯೆಯೇ ಮಹಾರಾಷ್ಟ್ರ ಸರಕಾರವು ರಾಜ್ಯಾದ್ಯಂತ ಪ್ಲಾಸ್ಟಿಕ್‌ ನಿಷೇಧ ಜಾರಿಗೊಳಿಸಿದೆ. ಒಂದು ತುಣುಕು ಪ್ಲಾಸ್ಟಿಕ್‌ ಮತ್ತು ಥರ್ಮೊಕೋಲ್‌ ಬಳಸದಂತೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವುದಾಗಿ ಸರಕಾರ ಪ್ರಕಟಿಸಿದೆ.

ಪ್ಲಾಸ್ಟಿಕ್‌ ನಿಷೇಧ ಜಾರಿಗೊಳಿಸಿರುವ ಸರಕಾರವು ಸಾಮೂಹಿಕವಾಗಿ ಬಳಸಬಹುದಾದ ಅಗ್ಗದ ಮತ್ತು ಕಾರ್ಯಸಾಧುವಾದ ಪರ್ಯಾಯವನ್ನು ಇನ್ನೂ ಒದಗಿಸಿಲ್ಲ.

ಪ್ಲಾಸ್ಟಿಕ್‌ ಇಲ್ಲವೇ ಥರ್ಮೊಕೋಲ್‌ ಬಳಸುವುದು ಪತ್ತೆಯಾದಲ್ಲಿ 5,000 ದಿಂದ 25,000 ರೂ. ವರೆಗೂ ದಂಡ ವಿಧಿಸಲಾಗುವುದು. ಸರಕಾರದ ಈ ನಿರ್ಧಾರ ಯಶಸ್ಸು ಕಾಣಬೇಕಾದರೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಹೇಳಿದ್ದಾರೆ.

ಪ್ಲಾಸ್ಟಿಕ್‌ ನಿಷೇಧದಿಂದ ಮಾಲಿನ್ಯವನ್ನು ನಿಯಂತ್ರಿಸಬಹುದು. ಆದರೆ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ದೊರೆಯುವವರೆಗೆ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್‌ ಮಾರಾಟಕ್ಕೆ ಅಡ್ಡಿಯಾಗದು ಎಂದೂ ಹೇಳಲಾಗುತ್ತಿದೆ. ನಮಗೆ ವ್ಯಾಪಾರಿಗಳ ಬಗ್ಗೆಯೂ ಕಾಳಜಿ ಇದೆ. ಹೀಗಾಗಿ ಪೊಲೀಸ್‌ ರಾಜ್‌ ವ್ಯವಸ್ಥೆ ಜಾರಿಗೊಳಿಸುತ್ತಿಲ್ಲ. ಯೋಜನೆಯ ಯಶಸ್ಸಿಗೆ ವ್ಯಾಪಾರಿಗಳು ಸೇರಿದಂತೆ ಎಲ್ಲರ ಸಹಭಾಗಿತ್ವ ಬೇಕು ಎಂದು ಫಢ್ನವಿಸ್‌ ತಿಳಿಸಿದ್ದಾರೆ.

ಪ್ಲಾಸ್ಟಿಕ್‌ ನಿಷೇಧ ರಾತೋರಾತ್ರಿ ಜಾರಿಗೊಳಿಸಿಲ್ಲ, ಜನರಿಗೆ ಸಾಕಷ್ಟು ಕಾಲಾವಕಾಶ ನೀಡಿದ್ದೆವು. ಮಹಾರಾಷ್ಟ್ರ ಮಾತ್ರವಲ್ಲ, ಇಡೀ ಜಗತ್ತಿಗೆ ಸಂಬಂಧಿಸಿದ ಪಿಡುಗು ಪ್ಲಾಸ್ಟಿಕ್‌ ಎಂದು ಪರಿಸರ ಸಚಿವ ರಾಮ್‌ದಾಸ್‌ ಕದಂ ಹೇಳಿದ್ದಾರೆ.

ಜನರಿಗೆ ಈ ನಿಷೇಧದಿಂದ ಸದ್ಯಕ್ಕೆ ತೊಂದರೆಯಾಗಲಿದೆ. ಈ ನಿರ್ಧಾರದಿಂದ ನಮ್ಮ ಭವಿಷ್ಯದ ಪೀಳಿಗೆಗೆ ಒಳಿತಾಗಲಿದೆ. ಪ್ಲಾಸ್ಟಿಕ್‌ ನಿಷೇಧದ ನಿರ್ಧಾರ ಇಡೀ ಜಗತ್ತಿಗೆ ಮಾದರಿಯಾಗಲಿದೆ ಎಂದು ಯುವಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ ಹೇಳಿದ್ದಾರೆ.

ಕಳೆದ ವರ್ಷ ಭಾರಿ ಮಳೆ ಸುರಿದಾಗ ಪ್ಲಾಸ್ಟಿಕ್‌ ಮತ್ತು ಥರ್ಮೊಕೋಲ್‌ ತುಂಬಿದ್ದ ಕಾರಣದಿಂದ ಚರಂಡಿಗಳಲ್ಲಿ ನೀರು ಹರಿದು ಹೋಗದೆ ಬಹಳಷ್ಟು ಸಮಸ್ಯೆ ಸೃಷ್ಟಿಯಾಗಿತ್ತು. ಅಲ್ಲಿಂದ ಪ್ಲಾಸ್ಟಿಕ್‌ ನಿಷೇಧ ಜಾರಿಗೆ ಸಂಬಂಧಿಸಿದಂತೆ ಕೆಲಸ ಆರಂಭಿಸಿದ್ದಾಗಿ ಅವರು ಹೇಳಿದರು.

Comments are closed.