ಅಂತರಾಷ್ಟ್ರೀಯ

ಪಾಕ್ ಗುರುದ್ವಾರಕ್ಕೆ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾಗೆ ಪ್ರವೇಶವಿಲ್ಲ!

Pinterest LinkedIn Tumblr


ಇಸ್ಲಮಾಬಾದ್: ಪಾಕಿಸ್ತಾನದ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾಗೆ ಅಲ್ಲಿನ ಗುರುದ್ವಾರಾವೊಂದಕ್ಕೆ ಭೇಟಿ ನೀಡಲು ಅವಕಾಶ ನಿರಾಕರಿಸಲಾಗಿದೆ. ರಾವಲ್ಪಿಂಡಿ ಬಳಿಯ ಹಸನ್ ಅಬ್ದಲ್‌ನಲ್ಲಿರುವ ಗುರುದ್ವಾರ ಪಂಜಾ ಸಾಹಿಬ್‌ಗೆ ಭೇಟಿ ನೀಡಲು ಮುಂಚಿತವಾಗಿಯೇ ಅನುಮತಿ ಪಡೆದುಕೊಂಡಿದ್ದರೂ ಸಹ ನಿರಾಕರಿಸಲಾಗಿದೆ ಎಂದು ಭಾರತದ ಅಧಿಕಾರಿಗಳು ಪಾಕ್ ವಿರುದ್ಧ ಆರೋಪಿಸಿದ್ದಾರೆ.

ಭಾರತದ ಹೈ ಕಮೀಷನರ್ ಅಜಯ್ ಬಿಸಾರಿಯಾ ಜತೆಗೆ ಅವರ ಪತ್ನಿ ಸಹ ಗುರುದ್ವಾರಕ್ಕೆ ತೆರಳಿದ್ದರು. ಆದರೆ, ಅನುಮತಿ ನಿರಾಕರಿಸಿದ ಕಾರಣ ಅವರಿಬ್ಬರೂ ಇಸ್ಲಮಾಬಾದ್‌ಗೆ ಮರಳಬೇಕಾಯಿತು ಎಂದು ಭಾರತದ ಅಧಿಕಾರಿಗಳು ಹೇಳಿದ್ದು, ಈ ವಿಚಾರವನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಜತೆಗೆ ಪ್ರಸ್ತಾಪಿಸಿದ್ದಾರೆ. ರಾಯಭಾರಿಗಳ ರಕ್ಷಣೆ ಸೇರಿ ಹಲವು ವಿಚಾರಗಳ ಬಗ್ಗೆ ಮಾರ್ಚ್‌ನಲ್ಲಿ ಎರಡೂ ರಾಷ್ಟ್ರಗಳೊಂದಿಗೆ ಮಾತುಕತೆ ನಡೆದಿತ್ತು. ಆದರೆ, ದಿಲ್ಲಿ ಹಾಗೂ ಇಸ್ಲಮಾಬಾದ್‌ ಸೇರಿ ಎರಡೂ ಕಡೆ ಅಧಿಕಾರಿಗಳಿಗೆ ಕಿರುಕುಳ ಮುಂದುವರಿದಿದೆ. ಇನ್ನು, ರಾಯಭಾರಿ ಬಿಸಾರಿಯಾ ಗುರುದ್ವಾರದಲ್ಲಿ ಸಿಖ್ ಯಾತ್ರಿಕರ ಜತೆಯಲ್ಲೂ ಮಾತುಕತೆ ನಡೆಸಬೇಕಿತ್ತು.

ಪಂಜಾ ಸಾಹಿಬ್ ಗುರು ನಾನಕ್ ಭಕ್ತರ ಪ್ರಮುಖ ತೀರ್ಥಯಾತ್ರೆ ಸ್ಥಳವಾಗಿದ್ದು, ಆದರೆ ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ಅಜಯ್ ಬಿಸಾರಿಯಾಗೆ ಅಲ್ಲಿಗೆ ಭೇಟಿ ನೀಡಲು ಪ್ರವೇಶ ನಿರಾಕರಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ಅವರ ಜತೆಗೆ ಭೇಟಿ ನೀಡಿದ್ದ ಭಾರತದ ಅಧಿಕಾರಿಗಳು ಹಾಗೂ ಭಕ್ತರಿಗೂ ಸಹ ಗುರುದ್ವಾರಕ್ಕೆ ತೆರಳಲು ಅನುಮತಿ ನೀಡಿರಲಿಲ್ಲ. ಇನ್ನು, ಭಾರತದ ರಾಯಭಾರಿ ಅಧಿಕಾರಿಗಳನ್ನು ಭೇಟಿ ಮಾಡಲು ಅವಕಾಶ ನೀಡದ ಪಾಕಿಸ್ತಾನ ಸರಕಾರವನ್ನು ಕೇಂದ್ರ ಸರಕಾರ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಭಾರತದ ಹಲವು ಸಿಖ್ಖರು ಹಲವು ಧಾರ್ಮಿಕ ಕಾರ್ಯಕ್ರಮ, ಹಬ್ಬಗಳನ್ನು ಆಚರಿಸಲು ಪ್ರತಿ ವರ್ಷ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಲಾಹೋರ್‌ನಲ್ಲಿರುವ ಗುರುದ್ವಾರ ದೇರಾ ಸಾಹಿಬ್‌ಗೆ ಜೂನ್ 21ರಿಂದ 30ರವರೆಗೆ ಭೇಟಿ ನೀಡಲು 300ಕ್ಕೂ ಅಧಿಕ ಭಾರತೀಯ ಸಿಖ್ಖರಿಗೆ ವೀಸಾ ನೀಡಲಾಗಿದೆ. ಮಹಾರಾಜ ರಂಜಿತ್ ಸಿಂಗ್‌ರ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಲು ವೀಸಾ ನೀಡಲಾಗಿದೆ ಎಂದು ಪಾಕ್ ಸರಕಾರ ತಿಳಿಸಿದೆ.

Comments are closed.