ಕರಾವಳಿ

ಮಂಗಳೂರಿನಲ್ಲಿ ಬೃಹತ್ ವೇಶ್ಯಾವಾಟಿಕೆ ಜಾಲ ಪತ್ತೆ : ಹಲವರ ಸೆರೆ : ಬಾಂಗ್ಲಾ ಮೂಲದ 6 ಯುವತಿಯರ ರಕ್ಷಣೆ

Pinterest LinkedIn Tumblr

ಮಂಗಳೂರು, ಜೂನ್.22: ಮಂಗಳೂರು ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯೊಂದರಲ್ಲಿ ನಗರದಲ್ಲಿ ನಡೆಯುತ್ತಿದ್ದ ಬೃಹತ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿ ಬಾಂಗ್ಲಾ ಮೂಲದ ಆರು ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ. ಪಂಪ್‌ವೆಲ್‌ನಲ್ಲಿರುವ ಲಾಡ್ಜ್‌ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಮಂಗಳೂರಿನ ಪಂಪ್‌ವೆಲ್‌ ವೃತ್ತದ ಸಮೀಪವಿರುವ ಹೊಟೇಲ್ ಅನ್ನಪೂರ್ಣ ಲಾಡ್ಜ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಇಂದು ಬೆಳಗ್ಗೆ ದಾಳಿ ನಡೆಸಿರುವ ಪೊಲೀಸರು ವೇಶ್ಯಾವಾಟಿಕೆ ದಂಧೆಯಲ್ಲಿ ನಿರತ ಆರೋಪದಲ್ಲಿ 15ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ ಅನೈತಿಕ ವ್ಯವಹಾರಕ್ಕೆ ಬಳಸಲು ಕರೆತಂದಿದ್ದ ಬಾಂಗ್ಲಾ ಮೂಲದ ಆರು ಮಂದಿ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಮೈಸೂರು ಒಡನಾಡಿ ಸಂಘ ಹಾಗೂ ಚೈಲ್ಡ್ ಲೈನ್ ಸಂಸ್ಥೆ ನೀಡಿದ ಮಾಹಿತಿಯನ್ನಾಧರಿಸಿ ಈ ದಾಳಿ ನಡೆಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ನಿವಾಸಿ ಪವನ್(26) ಎಂಬಾತ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಶಿವರಾಮ ಪೂಜಾರಿ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಹೋಟೆಲ್‌ನ 3ನೇ ಮಹಡಿಯ ರಹಸ್ಯ ಕೊಠಡಿಯಲ್ಲಿ ಯುವತಿಯರನ್ನು ಕೂಡಿ ಹಾಕಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತೆನ್ನಲಾಗಿದೆ. ಇಂದು ಪೊಲೀಸರು ದಾಳಿ ನಡೆಸಿದ ವೇಳೆ ಆರು ಯುವತಿಯರು ಈ ಕೊಠಡಿಯಲ್ಲಿ ಪತ್ತೆಯಾಗಿದ್ದಾರೆ. ನಾಲ್ವರು ಅಪ್ರಾಪ್ತ ವಯಸ್ಸಿನ ಯುವತಿಯರು ಪರಾರಿಯಾಗಿದ್ದರೆನ್ನಲಾಗಿದೆ.

ದಾಳಿಯ ವೇಳೆ ಬಾಂಗ್ಲಾ ಕರೆನ್ಸಿ ಸಹಿತ ನಗದು, ಹಲವು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.