ಕರ್ನಾಟಕ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಮಾಡಲು ಪರಶುರಾಮ ವಾಘ್ಮೋರೆ ಮುಂದಾಗಲು ಕಾರಣವೇನು…? ಹತ್ಯೆಯ ಸಂಪೂರ್ಣ ವಿವರ ಇಲ್ಲಿದೆ…

Pinterest LinkedIn Tumblr

ಬೆಂಗಳೂರು: ‘ಹಿಂದೂ ಧರ್ಮವನ್ನು ನೀನು ತುಂಬ ಪ್ರೀತಿಸುತ್ತೀಯಾ ಎಂದು ನನಗೆ ಗೊತ್ತು. ಧರ್ಮದ ಉಳಿವಿಗಾಗಿ ಈಗ ನಿನ್ನಿಂದ ಮಹತ್ವದ ಕಾರ್ಯವೊಂದು ಆಗಬೇಕಿದೆ. ಆ ಕೆಲಸ ಮಾಡಲು ಧೈರ್ಯವಿದ್ದರೆ ಎಲ್ಲ ರೀತಿಯಲ್ಲೂ ನಿನ್ನನ್ನು ಸಜ್ಜುಗೊಳಿಸುತ್ತೇನೆ….’

2017ರ ಆಗಸ್ಟ್‌ನಲ್ಲಿ ತನ್ನನ್ನು ಭೇಟಿಯಾದ ವ್ಯಕ್ತಿಯೊಬ್ಬ ಈ ಮೇಲಿನ ರೀತಿ ಹೇಳಿದ್ದಾಗಿ ಎಸ್‌ಐಟಿ ವಿಚಾರಣೆ ವೇಳೆ ಬಾಯ್ಬಿಟ್ಟಿರುವ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ ವಾಘ್ಮೋರೆ, ‘ಈಗ ಬಂಧಿತರಾಗಿರುವವರಲ್ಲಿ ಆ ವ್ಯಕ್ತಿ ಇಲ್ಲ. ಆತನನ್ನು ನೋಡಿದರೆ ಗುರುತಿಸುತ್ತೇನೆ’ ಎಂದೂ ಹೇಳಿದ್ದಾನೆ. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಜೂನ್ 11ರಂದು ವಾಘ್ಮೋರೆಯನ್ನು ಬಂಧಿಸಿದ್ದಾರೆ.

ವಾಘ್ಮೋರೆ ಹೇಳಿದ್ದೇನು: ‘ಸುಜಿತ್ ಬಿಟ್ಟು ಬೇರೆ ಯಾರ ಪರಿಚಯವೂ ನನಗಿಲ್ಲ. ಆತನ ಹೆಸರು ಹೇಳಿಕೊಂಡೇ ಒಬ್ಬಾತ ಆಗಸ್ಟ್‌ನಲ್ಲಿ ನನ್ನ ಬಳಿ ಬಂದಿದ್ದ. ಹಿಂದಿ ಭಾಷೆಯ ಜೊತೆಗೆ ಅಲ್ಪಸ್ವಲ್ಪ ಕನ್ನಡವನ್ನೂ ಮಾತನಾಡುತ್ತಿದ್ದ ಆ ವ್ಯಕ್ತಿ, ‘ಹಿಂದುತ್ವದ ವಿರುದ್ಧ ಮಾತನಾಡುತ್ತಿರುವ ಗೌರಿ ಲಂಕೇಶ್ ಅವರನ್ನು ಹೊಡೆಯಬೇಕು. ನಿನ್ನ ಕೈಲಾಗುವುದಾದರೆ ಯೋಚಿಸಿ ಎರಡು ದಿನಗಳಲ್ಲಿ ತಿಳಿಸು. ಇಲ್ಲವಾದರೆ, ಬೇರೆಯವರನ್ನು ಹುಡುಕಿಕೊಳ್ಳುತ್ತೇನೆ’ ಎಂದಿದ್ದ. ಆ ಗಡುವನ್ನು ನಾನು ಒಪ್ಪಿಕೊಂಡಿದ್ದೆ.’

‘ಗೌರಿ ಲಂಕೇಶ್ ಹಿಂದುತ್ವದ ವಿರುದ್ಧವಾಗಿ ಏನೇನು ಮಾತನಾಡಿದ್ದರು ಎಂಬುದು ಅಲ್ಲಿಯವರೆಗೆ ನನಗೆ ಗೊತ್ತಿರಲಿಲ್ಲ. ಆ ಎರಡು ದಿನಗಳಲ್ಲಿ ಯ್ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಗೌರಿ ಹೇಳಿಕೆಗಳನ್ನು ಪರಿಶೀಲಿಸಿದೆ. ಅವರ ಕೆಲವೊಂದು ಮಾತುಗಳು ನನ್ನ ರಕ್ತ ಕುದಿಯುವಂತೆ ಮಾಡಿದವು.’

‘ಎರಡು ದಿನಗಳ ಬಳಿಕ ಆ ವ್ಯಕ್ತಿ ಭೇಟಿಯಾದಾಗ ಧರ್ಮ ರಕ್ಷಣೆಗಾಗಿ ಈ ಕೆಲಸ ಮಾಡುತ್ತೇನೆ ಎಂದಿದ್ದೆ. ಹಾಗೆಯೇ, ಯಾವುದೇ ಕಾರಣಕ್ಕೂ ನನ್ನ ಭವಿಷ್ಯ ಹಾಳಾಗಬಾರದು ಎಂಬ ಮನವಿಯನ್ನೂ ಮಾಡಿದ್ದೆ. ‘ನಿನ್ನ ರಕ್ಷಣೆಯ ಹೊಣೆ ನನ್ನದು’ ಎಂದು ಅಭಯ ನೀಡಿ ಹೋಗಿದ್ದ’ ಎಂದು ವಾಘ್ಮೋರೆ ಹೇಳಿರುವುದಾಗಿ ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಏರ್‌ಗನ್‌, 500 ಸುತ್ತು: ‘ಆ ವ್ಯಕ್ತಿಯೇ ಪಿಸ್ತೂಲ್ ಬಳಕೆಯ ಬಗ್ಗೆ ನನಗೆ ಬೆಳಗಾವಿಯ ನಿರ್ಜನ ಪ್ರದೇಶದಲ್ಲಿ 15 ದಿನ ತರಬೇತಿ ಕೊಟ್ಟ. ಏರ್‌ಗನ್‌
ನಲ್ಲೇ ಸುಮಾರು 500 ಸುತ್ತು ಹಾರಿಸಿ ಒಂದು ಹಂತಕ್ಕೆ ತಯಾರಾದೆ. ಆ ನಂತರ ಆತ ಕೊಟ್ಟಿದ್ದ ದೂರವಾಣಿ ಸಂಖ್ಯೆಗೆ (ಸೀಗೇಹಳ್ಳಿಯ ಅಂಗಡಿ
ಯೊಂದರ ಕಾಯಿನ್‌ಬೂತ್) ನಿತ್ಯ ಕರೆ ಮಾಡಿ ಚರ್ಚೆ ನಡೆಸುತ್ತಿದ್ದೆ. ಅವನ ಸೂಚನೆಯಂತೆ ಸೆ.3ರಂದು ಬೆಂಗಳೂರಿಗೆ ತೆರಳಿ ಸುಂಕದಕಟ್ಟೆಯ ಮನೆಯೊಂದರಲ್ಲಿ ಉಳಿದುಕೊಂಡಿದ್ದೆ’ ಎಂದು ವಾಘ್ಮೋರೆ ಹೇಳಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಸೆ.4ರಂದೇ ಗೌರಿಯನ್ನು ಹೊಡೆಯುವುದು ನಮ್ಮ ಉದ್ದೇಶವಾಗಿತ್ತು. ಆ ದಿನ ರಾತ್ರಿ 7 ಗಂಟೆಗೆ ಒಬ್ಬಾತ (ಹೆಸರು ಗೊತ್ತಿಲ್ಲ) ನನ್ನನ್ನು ಬೈಕ್‌ನಲ್ಲಿ ಅವರ ಮನೆ ಹತ್ತಿರ ಕರೆದುಕೊಂಡು ಹೋಗಿದ್ದ. ಗೌರಿ ಕಚೇರಿಯಿಂದ ಬಂದು ಮನೆ ಸೇರಿಕೊಂಡಿದ್ದರು. ಲೈಟ್ ಹಾಗೂ ಟಿ.ವಿ ಚಾಲೂ ಇದ್ದುದರಿಂದ ಅದು ಖಾತ್ರಿಯಾಯಿತು. ಹೀಗಾಗಿ, ಆ ದಿನ ವಾಪಸಾಗಿದ್ದೆವು. ಮರುದಿನ ಸ್ವಲ್ಪ ಬೇಗನೆ ಹೋಗಿ, ಗೌರಿ ಮನೆ ಪಕ್ಕದ ಪಾರ್ಕ್‌ನಲ್ಲಿ ಅಡಗಿ ಕುಳಿತಿದ್ದೆವು. ಅವರ ಕಾರು ಬರುತ್ತಿದ್ದಂತೆಯೇ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದೆವು. ಏರ್‌ಗನ್‌ನಲ್ಲಿ ತರಬೇತಿ ಪಡೆದಿದ್ದ ನನಗೆ, ಪಿಸ್ತೂಲ್‌ನಿಂದ ಗುಂಡು ಹಾರಿಸು
ವಾಗ ಕೈ ನಡುಗುತ್ತಿತ್ತು. ಎರಡು ಅಡಿ ಅಂತರದಿಂದ ಹೊಡೆದಿದ್ದರಿಂದ ಮೂರು ಗುಂಡುಗಳು ಅವರ ದೇಹ ಹೊಕ್ಕಿದವು. ಪರಾರಿಯಾಗುವ ಧಾವಂತದಲ್ಲಿ ಸ್ವಲ್ಪ ದೂರ ಬಂದು ಹಾರಿಸಿದ ನಾಲ್ಕನೇ ಗುಂಡು, ಗುರಿ ತಪ್ಪಿ ಗೋಡೆಗೆ ಬಿದ್ದಿತು. ಐದಾರು ಸೆಕೆಂಡ್‌ಗಳಲ್ಲೇ ಎಲ್ಲವೂ ಮುಗಿದು ಹೋಯಿತು.’

‘ಅಲ್ಲಿಂದ ನನ್ನನ್ನು ಬೈಕ್‌ನಲ್ಲಿ ಕರೆದುಕೊಂಡು ಹೊರಟ ಸವಾರ, ಪಿಸ್ತೂಲ್‌ ವಾಪಸ್ ಪ‍ಡೆದುಕೊಂಡ. ನಾನು ತೊಟ್ಟಿದ್ದ ಜರ್ಕಿನ್‌ ಅನ್ನೂ ಬಿಚ್ಚಿಸಿಕೊಂಡ. ‘ಗುಡ್‌ ಜಾಬ್.. ಸ್ವಲ್ಪ ದಿನ ನಮಗೆ ಕರೆ ಮಾಡಬೇಡ. ಮುಂದಿನ ದಿನಗಳಲ್ಲಿ ನಾವೇ ನಿನ್ನನ್ನು ಸಂಪರ್ಕಿಸುತ್ತೇವೆ’ ಎಂದು ಹೇಳಿ ಹೊರಟು ಹೋದ. ಯಾರದ್ದೋ ಮಾತು ಕೇಳಿ, ಭವಿಷ್ಯ ಹಾಳು ಮಾಡಿಕೊಂಡೆ’ ಎಂದು ವಾಘ್ಮೋರೆ ಕಣ್ಣೀರು ಸುರಿಸಿದ್ದಾಗಿ ಅಧಿಕಾರಿಗಳು ಹೇಳಿದರು.

‘ಮದ್ದೂರಿನ ಕೆ.ಟಿ. ನವೀನ್‌ ಕುಮಾರ್‌ಗೂ ವಾಘ್ಮೋರೆಗೂ ಪರಿಚಯ ಇರಲಿಲ್ಲ. ನಾವು ಗೌರಿ ಹತ್ಯೆ ಪ್ರಕರಣದಲ್ಲಿ ಮೊದಲು ನವೀನ್‌ನನ್ನು ಬಂಧಿಸಿದ್ದಾಗ, ‘ಪೊಲೀಸರು ನಿಜವಾದ ಹಂತಕನನ್ನು ಹಿಡಿಯುವುದನ್ನು ಬಿಟ್ಟು, ಯಾರೋ ಅಮಾಯಕನನ್ನು ಬಂಧಿಸಿದ್ದಾರೆ’ ಎಂದು ಸ್ನೇಹಿತರ ಬಳಿ ಹೇಳಿಕೊಂಡು ನಕ್ಕಿದ್ದ. ಆದರೆ, ಸುಜಿತ್ ಅಲಿಯಾಸ್ ಪ್ರವೀಣ್‌ನ ಬಂಧನವಾದಾಗ ಆತನಿಗೆ ಭಯ ಶುರುವಾಗಿತ್ತು. ಈ ಸಂಬಂಧ ಸ್ನೇಹಿತರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದೇವೆ’ ಎಂದೂ ಮಾಹಿತಿ ನೀಡಿದರು.

‘ಬರ್ತೀರಾ ಅಂತ ಗೊತ್ತಿತ್ತು ಸಾರ್…’

‘ವಾಘ್ಮೋರೆಯನ್ನು ವಶಕ್ಕೆ ಪಡೆಯಲು ಸಿಬ್ಬಂದಿ ಜೂನ್ 11ರ ಬೆಳಿಗ್ಗೆ 7 ಗಂಟೆಗೆ ಆತನ ಮನೆ ಹತ್ತಿರ ತೆರಳಿದ್ದರು. ಸಿಬ್ಬಂದಿ ಬಾಗಿಲು ಬಡಿದಾಗ ಹೊರಬಂದ ವಾಘ್ಮೋರೆ, ‘ಸರ್.. ನೀವು ಪೊಲೀಸರು ಅಂತ ಗೊತ್ತು. ನನ್ನನ್ನು ಹುಡುಕಿಕೊಂಡು ಯಾವತ್ತಾದರೂ ಬಂದೇ ಬರ್ತೀರಾ ಎಂದೂ ಗೊತ್ತಿತ್ತು. ತಿಳಿಯದೆ ತಪ್ಪು ಮಾಡಿಬಿಟ್ಟೆ ಸರ್’ ಎಂದು ದುಃಖತಪ್ತನಾದ. ಪಾಪ ಪ್ರಜ್ಞೆ ಕಾಡುತ್ತಿರುವುದರಿಂದ ಆತ ತನಗೆ ಗೊತ್ತಿರುವ ಎಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾನೆ’ ಎಂದು ಅಧಿಕಾರಿಗಳು ವಿವರಿಸಿದರು.

126 ಕಾಯಿನ್‌ ಬೂತ್ ಬಳಕೆ!

‘ಗೌರಿ ಹತ್ಯೆಗೆ ಸಂಚು ರೂಪುಗೊಂಡಿದ್ದು ಮೇ ತಿಂಗಳಲ್ಲಿ. ಆಗಿನಿಂದ ಗೌರಿ ಹತ್ಯೆ ನಡೆದ ಅವಧಿವರೆಗೆ ಸುಜಿತ್ ರಾಜ್ಯದ 126 ಕಾಯಿನ್‌ಬೂತ್‌ಗಳಿಂದ ಮಹಾರಾಷ್ಟ್ರದ ಅಮೋಲ್‌ಕಾಳೆ ಹಾಗೂ ಅಮಿತ್ ದೇಗ್ವೇಕರ್ ಅವರನ್ನು ಸಂಪರ್ಕಿಸಿದ್ದ. ಸುಮಾರು 1.5 ಕೋಟಿ ಮೊಬೈಲ್ ಹಾಗೂ ದೂರವಾಣಿ ಸಂಖ್ಯೆಗಳ ಕರೆ ವಿವರ ಪರಿಶೀಲಿಸಿದ್ದೇವೆ’ ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿವೆ.

ವಾಘ್ಮೋರೆ ಕುಟುಂಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆರವು ಯಾಚನೆ

ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಬಂಧಿಸಿರುವ ಸಿಂದಗಿಯ ಪರಶುರಾಮ ವಾಘ್ಮೋರೆ ಕುಟುಂಬಕ್ಕೆ ನೆರವು ಕೋರಿ, ಫೇಸ್‌ಬುಕ್‌ನಲ್ಲಿ ಹಾಕಿರುವ ಪೋಸ್ಟ್‌ ಹರಿದಾಡುತ್ತಿದೆ.

ಶ್ರೀರಾಮಸೇನಾ ಕರ್ನಾಟಕ ಸಂಘಟನೆಯು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ‘ನಿಮ್ಮ ದುಡಿಮೆಯ ಒಂದು ಭಾಗ, ನಿಮ್ಮ ಅನ್ನದ ಒಂದು ತುತ್ತನ್ನು ದೇಶಭಕ್ತರಿಗೆ ಕೊಡಲಾರಿರಾ ? ಪರಶುರಾಮ ವಾಘ್ಮೋರೆ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ದಯವಿಟ್ಟು ಹಣದ ಸಹಾಯ ಮಾಡಬೇಕೆಂದು ಕಳಕಳಿಯ ವಿನಂತಿ’ ಎಂಬ ಪೋಸ್ಟ್‌ ಅನ್ನು ಹ್ಯಾಷ್‌ ಟ್ಯಾಗ್‌ನೊಂದಿಗೆ ಅಪ್‌ಲೋಡ್‌ ಮಾಡಿದೆ.

ಈ ಫೇಸ್‌ಬುಕ್‌ ಅಕೌಂಟ್‌ಗೆ 72599 41200 ಸಂಖ್ಯೆ ಲಿಂಕ್ ಆಗಿದೆ. ನೆರವಿನ ಹಣವನ್ನು ಯಾರ ಖಾತೆಗೆ ಹಾಕಬೇಕೆಂಬ ವಿವರವನ್ನೂ ನೀಡಲಾಗಿದೆ. ಈ ಪೋಸ್ಟ್‌ ಅಪ್‌ಲೋಡ್‌ ಮಾಡಿದ ಕೆಲ ಗಂಟೆಗಳಲ್ಲೇ 308 ಮಂದಿ ಲೈಕ್‌ ಮಾಡಿದ್ದರೆ, 20 ಮಂದಿ ಕಾಮೆಂಟ್‌ ಹಾಕಿದ್ದಾರೆ. 192 ಮಂದಿ ಹಂಚಿಕೊಂಡಿದ್ದಾರೆ. ಕಾಮೆಂಟ್‌ ಬಾಕ್ಸ್‌ನಲ್ಲಿ ಕೆಲವರು ಹಣ ಹಾಕಿರುವ ರಸೀದಿಯನ್ನು ಹಾಕಿದ್ದಾರೆ.

ಶ್ರೀರಾಮಸೇನೆ ಜಿಲ್ಲಾ ಅಧ್ಯಕ್ಷನಿಗೆ ಎಸ್‌ಐಟಿ ನೋಟಿಸ್‌: ಪ್ರಕರಣಕ್ಕೆ ಸಂಬಂಧಿಸಿ, ವಿಚಾರಣೆಗೆ ಹಾಜರಾಗುವಂತೆ ಶ್ರೀರಾಮಸೇನೆಯ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ, ಸಿಂದಗಿಯ ರಾಕೇಶ ಮಠ ಅವರಿಗೆ ಎಸ್‌ಐಟಿ ನೋಟಿಸ್‌ ನೀಡಿದೆ. ನೋಟಿಸ್‌ ತಲುಪಿದ್ದು, ಶನಿವಾರ ವಿಚಾರಣೆಗಾಗಿ ಹಾಜರಾಗುವುದಾಗಿ ರಾಕೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಂಧಿತ ಪರಶುರಾಮ ವಾಘ್ಮೋರೆ ತಂದೆ ಅಶೋಕ ವಾಘ್ಮೋರೆ, ಸೋದರ ಮಾವ ಅಶೋಕ ಕಾಂಬ್ಳೆ ಅವರಿಗೆ ಹಣಕಾಸಿನ ತೊಂದರೆ ಇದ್ದು, ಎಸ್‌ಐಟಿ ಸೂಚನೆ ಪ್ರಕಾರ ಅವರಿಗೆ ಸಕಾಲಕ್ಕೆ ಬೆಂಗಳೂರಿಗೆ ತೆರಳಲು ಆಗಿಲ್ಲ. ಹೀಗಾಗಿ ಅವರನ್ನೂ ಶುಕ್ರವಾರ ನನ್ನ ಜತೆಯಲ್ಲೇ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರುವೆ’ ಎಂದು ತಿಳಿಸಿದರು.

ಗೌರಿಗೆ ಗುಂಡಿಕ್ಕಿದವನ ಗುರುತಿಸಿದ ವಿದ್ಯಾರ್ಥಿ

ಬೆಂಗಳೂರು: ‘ಪರಶುರಾಮ ವಾಘ್ಮೋರೆಯೇ ಗೌರಿ ಲಂಕೇಶ್ ಅವರಿಗೆ ಗುಂಡು ಹೊಡೆದದ್ದು’ ಎಂದು ಹತ್ಯೆಯ ಪ್ರತ್ಯಕ್ಷದರ್ಶಿಗಳಾದ ಪತ್ರಿಕೋದ್ಯಮ ವಿದ್ಯಾರ್ಥಿ ಹಾಗೂ ಕೂಲಿ ಕಾರ್ಮಿಕನೊಬ್ಬ ಎಸ್‌ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.

ಗೌರಿ ಮನೆಯ ಪಕ್ಕದಲ್ಲೇ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿತ್ತು. ಅಲ್ಲಿನ ಕಾರ್ಮಿಕರು ರಾತ್ರಿ ಕಟ್ಟಡದಲ್ಲೇ ಮಲಗುತ್ತಿದ್ದರು. ಸೆ.5ರ ರಾತ್ರಿ ಹತ್ಯೆ ನಡೆದಾಗ ಕಾರ್ಮಿಕನೊಬ್ಬ ತುಂಬ ಹತ್ತಿರದಿಂದ ಹಂತಕನನ್ನು ನೋಡಿದ್ದ. ಹಾಗೆಯೇ, ಅದೇ ರಸ್ತೆಯ ಪೇಯಿಂಗ್ ಗೆಸ್ಟ್‌ ಕಟ್ಟಡವೊಂದರಲ್ಲಿ ನೆಲೆಸಿದ್ದ ರಾಯಚೂರಿನ ವಿದ್ಯಾರ್ಥಿ ಕೂಡ ಶೂಟರ್‌ನನ್ನು ನೋಡಿದ್ದ.

ಹಿಂದೆ ಅವರಿಬ್ಬರೂ ನೀಡಿದ ಮಾಹಿತಿ ಆಧರಿಸಿಯೇ ಎಸ್‌ಐಟಿ ಅಧಿಕಾರಿಗಳು ಶಂಕಿತನ ರೇಖಾಚಿತ್ರ ತಯಾರಿಸಿದ್ದರು. ಆರೋಪಿಗಳ ಬಂಧನದ ಬೆನ್ನಲ್ಲೇ ಪುನಃ ಅವರನ್ನು ಕರೆಸಿ ಗುರುತು ಪತ್ತೆ (ಐಡೆಂಟಿಫಿಕೇಷನ್ ಪರೇಡ್) ಮಾಡಿಸಿದ್ದಾರೆ.

‘ಒಬ್ಬೊಬ್ಬರೇ ಆರೋಪಿಗಳನ್ನು ತೋರಿಸಿದೆವು. ವಾಘ್ಮೋರೆಯನ್ನು ನೋಡಿದಾಗ, ‘ಈತನೇ ಗುಂಡು ಹೊಡೆದದ್ದು. ಗೌರಿ ಲಂಕೇಶ್ ಅವರ ಮನೆ ಕಡೆಯಿಂದ ಬಂದವನೇ, ಬೈಕ್‌ ಹತ್ತಿಕೊಂಡು ಹೊರಟು ಹೋದ. ಸ್ವಲ್ಪ ದೂರ ಸಾಗಿದ ಬಳಿಕ ಹಿಂದೆ ತಿರುಗಿ ನಮ್ಮನ್ನು ದುರಗುಟ್ಟಿ ನೋಡಿದ’ ಎಂದು ವಿದ್ಯಾರ್ಥಿ ಹೇಳಿದ. ಕಾರ್ಮಿಕ ಸಹ ವಾಘ್ಮೋರೆ ಕಡೆಗೇ ಬೊಟ್ಟು ತೋರಿಸಿದ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರರ ಪೈಕಿ ಒಬ್ಬಾತನ ರೇಖಾಚಿತ್ರಕ್ಕೂ, ವಾಘ್ಮೋರೆಗೂ ಶೇ 75ರಷ್ಟು ಹೋಲಿಕೆ ಕಂಡು ಬಂದಿದೆ. ಸದ್ಯದಲ್ಲೇ ಆತನನ್ನು ಗೌರಿ ಮನೆ ಹತ್ತಿರ ಕರೆದೊಯ್ದು ಘಟನೆಯ ಮರುಸೃಷ್ಟಿ ಮಾಡಿಸುತ್ತೇವೆ. ಹೆಲ್ಮೆಟ್, ಜರ್ಕಿನ್ ಹಾಕಿಸಿ ಬೈಕ್‌ನಲ್ಲಿ ಓಡಾಡಿಸುತ್ತೇವೆ. ನಂತರ ಆ ವಿಡಿಯೊವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸುತ್ತೇವೆ. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಅಸ್ಪಷ್ಟ ದೃಶ್ಯಕ್ಕೂ, ಮರುಸೃಷ್ಟಿಯ ವಿಡಿಯೊಗೂ ಹೋಲಿಕೆ ಕಂಡು ಬಂದರೇ ಅದು ಪ್ರಮುಖ ಸಾಕ್ಷ್ಯವಾಗುತ್ತದೆ’ ಎಂದು ಮಾಹಿತಿ ನೀಡಿದರು.

ಹಿಟ್‌ಲಿಸ್ಟ್ ಕೊಟ್ಟವನು ಕರ್ನಾಟಕದವನು!

‘ಈವರೆಗಿನ ತನಿಖೆಯಲ್ಲಿ ಅಮೋಲ್ ಕಾಳೆಯೇ ಸಂಚಿನ ಸೂತ್ರಧಾರ ಎಂಬುದು ಖಚಿತವಾಗಿದೆ. ನಿಹಾಲ್ ಅಲಿಯಾಸ್ ದಾದಾ ಸೇರಿದಂತೆ ಇನ್ನೂ ಮೂವರು ಆರೋಪಿಗಳು ಸಿಕ್ಕರೆ ತನಿಖೆ ಪೂರ್ಣಗೊಳ್ಳುತ್ತದೆ’ ಎಂದು ಅಧಿಕಾರಿಗಳು ಹೇಳಿದರು.

ಮಹಾರಾಷ್ಟ್ರದಲ್ಲಿದ್ದ ಅಮೋಲ್‌ಗೆ ರಾಜ್ಯದಲ್ಲಿ ಹಿಂದುತ್ವದ ವಿರುದ್ಧ ಯಾರ‍್ಯಾರು ಮಾತನಾಡುತ್ತಿದ್ದರು ಎಂಬುದು ಹೇಗೆ ಗೊತ್ತು ಎಂದು ಪ್ರಶ್ನಿಸಿದ್ದಕ್ಕೆ, ‘ಕರ್ನಾಟಕದ ವ್ಯಕ್ತಿಯೇ ಆತನಿಗೆ ‘ಹಿಟ್‌ ಲಿಸ್ಟ್’ ತಯಾರಿಸಿ ಕೊಟ್ಟಿದ್ದಾನೆ. ಸಾಹಿತಿಗಳು, ಸ್ವಾಮೀಜಿಗಳು ಸೇರಿದಂತೆ ರಾಜ್ಯದ ಹತ್ತು ಮಂದಿಯ ಹೆಸರುಗಳನ್ನು ಆತನೇ ಬರೆದುಕೊಟ್ಟಿದ್ದಾನೆ. ನಂತರ ಅಮೋಲ್ ಬೇರೆ ರಾಜ್ಯಗಳ ಇನ್ನೂ 16 ಮಂದಿ ಚಿಂತಕರ ಹೆಸರುಗಳನ್ನು ಆ ಪಟ್ಟಿಗೆ ಸೇರಿಸಿಕೊಂಡಿದ್ದಾನೆ. ಹಿಟ್‌ಲಿಸ್ಟ್ ಕೊಟ್ಟವನ ವಿವರವನ್ನು ಸದ್ಯದಲ್ಲೇ ಬಹಿರಂಗಪಡಿ ಸುತ್ತೇವೆ’ ಎಂದರು.
ಎಂ.ಸಿ.ಮಂಜುನಾಥ್(ಪ್ರಜಾವಾಣಿ)

Comments are closed.