ಅಂತರಾಷ್ಟ್ರೀಯ

2 ಲಕ್ಷ ಪೌಂಡ್ಸ್ ಹಣ ಭಾರತೀಯ ಬ್ಯಾಂಕ್ ಗಳಿಗೆ ಪಾವತಿಸಲು ವಿಜಯ್ ಮಲ್ಯಗೆ ಬ್ರಿಟನ್ ಕೋರ್ಟ್ ಆದೇಶ

Pinterest LinkedIn Tumblr

ಲಂಡನ್: ಭಾರತದ 13 ಬ್ಯಾಂಕ್ ಗಳ ಒಕ್ಕೂಟಕ್ಕೆ ಕಾನೂನು ಹೋರಾಟ ವೆಚ್ಚದ ಭಾಗವಾಗಿ 2 ಲಕ್ಷ ಪೌಂಡ್ ಹಣ ಪಾವತಿಸುವಂತೆ ಬ್ರಿಟನ್ ಹೈಕೋರ್ಟ್ ಮದ್ಯದ ದೊರೆ ವಿಜಯ್ ಮಲ್ಯಗೆ ಆದೇಶ ನೀಡಿದೆ.

ದೇಶದ ಸುಮಾರು 13 ಬ್ಯಾಂಕ್ ಗಳಿಂದ ಸುಮಾರು 7 ಸಾವಿರ ಕೋಟಿ ಹಣವನ್ನು ಸಾಲ ಪಡೆದು ಅದನ್ನು ಪಾವತಿದಸದೇ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಭಾರತದ 13 ಬ್ಯಾಂಕ್ ಗಳ ಒಕ್ಕೂಟಕ್ಕೆ ಕಾನೂನು ಹೋರಾಟ ವೆಚ್ಚದ ಭಾಗವಾಗಿ 2 ಲಕ್ಷ ಪೌಂಡ್ ಹಣ ಪಾವತಿಸುವಂತೆ ಬ್ರಿಟನ್ ಹೈಕೋರ್ಟ್ ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯ ಅವರಿಗೆ ಆದೇಶಿಸಿದೆ.

ಅಲ್ಲದೇ ಬ್ರಿಟನ್ ನಲ್ಲಿ ನಡೆದ ಕರ್ನಾಟಕದ ಸಾಲ ವಸೂಲಾತಿ ಪ್ರಾಧಿಕಾರದ ಪ್ರಕರಣದ ವಿಚಾರಣೆಯ ಖರ್ಚು ವೆಚ್ಚಗಳನ್ನು ಭರಿಸುವಂತೆಯೂ ಮಲ್ಯಗೆ ಕೋರ್ಟ್ ಸೂಚಿಸಿದೆ. ಬ್ಯಾಂಕ್ ಗಳು ನಡೆಸಿರುವ ಕಾನೂನು ಹೋರಾಟಕ್ಕೆ ಖರ್ಚು ಮಾಡಿರುವ ವೆಚ್ಚವನ್ನು ಮಲ್ಯ ಭರಿಸಬೇಕಿದ್ದು, ಕನಿಷ್ಠ 1ಕೋಟಿ 80 ಲಕ್ಷ ರೂ. ಮೊತ್ತವನ್ನು ಕಟ್ಟಲೇಬೇಕು ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ಜಡ್ಜ್ ಆ್ಯಂಡ್ರೋ ಖಡಕ್ ಆದೇಶ ನೀಡಿದ್ದಾರೆ.

ಭಾರತೀಯ ಬ್ಯಾಂಕ್ ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕಾರ್ಪೋರೇಷನ್ ಬ್ಯಾಂಕ್, ಫೆಡೆರಲ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್ ಸೀಸ್‌ಬ್ಯಾಂಕ್, ಯುನೆಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜೆಎಮ್ ಫೈನಾಷಿಯಲ್ ಆಸೆಟ್ ರಿಕನ್ ಸ್ಟ್ರಕ್ಷನ್ ಕೊ.ಪ್ರೈ ಲಿಮಿಟೆಡ್ ಈ ಬ್ಯಾಂಕ್ ಗಳು ಸಾಲವನ್ನೂ ವಸೂಲಿ ಮಾಡಬಹುದೆಂದು ಕರ್ನಾಟಕ ಹೈ ಕೋರ್ಟ್ ಆದೇಶಿಸಿತ್ತು.

ಈ ಮಧ್ಯೆ ವೆಸ್ಟ್‌ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಜಯ ಮಲ್ಯ ಹಸ್ತಾಂತರ ಪ್ರಕರಣದ ವಿಚಾರಣೆ ನಡೆಸುತ್ತಿದೆ. ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಸರ್ಕಾರ ಕೋರಿಕೊಂಡಿದ್ದು, ದೇಶದ ಪರವಾಗಿ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ವಾದ ಮಂಡನೆ ಮಾಡುತ್ತಿದೆ. ಈ ಪ್ರಕರಣ ವಿಚಾರಣೆ ಜುಲೈ 11ಕ್ಕೆ ಮುಂದೂಡಲ್ಪಟ್ಟಿದ್ದು, ಜೂನ್ 31ಕ್ಕೆ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಈ ಮಧ್ಯೆ, ಮಲ್ಯ ಪರ ವಕೀಲರು ನನ್ನ ಕಕ್ಷೀದಾರರ ಮೇಲೆ ಯಾವುದೇ ದಾಖಲೆಗಳಿಲ್ಲದೇ, ರಾಜಕೀಯ ದುರುದ್ದೇಶದಿಂದ ಸುಳ್ಳು ಆರೋಪ ಮಾಡಿದ್ದಾರೆಂದು ಮುಂಬೈನ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂಜದು ತಿಳಿದುಬಂದಿದೆ.

ಕಳೆದ ತಿಂಗಳಷ್ಟೇ ಬ್ರಿಟನ್ ಹೈಕೋರ್ಟ್ ಜಡ್ಜ್ ಆ್ಯಂಡ್ರೂ ಹೆನ್ಷಾ ಅವರು ವಿಶ್ವದಾದ್ಯಂತ ಮಲ್ಯ ಅವರಿಗೆ ಸೇರಿರುವ 1.145 ಬಿಲಿಯನ್ ಪೌಂಡ್ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ 13 ಬ್ಯಾಂಕ್ ಗಳ ಒಕ್ಕೂಟಕ್ಕೆ ಅನುಮತಿ ನೀಡುವ ಭಾರತೀಯ ನ್ಯಾಯಾಲಯಗಳ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದರು.

Comments are closed.