ರಾಷ್ಟ್ರೀಯ

ನೀಡಿದ ಭರವಸೆಯನ್ನು ನೆನಪಿಸಲು ಪ್ರಧಾನಿ ಮೋದಿ ಭೇಟಿಗಾಗಿ 1,350 ಕಿಮೀ ಪಾದಯಾತ್ರೆ ಮಾಡಿದ ಒಡಿಶಾ ಯುವಕ!

Pinterest LinkedIn Tumblr

ಆಗ್ರಾ (ಉತ್ತರ ಪ್ರದೇಶ): ಒಡಿಶಾದ 30 ವರ್ಷದ ಯುವಕನೊಬ್ಬ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಉದ್ದೇಶದಿಂದ 1,350 ಕಿಮೀ ಪಾದಯಾತ್ರೆ ಮಾಡಿದ್ದಾರೆ.

ಒಡಿಶಾದ ರೂರ್ಕೆಲಾದಿಂದ ಏಪ್ರಿಲ್ 16ರಂದು ಹೊರಟ ಮುಕ್ತಿಕಾಂತ ಬಿಸ್ವಾಲ್ ಹೀಗೆ ಸುದೀರ್ಘ ಪಾದಯಾತ್ರೆ ಮೂಲಕ ಗುರುವಾರ ಉತ್ತರ ಪ್ರದೇಶದ ಆಗ್ರಾ ತಲುಪಿದ್ದಾನೆ.

ಹಿಂದೊಮ್ಮೆ ಪ್ರಧಾನಿ ಮೋದಿ ಒಡಿಶಾಗೆ ಆಗಮಿಸಿದ್ದಾಗ ಬಿಸ್ವಾಲ್ ಹುಟ್ಟೂರಿಗೆ ಭೇಟಿ ಕೊಟ್ಟಿದ್ದರು. ಆಗ ಅವರು ಅಲ್ಲಿನ ಸಾರ್ವಜನಿಕರಿಗೆ ನೀಡಿದ್ದ ಭರವಸೆಯನ್ನು ನೆನಪಿಸುವ ಉದ್ದೇಶದಿಂದ ಯುವಕ ಈ ಸಾಹಸಕ್ಕೆ ಕೈಹಾಕಿದ್ದಾನೆ.

ವಿಗ್ರಹ ತಯಾರಕನಾದ ಬಿಸ್ವಾಲ್ ಊರಿನಲ್ಲಿರುವ ಆಸ್ಪತ್ರೆಯೊಂದನ್ನು ಅಭಿವೃದ್ದಿಪಡಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಆಭರವಸೆಯನ್ನು ಅವರಿಗೆ ನೆನಪಿಸುವ ಸಲುವಾಗಿ ಈ ಯಾತ್ರೆ ನಡೆಸಿದ್ದಾನೆ. ಇದೀಗ ಆಗ್ರಾ ತಲುಪಿರುವ ಈ ಯುವಕ ಅಲ್ಲಿನ ಬಿಸಿಯಾದ ಹವೆಯ ಕಾರಣ ಅಸ್ವಸ್ಥನಾಗಿದ್ದ. ಆತನನ್ನು ಗಮನೈಸಿದ್ದ ಕೆಲ ಸ್ಥಳೀಯರು ಅವನನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಕ್ತಿಕಾಂತ ಬಿಸ್ವಾಲ್ ಮುಂದಿನ ವಾರ ದೆಹಲಿ ತಲುಪಿ ಈ ಸಾಹಸ ಯಾತ್ರೆಯನ್ನು ಮುಗಿಸುವ ಗುರಿ ಹೊಂದಿದ್ದಾನೆ.

ರೂರ್ಕೆಲಾದ ಬ್ರಹ್ಮಣಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವುದು, ಪ್ರಧಾನಿಗಳು ತಾವು ಏಪ್ರಿಲ್ 2015ರಲ್ಲಿ ನೀಡಿದ್ದ ಭರವಸೆಯಂತೆ ಇಸ್ಲಾಮಿಕ್ ಜನರಲ್ ಆಸ್ಪತ್ರೆಯನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಾಗಿ ಮೇಲ್ದರ್ಜೆಗೆ ಏರಿಸುವುದಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿಕೊಳ್ಳುವುದಕ್ಕಾಗಿ ತಾನು ಈ ಸಾಹಸ ಯಾತ್ರೆ ಕೈಗೊಂಡದ್ದಾಗಿ ಬಿಸ್ವಾಲ್ ಹೇಳಿಕೊಂಡಿದ್ದಾನೆ.

“ನಾನು ಇದಾಗಲೇ ಒಡಿಶಾದಿಂದ ಹೊರಟು, ಬಿಹಾರ, ಜಾರ್ಖಂಡ್ ಮೂಲಕ ಇದೀಗ ಉತ್ತರ ಪ್ರದೇಶ ತಲುಪಿದ್ದೇನೆ. ಇನ್ನು ಹರಿಯಾಣ ಮೂಲಕ ದೆಹಲಿ ತಲುಪಲಿದ್ದೇನೆ. ಅಲ್ಲಿ ಪ್ರಧಾನಿಗಳನ್ನು ಭೇಟಿಯಾಗಿ ಅವರಿಗೆ ಮನವಿ ಸಲ್ಲಿಸಲಿದ್ದೇನೆ. ಒಂದು ವೇಳೆ ಪ್ರಧಾನಿ ಭೇಟಿಗೆ ಅವಕಾಶ ದೊರಕದಿದ್ದಲ್ಲಿ ದೆಹಲಿಯಲ್ಲೇ ಧರಣಿ ಕೂರಲಿದ್ದೇನೆ” ಎಂದರು.

Comments are closed.