ರಾಷ್ಟ್ರೀಯ

ಕಾಶ್ಮೀರದಲ್ಲಿ ರಂಜಾನ್ ಪ್ರಾರ್ಥನೆ ಬಳಿಕ ಭುಗಿಲೆದ್ದ ಘರ್ಷಣೆಗೆ ವ್ಯಕ್ತಿ ಬಲಿ

Pinterest LinkedIn Tumblr

ಭದ್ರತಾ ಪಡೆಗಳು ಮತ್ತು ಪ್ರತಿಭಟನಾನಿರತರ ಮಧ್ಯೆ ಘರ್ಷಣೆ ಸಂಭವಿಸಿದ ವೇಳೆ ಪ್ರತಿಭಟನಾನಿರತನೊಬ್ಬ ಧ್ವಜವೊಂದನ್ನು ಹಿಡಿದುಕೊಂಡು ಓಡುತ್ತಿರುವುದು –ರಾಯಿಟರ್ಸ್ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಶನಿವಾರ ರಂಜಾನ್ ಪ್ರಾರ್ಥನೆಯ ಬಳಿಕ ಕಲ್ಲುತೂರಾಟಗಾರರು ಮತ್ತು ಭದ್ರತಾಪಡೆಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. 10 ಜನ ಗಾಯಗೊಂಡಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ಯುವಕರು ಭದ್ರತಾ ಪಡೆಗಳತ್ತ ಕಲ್ಲುತೂರಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಅಶ್ರುವಾಯು, ರಬ್ಬರ್‌ ಗುಂಡುಗಳನ್ನು ಸಿಡಿಸಿ ಕಲ್ಲುತೂರಾಟ ನಡೆಸುತ್ತಿದ್ದವರನ್ನು ಚದುರಿಸಲು ಪ್ರಯತ್ನಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಬ್ರಕ್‌ಪೊರಾದ ಶೀರಜ್ ಅಹ್ಮದ್ ಎಂಬುವವರು ಮೃತಪಟ್ಟಿದ್ದಾರೆ. ಇನ್ನಿಬ್ಬರ ಕಣ್ಣಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಭದ್ರತಾ ಪಡೆಗಳು ಮತ್ತು ಕಲ್ಲುತೂರಾಟಗಾರರ ಮಧ್ಯೆ ನಡೆದ ಘರ್ಷಣೆಯಲ್ಲಿ ವ್ಯಕ್ತಿ ಮೃತಪಟ್ಟಿರುವುದನ್ನು ಪೊಲೀಸ್ ವಕ್ತಾರರು ಅಲ್ಲಗಳೆದಿದ್ದಾರೆ. ಗ್ರೆನೇಡ್‌ ಸ್ಫೋಟಗೊಂಡು ಅಹ್ಮದ್‌ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Comments are closed.