ಕರಾವಳಿ

ಉಡುಪಿ: ಸಚಿವ ಆರ್.ವಿ. ದೇಶಪಾಂಡೆ ಪ್ರಗತಿ ಪರಿಶೀಲನಾ ಸಭೆಗೆ ಗೈರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್!

Pinterest LinkedIn Tumblr

ಉಡುಪಿ: ಪ್ರಾಕೃತಿಕ ವಿಕೋಪಕ್ಕೆ ಪರಿಹಾರ ನೀಡಲು ಹಣದ ಕೊರತೆ ಕಾರಣವಾಗಬಾರದು. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದ್ದು, ಪರಿಹಾರ ವಿತರಿಸಲು ಅನುಕೂಲವಾಗುವಂತೆ ಕನಿಷ್ಠ 10 ಲಕ್ಷ ರೂ ಅನುದಾನದ ಮೊತ್ತವನ್ನು ತಹಸೀಲ್ದಾರ್, ಸಹಾಯಕ ಆಯುಕ್ತರ ಖಾತೆಗಳಿಗೂ ವರ್ಗಾಯಿಸಿ; ಇದರಿಂದ ಪರಿಹಾರ ನೀಡುವಿಕೆಗೆ ವೇಗ ದೊರೆಯಲಿದೆ ಎಂದು ಕಂದಾಯ ಹಾಗೂ ಕೌಶಾಲ್ಯಾಭಿವೃದ್ಧಿ ಸಚಿವರಾದ ಆರ್ ವಿ ದೇಶಪಾಂಡೆ ಹೇಳಿದರು.

ಅವರಿಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್‌ನಲ್ಲಿ ಆಯೋಜಿಸಲಾದ ಕಂದಾಯ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಈಗಾಗಲೇ ಪ್ರಾಕೃತಿಕ ವಿಕೋಪಕ್ಕೆ ತುರ್ತು ಪರಿಹಾರವನ್ನು ವಿತರಿಸಲಾಗಿದ್ದು, ಮರಗಳು ಮನೆಯ ಮೇಲೆ ಬಿದ್ದಿರುವುದನ್ನು ಸಂಪೂರ್ಣ ಹಾನಿ ಎಂದೇ ಪರಿಗಣಿಸಿ ಪರಿಹಾರ ವಿತರಿಸಿ ಎಂದ ಸಚಿವರು, ಮರ ಬಿದ್ದ ಮನೆ ಭಾಗಶ: ಹಾನಿ ಎಂದು ಹೇಗೆ ಪರಿಗಣಿಸುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಮತ್ತೊಮ್ಮೆ ಮನೆ ಹಾನಿ ಪ್ರಕರಣಗಳನ್ನು ಪರಿಶೀಲಿಸಿ ನೊಂದವರಿಗೆ ಪರಿಹಾರ ವಿತರಿಸಿ ಎಂದರು. ಪರಿಹಾರ ವಿತರಣೆಯಲ್ಲಿ ಪರಿಹಾರ ನೀಡುವಾಗ ಉದಾರ ಮನೋಭಾವ ತೋರಿ ಎಂದು ಹೇಳಿದರು.

ಪ್ರಾಕೃತಿಕ ವಿಕೋಪ ಸಂಭವಿಸಿದಾಗ ನೊಂದವರಿಂದ ಅರ್ಜಿಗಳನ್ನು ನಿರೀಕ್ಷಿಸದೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ನೊಂದವರಿಗೆ ಸಾಂತ್ವನದ ಭರವಸೆಯನ್ನು ನೀಡುವಂತಾಗಬೇಕು. ಈ ವೇಳೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಂಪರ್ಕ ಸಾಧಿಸಿ; ಅವರ ಅಭಿಪ್ರಾಯವನ್ನು ಪರಿಗಣಿಸಿ; ಇದರಿಂದ ಉತ್ತಮ ಆಡಳಿತ ಸಾಧ್ಯವಾಗಲಿದೆ ಎಂದರು.

ಕುಡಿಯುವ ನೀರು, ಪಶುಸಂಗೋಪನಾ ಇಲಾಖೆ, ತೋಟಗಾರಿಕೆ, ಕೃಷಿ, ಮೆಸ್ಕಾಂ, ಅರಣ್ಯ,ಲೋಕೋಪಯೋಗಿ, ಆರೋಗ್ಯ ಇಲಾಖೆಗಳ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದ ಸಚಿವರು, ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದರು. ಜೂನ್ ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಅಧಿಕಾರಿಗಳು ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡಕೂಡದು ಎಂದು ಆದೇಶಿಸಿದರು. ವಾರಕ್ಕೊಮ್ಮೆ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯನ್ನು ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಕರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಸಭೆಗೆ ಹಾಜರಾಗದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶೋಕಾಸ್ ನೋಟೀಸು ನೀಡಲು ಸೂಚಿಸಿದ ಸಚಿವರು, ಪ್ರಗತಿ ಪರಿಶೀಲನಾ ಸಭೆಗೆ ಗೈರುಹಾಜರಾಗುವುದನ್ನು ಸಹಿಸುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಗಮನಸೆಳೆದರು. ಜಿಲ್ಲೆಯಲ್ಲಿ ರೋಗ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ, ಮುಂಜಾಗರೂಕತೆ ಬಗ್ಗೆ ಡಿ ಹೆಚ್ ಒ ಅವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು , ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಜಿಲ್ಲಾಡಳಿತ ಕೈಗೊಂಡ ಕ್ರಮಗಳನ್ನು ಪಿಪಿಟಿ ಮೂಲಕ ವಿವರಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ರಘುಪತಿ ಭಟ್ ಅವರು ಸಾಮಾನ್ಯ ಜನರಿಗೆ ಭೂಪರಿವರ್ತನೆಗೆ ಬಹಳ ತೊಂದರೆಯಾಗಿದೆ ಎಂದು ಗಮನಸೆಳೆದರಲ್ಲದೇ, ಪ್ರಾಕೃತಿಕ ವಿಕೋಪ ಸಂಬಂದ ಜಿಲ್ಲೆಯಲ್ಲಿ ಸಂಭವಿಸಿದ ನಷ್ಟಕ್ಕೆ ವಿಶೇಷ ಅನುದಾನ ನೀಡಲು ಸಚಿವರನ್ನು ಕೋರಿದರು..

ಕಾಪು ಶಾಸಕ ಲಾಲಾಜಿ ಮೆಂಡನ್ ಅವರು ಕಾಪು ತಾಲೂಕಿನ ಸಮಸ್ಯೆಗಳ ಬಗ್ಗ ಗಮನಸೆಳೆದರು. ಶಾಸಕ ಪ್ರತಾಪ್ ಚಂದ್ರ ಶೆಟ್ಟಿ ಅವರು, ಕುಂದಾಪುರ ವಿಭಾಗದಲ್ಲಿ ಮೆಸ್ಕಾಂ ತುರ್ತು ಸ್ಪಂದನೆ ಮಾಡಿಲ್ಲ ಎಂದು ಸಚಿವರ ಗಮನಸೆಳೆದರಲ್ಲದೆ, ತೋಟಗಾರಿಕೆ ಬೆಳೆ, ರಬ್ಬರ್ ಪ್ಲಾಂಟೇಷನ್ ನಾಶ ನಷ್ಟದ ಬಗ್ಗೆ ಶೀಘ್ರ ಪರಿಹಾರದ ಚೆಕ್ ವಿತರಿಸಲು ಹೇಳಿದರು.

ತೋಟಗಾರಿಕೆಗೆ ಸಂಬಂಧಿಸಿದಂತೆ ಕುಂದಾಪುರದಲ್ಲಿ ಹೆಚ್ಚಿನ ನಷ್ಟವಾಗಿದೆ.ತಮ್ಮದೇ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದೆ ನಾಲ್ಕು ದಿನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷ ಶೀಲಾ ಶೆಟ್ಟಿ, ಸದಸ್ಯ ಜನಾರ್ಧನ ತೋನ್ಸೆ, ಸಿ‌ಇ‌ಒ ಶಿವಾನಂದ ಕಾಪಶಿ , ಸಹಾಯಕ ಆಯುಕ್ತ ಭೂಬಾಲನ್, ಅವರನ್ನೊಳಗೊಂಡಂತೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು.

Comments are closed.