ಕರಾವಳಿ

ಮಂಗಳೂರು ವಿಮಾನ ದುರಂತಕ್ಕೆ ಎಂಟು ವರ್ಷ : ದುರ್ಘಟನೆಯಲ್ಲಿ ಮಡಿದವರಿಗೆ ಭಾವಪೂರ್ಣ ಶ್ರದ್ಧಾಂಜಲಿ

Pinterest LinkedIn Tumblr

ಮಂಗಳೂರು, ಮೇ 22: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬಜ್ಪೆಯ ಕೆಂಜಾರಿನ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರಂದು ಸಂಭವಿಸಿದ ವಿಮಾನ ದುರಂತಕ್ಕೆ ಇಂದು 8 ವರ್ಷ. ದುರಂತದ ವಾರ್ಷಿಕ ಸ್ಮರಣಾರ್ಥ ವಿಮಾನ ದುರಂತದಲ್ಲಿ ಮಡಿದವರಿಗೆ ಶೃದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಮಂಗಳವಾರ ನಡೆಯಿತು.

ದ.ಕ.ಜಿಲ್ಲಾಡಳಿತ, ನವಮಂಗಳೂರು ಬಂದರು ಮಂಡಳಿ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಕೂಳೂರು ಸೇತುವೆ ಪಕ್ಕದ ಕೂಳೂರು- ತಣ್ಣೀರುಬಾವಿ ರಸ್ತೆಯಲ್ಲಿರುವ ವಿಮಾನ ದುರಂತ ಸ್ಮಾರಕ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಿಮಾನ ದುರ್ಘಟನೆಯಲ್ಲಿ ಮಡಿದವರಿಗೆ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ವೈಶಾಲಿ, ದ.ಕ. ಜಿಪಂ ಸಿಇಒ ಡಾ.ಎಂ.ಆರ್.ರವಿ, ಮಂಗಳೂರು ಸಹಾಯಕ ಆಯುಕ್ತ ಮಹೇಶ್ ಕರ್ಜಗಿ, ದ.ಕ. ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ಮುರಳಿ ಮೋಹನ್ ಚೂಂತಾರ್, ಡಿಸಿಪಿ ಉಮಾ ಪ್ರಶಾಂತ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಎನ್‌ಎಂಪಿಟಿ ಅಧ್ಯಕ್ಷ ಸುರೇಶ್ ಪಿ.ಶಿರ್ವಾಡ್ಕರ್, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಭಾರ ನಿರ್ದೇಶಕ ಅಬ್ರಹಾಂ ಕೊಶಿ, ಮೀರಾ ಕುಸೂರ್, ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಮಿತಿಯ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಎಡಪದವು ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದರು.

ಮಂಗಳೂರು ವಿಮಾನ ದುರಂತಕ್ಕೆ ಎಂಟು ವರ್ಷ :

2010ರ ಮೇ 22ರಂದು ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕೇಜಾರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಸಂಭವಿಸಿದ ದುರಂತದಲ್ಲಿ 158 ಜನರು ಮೃತಪಟ್ಟಿದ್ದರು.

ವಿಮಾನ ದುರಂತಕ್ಕೆ ಎಂಟು ವರ್ಷ ತುಂಬಿದರೂ……..

ಮಂಗಳೂರು: ಸಮುದ್ರಾಚೆಗಿನ ಊರುಗಳಿಂದ ತಮ್ಮ ಸ್ವಗ್ರಾಮಕ್ಕೆ ತೆರಳಲು ಆಕಾಶದೆತ್ತರದ ಆಶಾಭಾವನೆಯನ್ನು ಹೊತ್ತು ವಿಮಾನದಲ್ಲಿ ಬರುತ್ತಿರುವಾಗ ಇನ್ನೇನು ತಾವು ತಮ್ಮ ನೆಲವನ್ನು ಮುಟ್ಟುತ್ತಿದ್ದೇವೆ ಎನ್ನುವಷ್ಟರಲ್ಲಿ ದೇಶ ಕಂಡು ಕೇಳಯರಿದ ಘಟನೆಯೊಂದು ನಡೆದು ಹೋಗಿತ್ತು. ಅದು ಇಂದಿಗೆ ಎಂಟು ವರ್ಷ ತುಂಬಿದ್ದರೂ ನೋವು ಮಾತ್ರ ಹಾಗೇ ಉಳಿದಿದೆ.

ಹೌದು, 2010ರ ಮೇ 22ರಂದು ನಡೆದಿದ್ದ ಬಜ್ಪೆ ಭೀಕರ ವಿಮಾನ ಅಪಘಾತ ನಡೆದು ಇಂದಿಗೆ 8 ವರ್ಷವಾಗಿದೆ. ಅಂದು ಬೆಳಗ್ಗೆ 6.20ಕ್ಕೆ ದುಬೈಯಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲ್ಯಾಂಡ್ ಆಗುವ ವೇಳೆ ನಿರ್ದಿಷ್ಟ ಮಿತಿಗಿಂತ ಕೆಲ ಮೀಟರ್ ದೂರದಲ್ಲಿಳಿದ ಪರಿಣಾಮ ಪೈಲೆಟ್ ನಿಯಂತ್ರಣ ತಪ್ಪಿ ಕೆಂಜಾರಿನ ಗುಡ್ಡದಿಂದ ಕೆಳ ಜಾರಿ ಅಗ್ನಿ ಆವರಿಸಿ ಬಹುದೊಡ್ಡ ದುರಂತ ಸಂಭವಿಸಿತು.

ಹುತಾತ್ಮರ ಸ್ಮರಣೆಗಾಗಿ ಸ್ಮಾರಕ ಉದ್ಯಾನವನ :

ವಿಮಾನ ದುರಂತದಲ್ಲಿ ಮಡಿದವರ ನೆನಪಿಗಾಗಿ ಏರ್ ಇಂಡಿಯಾ ಘಟನಾ ಸ್ಥಳದಲ್ಲಿ ಫಲಕ ಹಾಕಿ ಸ್ಮಾರಕ ನಿರ್ಮಿಸಿದರೂ ಅದು ಖಾಸಗಿ ಜಾಗವಾದ ಕಾರಣ ಕಿಡಿಗೇಡಿಗಳು ಅದನ್ನು ಕೆಡವಿದ್ದರು. ವಾರಸುದಾರರು ಪತ್ತೆಯಾಗದ ಕೆಲ ಮೃತದೇಹಗಳನ್ನು ಕೂಳೂರು ತಣ್ಣೀರುಬಾವಿ ರಸ್ತೆಯ ನದಿಯ ಬದಿಯಲ್ಲಿ ದಫನ ಮಾಡಲಾಗಿತ್ತು. ಅಲ್ಲಿ ಜಿಲ್ಲಾಡಳಿತದ ನಿರ್ದೇಶನದನ್ವಯ ಇದೀಗ ಹುತಾತ್ಮರ ಸ್ಮರಣೆಗಾಗಿ ಸ್ಮಾರಕ ಉದ್ಯಾನವನ ನಿರ್ಮಿಸಲಾಗಿದೆ.

ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಲು ಕೂಳೂರಿನ ಸ್ಮಾರಕ ಉದ್ಯಾನವನದಲ್ಲಿ ಸಚಿವರು, ಜನ ಪ್ರತಿನಿಧಿಗಳು, ( ಕಾರಣಂತರದಿಂದ ಈ ಬಾರಿ ಜನಪ್ರತಿನಿಧಿಗಳ ಉಪಸ್ಥಿತಿಯಿಲ್ಲ) ಜಿಲ್ಲಾಡಳಿತ, ಏರ್ ಇಂಡಿಯಾದ ಅಧಿಕಾರಿಗಳು ಪ್ರತೀ ವರ್ಷ ಸೇರುತ್ತಾರೆ. ಮೌನ ಪ್ರಾರ್ಥನೆ ಸಲ್ಲಿಸಿ, ಹೂಗುಚ್ಛ ಸಮರ್ಪಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಆದರೆ ಮಡಿದವರ ನೆನಪಿನಲ್ಲಿ ಅವರ ಮನೆಯವರು ಹಾಕುವ ಕಣ್ಣೀರು ಮಾತ್ರ ಬತ್ತಿಹೋಗಲ್ಲ.

Comments are closed.