ಕರಾವಳಿ

ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಶೇಷ ಪೂಜೆ : ಡಾ.ಹೆಗ್ಗಡೆ ಜೊತೆ ಚರ್ಚೆ

Pinterest LinkedIn Tumblr

ಮಂಗಳವಾರ, ಮೇ 22: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿರುವ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಬೆಳಗ್ಗೆ ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದರು.

ಬೆಳಗ್ಗೆ 9:05ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳದ ವಸಂತ ಮಹಲ್ ಹೆಲಿಪ್ಯಾಡಿನಲ್ಲಿ ಬಂದಿಳಿದ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಪಕ್ಷದ ಜಿಲ್ಲಾ ನಾಯಕರು, ಕಾರ್ಯಕರ್ತರು ಸ್ವಾಗತಿಸಿದರು. ಈ ವೇಳೆ ದ.ಕ. ಜಿಲ್ಲಾ ಎಸ್ಪಿ ಡಾ.ಬಿ.ಆರ್.ರವೀಕಾಂತೇ ಗೌಡ ಮತ್ತಿತರರು ಹಾಜರಿದ್ದರು.

ಅವರು ಅಲ್ಲಿಂದ ಕಾರಿನಲ್ಲಿ ಶ್ರೀ ಕ್ಷೇತ್ರಕ್ಕೆ ಧರ್ಮಸ್ಥಳಕ್ಕೆ ತೆರಳಿದ ಕುಮಾರ ಸ್ವಾಮಿಯವರನ್ನು ದೇವಳದ ವತಿಯಿಂದ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಬಳಿಕ ಅವರು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಳಕ್ಕೆ ಭೇಟಿ ನೀಡಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಡಾ.ವೀರೇಂದ್ರ ಹೆಗ್ಗಡೆ ಜೊತೆ ಚರ್ಚೆ

ಪತ್ನಿ ಅನಿತಾ ಕುಮಾರಸ್ವಾಮಿ ಜೊತೆಗೆ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಯಲ್ಲಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ ಬಳಿಕ ಕುಮಾರಸ್ವಾಮಿ ಅವರು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೊತೆ ಚರ್ಚೆ ನಡೆಸಿದರು. ಇದೇ ಸಂದರ್ಭ ವೀರೇಂದ್ರ ಹೆಗ್ಗಡೆ ಅವರಿಗೆ ಹೂ ಹಾರ ಹಾಕಿ ಫಲಪುಷ್ಪ ನೀಡಿ ಕುಮಾರಸ್ವಾಮಿ ದಂಪತಿ ಗೌರವಿಸಿದರು.

ನಾಳೆ ಅದ್ಧೂರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ನಿಯೋಜಿತ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಐದು ವರ್ಷಗಳ ಸುಭದ್ರ ಸರ್ಕಾರ ನಡೆಸಲು ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಹಿರಿಯರನ್ನು ಭೇಟಿ ಮಾಡುತ್ತಿದ್ದೇನೆ. ನಾವು ಕಾಂಗ್ರೆಸ್ ಜತೆ ಸರ್ಕಾರ ರಚನೆ ಮಾಡುತ್ತಿರವುದನ್ನು ಅಪವಿತ್ರ ಮೈತ್ರಿ ಎಂದು ಅನೇಕರು ಟೀಕೆ ಮಾಡಿದ್ದಾರೆ. ಆದರೆ, ಇಲ್ಲಿ ಪವಿತ್ರ ಅಪವಿತ್ರದ ಮಾತು ಬರುವುದಿಲ್ಲ. ಶಾಸಕರ ಸಂಖ್ಯಾಬಲ ಇದ್ದರೆ ಮಾತ್ರ ಸರ್ಕಾರ ಉಳಿಯುತ್ತದೆ ಎಂದು ಪ್ರತಿಕ್ರಿಯಿಸಿದರು.ನಾನು ಕರಾವಳಿ ಭಾಗದಲ್ಲಿ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ. ಇದಕ್ಕೆ ಇಲ್ಲಿನ ಯುವಕರ ಸಹಕಾರ ಬೇಕು. ಏನೇ ಸಮಸ್ಯೆ ಇದ್ದರೂ ನನಗೆ ಕರೆ ಮಾಡಿ ಎಂದು ಮನವಿ ಮಾಡಿಕೊಂಡರು.

ಶೃಂಗೇರಿಗೆ ಭೇಟಿ :

ಧರ್ಮಸ್ಥಳದಿಂದ ಶೃಂಗೇರಿಗೆ ಭೇಟಿ ನೀಡಿದ ಕುಮಾರಸ್ವಾಮಿ ಅಲ್ಲಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಕದ ಜೊತೆ ಮಾತನಾಡಿ ದೇವರ ದರ್ಶನ , ಅಶೀರ್ವಾದ ಪಡೆಯಲು ಬಂದಿರುವೆ. ದೇವರೆ ಅನುಗ್ರಹ ಇದ್ದರೆ ಜನರು ನೆಮ್ಮದಿಯಿಂದ ಇರ್ತಾರೆ. ನಾಡಿನಲ್ಲಿ ಒಳ್ಳೆಯ ಮಳೆಯಾಗಲಿ, ಬೆಳೆಯಾಗಲಿ ಎಂದು ಪ್ರಾರ್ಥಿಸಲು ಬಂದಿರುವುದಾಗಿ ಹೇಳಿದರು.

Comments are closed.